ಬೆಂಗಳೂರು,ಏ.1-ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗಾಗಿ ಆಗ್ರಹಿಸಿ ತಮಿಳುನಾಡು ಏ.5 ರಂದು ಕರೆದಿರುವ ಬಂದ್ ವಿರೋಧಿಸಿ ಕನ್ನಡ ಒಕ್ಕೂಟ ಇಂದು ಪ್ರತಿಭಟನೆ ನಡೆಸಿ ತಮಿಳುನಾಡು ಭೂತದಹನ ಮಾಡಿತು.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿಂದು ತಮಿಳುನಾಡಿನ ಭೂತದಹನ ಮಾಡಿ ಯಾವುದೇ ಕಾರಣಕ್ಕೂ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬಾರದು ಎಂದು ಆಗ್ರಹಿಸಿದರು.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡು ಡಿಎಂಕೆ ಮುಖಂಡ ಸ್ಟಾಲಿನ್ ಇದೇ 5 ರಂದು ಬಂದ್ಗೆ ಕರೆ ಕೊಟ್ಟಿದ್ದಾರೆ. ಇದನ್ನು ವಿರೋಧಿಸಿ ಏ.5 ರಂದು ಕನ್ನಡ ಒಕ್ಕೂಟದ ವತಿಯಿಂದ ಅತ್ತಿಬೆಲೆ ಸಮೀಪ ಗಡಿಬಂದ್ ಮಾಡುತ್ತೇವೆ. ಈ ಮೂಲಕ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದರು.
ಸ್ಟಾಲಿನ್ ಅವರು ಈ ದೇಶ ಒಡೆಯುವ ಮಾತುಗಳನ್ನಾಡಿದ್ದಾರೆ. ದಕ್ಷಿಣ ಭಾರತದ ಪ್ರತ್ಯೇಕತೆಯ ವಿಷಯ ಪ್ರಸ್ತಾಪಿಸಿದ್ದಾರೆ ಅವರನ್ನು ಬಂಧಿಸಬೇಕೆಂದು ತಮಿಳು ನಟರಾದ ರಜನೀಕಾಂತ್, ಕಮಲ್ಹಾಸನ್ ಅವರು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಪರವಾಗಿ ಮಾತನಾಡಿದ್ದಾರೆ. ಅವರ ಚಿತ್ರಗಳನ್ನು ಹಾಗೂ ಕರ್ನಾಟಕಕ್ಕೆ ಬರುವುದನ್ನು ಬಹಿಷ್ಕರಿಸಬೇಕೆಂದು ವಾಟಾಳ್ ತಿಳಿಸಿದರು.