ಬೆಂಗಳೂರು,ಏ.1-ಕಲಬುರ್ಗಿ ಜಿಲ್ಲೆಯ ಪ್ರಭಾವಿ ನಾಯಕ ಮಾಲೀಕಯ್ಯ ಗುತ್ತೇದಾರ್ ಪಕ್ಷ ಬಿಟ್ಟ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಅತೃಪ್ತ ಶಾಸಕರನ್ನು ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ನಿಂದ ವಲಸೆ ಬರುವ ಶಾಸಕರಿಗೆ ಹೆಚ್ಚಿನ ಮಣೆಹಾಕುವಲ್ಲಿ ಈವರೆಗೂ ಹೆಚ್ಚು ಸಮಯ ಮೀಸಲಿಟ್ಟ ಕಾಂಗ್ರೆಸ್ ನಾಯಕರಿಗೆ ಮಾಲೀಕಯ್ಯ ಗುತ್ತೇದಾರ್ ಮತ್ತು ಎ.ಎಸ್.ಪಾಟೀಲ್ ನಡಹಳ್ಳಿ ಅವರ ನಿರ್ಧಾರ ದೊಡ್ಡ ಪೆಟ್ಟು ನೀಡಿದೆ.
ಅದರ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಶಾಸಕರಾದ ಅಂಬರೀಶ್, ಎ.ಬಿ.ಮಾಲಕರೆಡ್ಡಿ, ಶಿವಾನಂದಪಾಟೀಲ್, ಡಿ.ಬಿ.ಇನಾಮ್ದಾರ್, ರಾಜಶೇಖರ್ಪಾಟೀಲ್, ಬಾಬೂರಾವ್ ಚಿಂಚನಸೂರ್ ಸೇರಿದಂತೆ ಮತ್ತಿತರರನ್ನು ಸೆಳೆಯಲು ಅನ್ಯ ಪಕ್ಷಗಳು ಮುಂದಾಗಿದ್ದವು. ಇದರಿಂದ ಮಂಡ್ಯ, ಮೈಸೂರು, ಕಲಬುರ್ಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ವಿಜಯಪುರ ಭಾಗದಲ್ಲಿ ಪಕ್ಷಕ್ಕೆ ಭಾರೀ ಹೊಡೆತ ಬೀಳುವ ಮುನ್ಸೂಚನೆ ಇತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದಾಗಿ ಅತೃಪ್ತರಿಗೆ ಫೆÇೀನ್ ಮಾಡಿ ಮನವೊಲಿಸುವ ಯತ್ನ ನಡೆಸಿದ್ದಾರೆ.
ರೆಬೆಲ್ ಮನೆಗೆ ಸಿಎಂ ಭೇಟಿ:
ಮಂಡ್ಯದಿಂದ ಟಿಕೆಟ್ ಸಿಗುವುದಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ ಮುನಿಸಿಕೊಂಡಿರುವ ಹಿರಿಯ ನಟ ಹಾಗೂ ಶಾಸಕ ಅಂಬರೀಶ್ ಅವರನ್ನು ಮನವೊಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಖುದ್ದಾಗಿ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ.
ಅಂಬರೀಶ್ ಅವರ ಮನವೊಲಿಸಲು ಸಿದ್ದರಾಮಯ್ಯ ಕರೆ ಮಾಡಿದಾಗ ಮನೆಗೆ ಊಟಕ್ಕೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಿದ್ದರಾಮಯ್ಯ ಅವರು ಅಂಬರೀಶ್ ಮನೆಗೆ ಭೇಟಿ ನೀಡುತ್ತಿದ್ದಾರೆ.
ಅಂಬರೀಶ್ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲು ಬಹಳಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂಬ ಅಸಮಾಧಾನಗಳು ವ್ಯಾಪಕವಾಗಿದ್ದು, ಅವರ ಬದಲಿಗೆ ಬೇರೆಯವರಿಗೆ ಟಿಕೆಟ್ ನೀಡುವಂತೆ ಒತ್ತಡಗಳಿವೆ.
ಆದರೆ ಅಂಬರೀಶ್ ಬೆಂಬಲಿಗರು ಮಂಡ್ಯದಿಂದ ಬಂದು ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. ಅಂಬರೀಶ್ ಅವರಿಗೆ ಟಿಕೆಟ್ ನೀಡಬೇಕೆಂದು ಮುಖಂಡರ ಮೇಲೆ ಒತ್ತಡ ಹೇರಿದ್ದಾರೆ. ಹಲವು ಸುತ್ತಿನ ಸಭೆ ನಡೆಸಿರುವ ಅಂಬರೀಶ್ ಅವರು ನಾಳೆ ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಎಂಬ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದು, ಕುತೂಹಲ ಕೆರಳಿಸಿದೆ. ಈ ನಡುವೆ ಅಂಬರೀಶ್ರ ಮನವೊಲಿಸಲು ಸಿಎಂ ಮುಂದಾಗಿದ್ದಾರೆ.
ಮತ್ತೊಂದು ಕಡೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಶಾಸಕರ ಬಂಡಾಯ ತೀವ್ರಗೊಂಡಿದೆ.
ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಇತರೆ ಕಾಂಗ್ರೆಸ್ ನಾಯಕರನ್ನು ಬೆಳೆಯಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಅಫ್ಜಲ್ಪುರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಇತ್ತೀಚೆಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯತ್ತ ಮುಖಮಾಡಿದ್ದಾರೆ.
ಅದರ ಬೆನ್ನಲ್ಲೇ ಯಾದಗಿರಿ ಜಿಲ್ಲೆಯ ಮತ್ತೊಬ್ಬ ಪ್ರಭಾವಿ ನಾಯಕ ಮಾಲಕ ರೆಡ್ಡಿ ಸಕ್ರಿಯ ರಾಜಕಾರಣದಿಂದ ದೂರ ಉಳಿದು ತಟಸ್ಥರಾಗಿರಲು ನಿರ್ಧರಿಸಿದ್ದರು.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದಪಾಟೀಲ್ ಕಳೆದ ಬಾರಿ ಸುಮಾರು 20 ಸಾವಿರ ಮತಗಳ ಅಂತರದಿಂದ ಬಿಜೆಪಿಯನ್ನು ಸೋಲಿಸಿದ್ದರು. ಆದರೆ, ತಮ್ಮ ಹಿರಿತನಕ್ಕೆ ಕಾಂಗ್ರೆಸ್ನಲ್ಲಿ ಗೌರವ ಸಿಗಲಿಲ್ಲ ಎಂದು ಅಸಮಾಧಾನಗೊಂಡು ಪಕ್ಷ ತೊರೆಯಲು ಮುಂದಾಗಿದ್ದರು. ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ದುಡುಕಿ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿ ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಇವರ ಜತೆಗೆ ಡಾ.ಮಕಬುಲ್ಬಾಗವಾನ ಕೂಡ ಕಾಂಗ್ರೆಸ್ ಮೇಲೆ ಅಸಮಾಧಾನಗೊಂಡು ಅನ್ಯ ಪಕ್ಷಗಳತ್ತ ಮುಖ ಮಾಡಿದ್ದರು. ಈಗಾಗಲೇ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಪಕ್ಷ ತೊರೆದಿದ್ದರಿಂದ ಆ ಭಾಗದಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ.
ಅದರ ಬೆನ್ನಲ್ಲೇ ಮತ್ತಿಬ್ಬರು ಶಾಸಕರು ಕಾಂಗ್ರೆಸ್ ಕೈಬಿಟ್ಟರೆ ತುಂಬಲಾರದ ನಷ್ಟವುಂಟಾಗಲಿದೆ ಎಂದು ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಇನ್ನು ಬೀದರ್ ಜಿಲ್ಲೆಯ ಹುಮ್ನಾಬಾದ್ ಕ್ಷೇತ್ರದ ರಾಜಶೇಖರ್ಪಾಟೀಲ್ ಪಕ್ಷ ತೊರೆದು ಜೆಡಿಎಸ್ನತ್ತ ಮುಖಮಾಡಿ ಈಗ ಮತ್ತೊಂದು ಪಕ್ಷದತ್ತ ಗಮನ ಹರಿಸಿದ್ದಾರೆ. ಅವರನ್ನು ಕಾಂಗ್ರೆಸ್ನಲ್ಲೇ ಉಳಿಸಿಕೊಳ್ಳಲು ಕಸರತ್ತು ಆರಂಭವಾಗಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಕ್ಷೇತ್ರದ ಶಾಸಕ ಡಿ.ಬಿ.ಇನಾಮ್ದಾರ್ಅವರನ್ನು ಸೆಳೆಯಲು ಕೆಲ ಪಕ್ಷಗಳು ಕಸರತ್ತು ನಡೆಸಿದ್ದು, ಅದರ ಮಾಹಿತಿ ಪಡೆದ ಮುಖ್ಯಮಂತ್ರಿಯವರು ಕೂಡಲೇ ಇನಾಮ್ದಾರ್ ಅವರ ಅಭಿಪ್ರಾಯ ಪಡೆಯಲು ನಾಯಕರನ್ನು ರವಾನಿಸಿದ್ದಾರೆ ಎಂದು ಹೇಳಲಾಗಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಸಚಿವರಾದ ಎಂ.ಕೃಷ್ಣಪ್ಪ ಮತ್ತು ಪ್ರಮೋದ್ ಮಧ್ವರಾಜ್ ಅವರನ್ನು ಸೆಳೆಯಲು ಬಿಜೆಪಿ ಹರಸಾಹಸ ನಡೆಸಿತ್ತು. ಆದರೆ, ಕಾಂಗ್ರೆಸ್ನ ನೈತಿಕ ಬೆಂಬಲದಿಂದಾಗಿ ಈ ಇಬ್ಬರು ಸಚಿವರು ಪಕ್ಷದಲ್ಲೇ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.