ಜಾತ್ಯತೀತ ಪದಕ್ಕೆ ಈ ಮಠದಲ್ಲಿ ನಿಜವಾದ ಅರ್ಥವಿದೆ

 

 

 

 

 

 

 

 

 

  ಸದ್ದು ಗದ್ದಲವಿರದ ಸಾಧನೆಯಲ್ಲಿ ಗದ್ದುಗೆಯೇರಿದೆ॥

ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ॥
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ॥

 ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ॥

     

ಎಂದು ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಕುರಿತಾಗಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಹೇಳಿದ ಈ ಸಾಲುಗಳು ನಿಜಕ್ಕೂ ಶ್ರೀಗಳ ಚಿತ್ರಣವನ್ನು ನಾಲ್ಕೇ ಸಾಲುಗಳಲ್ಲಿ ತೆರೆದಿಡುತ್ತದೆ.      

ಧರ್ಮಾಧಾರಿತ ರಾಜಕಾರಣದ ವೇದಿಕೆ ಯಾಗಿ ಕೆಲವು ಮಠಗಳು ರೂಪುಗೊಂಡಿರುವ ಈ ಕಾಲಘಟ್ಟದಲ್ಲಿ, ಸನ್ಯಾಸ ಧರ್ಮವನ್ನೇ ಅಣಕಿಸುವಂತೆ ಹೀನ ಕೃತ್ಯಗಳನ್ನು ಮಾಡುವ ಢೋಂಗಿ ಸನ್ಯಾಸಿಗಳು ಹೆಚ್ಚಾಗುತ್ತಿರುವ ಈ ದಿನಮಾನಗಳಲ್ಲಿ, ಕೆಲವು ಮಠ-ಮಂದಿರ ಗಳು ಮೂಲ ಉದ್ದೇಶ ಹಾಗೂ ಧ್ಯೇಯ ಗಳನ್ನೇ ಕಳೆದುಕೊಳ್ಳುತ್ತಿರುವ ಈ ಹಂತದಲ್ಲಿ ಆದರ್ಶ ಮಠಾಧೀಶ ಎಂದರೆ ಹೇಗಿರಬೇಕು, ಸನ್ಯಾಸಿಯ ನಿಜವಾದ ಧ್ಯೇಯ, ಗುರಿ, ಕಾರ್ಯಗಳೇನು. ಸಮಾಜಕ್ಕೆ ಅವರ ಕೊಡುಗೆ ಏನಾಗಬೇಕು ಎಂಬುದನ್ನು ನಿರೂಪಿಸಿ ತೋರಿಸುತ್ತಿರುವ ಕೆಲವೇ ಕೆಲವು ಮಠಾಧೀಶರ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುವವರು ತುಮ ಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು.

ಸಿದ್ಧಗಂಗಾ ಸ್ವಾಮಿಗಳು ಎಂದೇ ಖ್ಯಾತರಾಗಿರುವ ಶ್ರೀಗಳ 111ನೆಯ ಜನ್ಮ ದಿನಾಚರಣೆ ಇಂದು ವಿಜೃಂಭಣೆಯಿಂದ ನಡೆಯು ತ್ತಿದೆ. ನಿಜಕ್ಕೂ ಇದು ಮಠದ ಭಕ್ತ ರಿಗೆ ಮಾತ್ರವಲ್ಲ ಇಡಿಯ ಹಿಂದೂ ಧರ್ಮ ಮಾತ್ರವೇಕೆ ಭಾರತವೇ ಹೆಮ್ಮೆ ಪಡುವಂತಹ ದಿನ.

ಬಸವಣ್ಣನವರ ಶ್ರೇಷ್ಠ ಸಿದ್ಧಾಂತ ಗಳನ್ನು ತಮ್ಮ ಸ್ವಾರ್ಥಕ್ಕಾಗಿ, ಬಸವಣ್ಣನವರ ಹೆಸರನ್ನು ತಮ್ಮ ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುವ ಕೆಲವು ಸಮಾಜಘಾತುಕರು ಇರುವ ಇಂತಹ ಪರಿಸ್ಥಿತಿಯಲ್ಲಿ ಬಸವಕ್ರಾಂತಿ ತತ್ವ ಸಿದ್ಧಾಂತಗಳು ಹಾಗೂ ಶರಣ ಸಂಪ್ರದಾಯದ ಅಂಶಗಳನ್ನು ಸಮಾಜದ ಏಳ್ಗೆಗಾಗಿ ಅಕ್ಷರಶಃ ಅಳವಡಿಸಿಕೊಂಡ ಮಹಾನ್ ಸಂತರು ಇವರು.

ಶ್ರೀಗಳ ಕುರಿತು

1908ರ ಎಪ್ರಿಲ್ 1ರಂದು ಮಾಗಡಿ ತಾಲೂಪಿನ ವೀರಾ ಪುರದ ಹೊನ್ನೇಗೌಡ- ಗಂಗಮ್ಮ ನವರ 13ನೆಯ ಪುತ್ರರಾಗಿ ಜನಿ ಸಿದ ಮಗುವಿಗೆ ಶಿವಣ್ಣ ಎಂದು ಹೆಸರಿಡಲಾಗಿತ್ತು. ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿಕ್ಷಣವನ್ನು ಆರಂಭಿಸಿದ ಇವರ ಲೌಖಿಕಿ ಶಿಕ್ಷಣದಲ್ಲಿ ಮೆಟ್ರಿಕ್ಯು ಲೇಶನ್ ಮುಗಿಸಿದರು. 1927ರಲ್ಲಿ ಸಿದ್ದಗಂಗಾ ಮಠದ ಅಂದಿನ ಪೀಠಾಧಿಪತಿಗಳಾಗಿದ್ದ ಉದ್ಧಾನ ಶಿವಯೋಗಿಯವರ ಒಡನಾಟಕ್ಕೆ ಬಂದರು.

ಆನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿ ನಲ್ಲಿ ಪದವಿ ವಿದ್ಯಾಭ್ಯಾಸ ನಡೆ ಯುತ್ತಿದ್ದರೂ ಮಠದ ಒಡನಾಟ ದಲ್ಲೇ ಇದ್ದ ಇವರನ್ನು, 1930ರಲ್ಲಿ ಉದ್ದಾನ ಶ್ರೀಗಳಿಂದ ಉತ್ತರಾಧಿ ಕಾರಿ ಎಂದು ಘೋಷಿತರಾಗಿ ಶಿವಕುಮಾರ ಸ್ವಾಮೀಜಿಯಾಗುತ್ತಾರೆ.

ಅಂದಿನಿಂದ ಇವರ ನಿಜವಾದ ಜೀವನ ಆರಂಭವಾಗುತ್ತದೆ. ಉದ್ಧಾನ ಶ್ರೀಗಳು ಕಾಲವಾದ ನಂತರ ಮಠದ ಉಸ್ತುವಾರಿ ವಹಿಸಿಕೊಂಡ ಶಿವ ಕುಮಾರ ಸ್ವಾಮೀಜಿಯವರು, ಮಠದ ಏಳ್ಗೆಗಾಗಿ ಜೀವನವನ್ನೇ ಮುಡಿಪಾಗಿಡುತ್ತಾರೆ. ಧರ್ಮ, ಶಾಸ್ತ್ರ, ಸಂಪ್ರದಾಯ ಹಾಗೂ ಆಚರಣೆಗಳಿಗೆ ಎಷ್ಟು ಮಹತ್ವ ನೀಡುತ್ತಿದ್ದರೋ, ಅಷ್ಟೇ ಮಹತ್ವ ವನ್ನು ಮಠದಲ್ಲಿನ ವಿದ್ಯಾರ್ಥಿಗಳ ಜೀವನ ರೂಪಿಸಲು ನೀಡಿದ್ದು ಶ್ರೀಗಳ ಮಹತ್ಕಾರ್ಯಗಳಲ್ಲಿ ಒಂದು.

ಮಾದರಿ ಮಠಾಧೀಶರು

ಪ್ರತಿದಿನವೂ 3 ಗಂಟೆಗೇ ನಿದ್ದೆಯಿಂದೇಳುವ ಸ್ವಾಮೀಜಿ, ಒಂದು ಗಂಟೆಗೂ ಅಧಿಕ ಕಾಲ ಪೂಜೆ ನೆರವೇರಿಸಿ, ಆನಂತರ ಮುಂಜಾನೆ ಆರೂವರೆ ಗಂಟೆಗೆ ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರು ಬೇಳೆ-ತೊವೆ, ಸಿಹಿ ಹಾಗೂ ಖಾರ ಚಟ್ನಿ, ಎರಡು ತುಂಡು ಸೇಬು, ಬೇವಿನ-ಚಕ್ಕೆ ಕಷಾಯ ಸೇವನೆ ಮಾಡುತ್ತಾರೆ.

ಬದಲಾದ ಇಂದಿನ ಕಾಲಮಾನ ದಲ್ಲಿ ಯುವಕರಲ್ಲಿ ಉತ್ಸಾಹಗಳ ಕಡಿಮೆಯಾಗಿ ಜೀವನ ಶೈಲಿ ಯನ್ನೇ ಬದಲಾವಣೆ ಮಾಡಿಕೊಂಡು ಆನಂತರ ದೈಹಿಕ ಹಾಗೂ ಮಾನಸಿಕ ಅನಾರೋಗ್ಯಕ್ಕೆ ಸ್ವತಃ ಕಾರಣರಾ ಗುವವರೇ ಹೆಚ್ಚು. ಇಂತಹ ವರ್ಗದ ಯುವಕರಿಗೆ 110 ವರ್ಷದ ಸ್ವಾಮೀಜಿಯವರ ಈ ದೈನಂದಿನ ಶಿಸ್ತು ನಿಜಕ್ಕೂ ಆದರ್ಶಪ್ರಾಯ.

ಸಿದ್ಧಗಂಗಾ ಶ್ರೀಗಳ ಮಹತ್ಕಾರ್ಯ ಗಳಲ್ಲಿ ಅತ್ಯಂತ ಪ್ರಮುಖವಾ ದುದು ವಿದ್ಯಾದಾನ. ಯಾವುದೇ ರೀತಿಯ ಜಾತಿ, ಧರ್ಮದ ಬೇಧಬಾವವಿಲ್ಲದೇ ಎಲ್ಲ ವರ್ಗದ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿರುವ ಶ್ರೀಗಳ ನಿಜಕ್ಕೂ ಇಡಿಯ ಜಗತ್ತಿಗೇ ಮಾದರಿ. ತಾವು ಅಳವಡಿಸಿ ಕೊಂಡಿರುವ ಶಿಸ್ತನ್ನು ತಮ್ಮಲ್ಲಿ ಕಲಿಯುವ ಮಕ್ಕಳಿಗೂ ಶ್ರೀಗಳು ಕಲಿಸುತ್ತಿದ್ದಾರೆ. ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಮಕ್ಕಳಿಂದ ನಡೆಯುವ ಪ್ರಾರ್ಥನೆ ಯಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಾರೆ, ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪದವಿ ಅಭ್ಯಾಸದಲ್ಲಿರುವ ತರುಣರವರೆಗೂ ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳು ವುದನ್ನು ನೋಡುವುದೇ ಸಂತಸ. ಮಠದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಮುಂದಿ ರುವ ವಿಶಾಲವಾದ ಬಯಲಿನಲ್ಲಿ ಸಾವಿರಾರು ಜನ ಒಟ್ಟಿಗೆ ಪ್ರಾರ್ಥನೆ ಮಾಡುವುದನ್ನು ನೋಡುವುದೂ ಇಲ್ಲಿನ ಒಂದು ಪ್ರಮುಖ ಆಕರ್ಷಣೆ.

ಒಬ್ಬ ಆದರ್ಶ ಮಠಾಧೀಶ ಹೇಗಿರಬೇಕು ಎಂದು ಜಗತ್ತಿಗೆ ಸಾರುತ್ತಿರುವ ದೇಶದ ಕೆಲವೇ ಕೆಲವು ಮಠಾಧೀಶರಲ್ಲಿ ಒಬ್ಬರಾದ ಸಿದ್ದಗಂಗಾ ಶ್ರೀಗಳು ಧರ್ಮದ ಹಾದಿಯಲ್ಲಿ ನಡೆಯುತ್ತಾ, ಸತ್ಯ ವನ್ನು ಎತ್ತಿ ಹಿಡಿಯುತ್ತಾ, ಸಮಾಜದ ಏಳ್ಗೆಯನ್ನೇ ಉಸಿರಾಗಿಸಿಕೊಂಡು, ಅನ್ನದಾನ-ವಿದ್ಯಾದಾನಗಳೇ ಸರ್ವ ಶ್ರೇಷ್ಠ ಎಂದು ನುಡಿದು, ಜೀವನದ ಸಂದೇಶವನ್ನು ಸಾರುತ್ತಾ, ಇವೆಲ್ಲದರೊಂದಿಗೆ ದೇಶಭಕ್ತಿಯನ್ನೂ ಬೆಳೆಸುತ್ತಾ ದಣಿವರಿದೇ ದುಡಿಯುತ್ತಿರುವ ಇವರ ವ್ಯಕ್ತಿತ್ವ ಇಡಿಯ ಜಗತ್ತಿಗೆ ಪ್ರೇರಕ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಚೈತನ್ಯದ ಚಿಲುಮೆ

ಮುಂಜಾನೆಯಿಂದ ತಡರಾತ್ರಿಯವರೆಗೂ ವಿವಿಧ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಶ್ರೀಗಳು ಚೈತನ್ಯದ ಚಿಲುಮೆ ಎಂದರೆ ಅತಿಶಯೋಕ್ತಿಯಲ್ಲ. ದಣಿವರಿಯದೆ ಕಾರ್ಯನಿರತರಾಗಿರುವ ಸ್ವಾಮಿಗಳು, ಪ್ರತಿನಿತ್ಯ ಪತ್ರಿಕೆಗಳನ್ನು ಓದುವುದು, ಭಕ್ತರಿಗೆ ದರ್ಶನ ನೀಡುವುದು, ಗಣ್ಯರ ಭೇಟಿ, ಮಾಡುವ ಜೊತೆಯಲ್ಲಿ ಮಠದ ಆಡಳಿತಕ್ಕೆ ಸಂಬಂಧಿಸಿದ ಕಡತಗಳನ್ನು ಸ್ವತಃ ಪರಿಶೀಲನೆ ನಡೆಸುವುದರ ಜೊತೆಯಲ್ಲಿ ಮಠಕ್ಕೆ ಸಂಬಂಧಿಸಿದ ಪ್ರತಿಯೊಂದು ಕೆಲಸದಲ್ಲೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೊಡಗಿಸಿಕೊಳ್ಳುವುದು ನಿಜಕ್ಕೂ
ಅದ್ಭುತ ಎನಿಸುತ್ತದೆ.

 

ಶ್ರೀನುಡಿ

ಧರ್ಮ ಅಧರ್ಮಗಳಲ್ಲಿನ ನಂಬುಗೆಗಿಂತ, ಅವರವರ ಭಕುತಿಗೆ ತಕ್ಕಂತೆ ಅವರವರ ಭಾವಕ್ಕೆ ತಕ್ಕಂತೆ ಅವರವರ ಭಾವಕ್ಕೆ ತಕ್ಕಂತೆ ನಡೆದುಕೊಳ್ಳುವುದನ್ನೇ ಧರ್ಮವಾಗಿಸಿಕೊಂಡಿದ್ದೇವೆ.

•ಸಾಲಕ್ಕೆ ಬಡ್ಡಿ ಎನ್ನುವುದು ಕೃತಜ್ಞತೆಗಾಗಿ ಕೊಡುವ ಧನವಾಗಿರಬೇಕೇ ಹೊರತು, ಬಡವರ ರಕ್ತ ಹೀರುವ ಜಿಗಣೆಯಾಗಬಾರದು.
•ಒಂದು ಅಗುಳು ಅನ್ನದ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ, ಆದರಿಂದ ಪ್ರಸಾದ ಸೇವಿಸುವಾಗ ವ್ಯರ್ಥ ಮಾಡುವುದು ಶ್ರೇಯಸ್ಕರವಲ್ಲ.

•ದೇಹಕ್ಕೆ ಹಸಿವಾದರೆ ಪ್ರಸಾದದ ಅಗತ್ಯವುಂಟು, ಹಾಗೆಯೇ ಮನಸ್ಸಿನ ಹಸಿವಿಗೆ ಪ್ರಾರ್ಥನೆಯ ಅಗತ್ಯವುಂಟು. ಪ್ರಸಾದ ಸೇವನೆಯಲ್ಲೂ, ಪ್ರಾರ್ಥನೆಯಲ್ಲೂ ಏಕಾಗ್ರತೆ ಅತ್ಯವಶ್ಯಕ.

•ಪ್ರಪಂಚದಲ್ಲಿ ಧರ್ಮ ಯಾವುದು ಎಂದರೆ ಒಂದೇ ಧರ್ಮ, ಅದು ಮನುಷ್ಯ ಧರ್ಮ. ಕತ್ತಲಲ್ಲಿ ಇರುವವನನ್ನು ಬೆಳಕಿಗೆ ಕರೆಯುವುದು ಧರ್ಮ, ಅನ್ನವಿಲ್ಲದವನಿಗೆ ಅನ್ನವಿಕ್ಕುವುದು ಧರ್ಮ, ಬಾಯಾರಿದವನಿಗೆ ನೀರುಣಿಸುವುದು ಧರ್ಮ, ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದು ಧರ್ಮವೇ ಪರಂತು ಧರ್ಮ ಗುಡಿ ಗುಂಡಾರಗಳಲ್ಲಿ ನೆಲೆಸಿಲ್ಲ.

•ಜೀವನದಲ್ಲಿ ಒಳ್ಳೆಯ ಭವಿಷ್ಯ ಉಂಟಾಗಬೇಕಾದರೆ, ಗೌರವವಾದ ಬಾಳ್ವಿಕೆ ಉಂಟಾಗಬೇಕಾದರೆ ಕಾಲವನ್ನು ವ್ಯರ್ಥ ಮಾಡದೆ ಜ್ಞಾನ ಸಂಪಾದನೆ ಮಾಡಬೇಕು.

ಜಾತ್ಯತೀತ ಸಿದ್ಧಾಂತಕ್ಕಿಲ್ಲಿ ನಿಜವಾದ ಅರ್ಥವಿದೆ

ಪ್ರಪಂಚದ ಧಾರ್ಮಿಕ ಕ್ಷೇತ್ರದಲ್ಲಿ ಭಾರತ ಹಾಗೂ ಹಿಂದೂ ಧರ್ಮಕ್ಕೆ ಅದರದ್ದೇ ಆದ ವಿಶೇಷ ಗೌರವವಿದೆ. ಇಂತಹ ಲೋಕದಲ್ಲಿ ಅನನ್ಯವಾಗಿ ಮಿನುಗುತ್ತಿರುವ ಸಿದ್ದಗಂಗಾ ಮಠ ಹಾಗೂ ಶಿವಕುಮಾರ ಸ್ವಾಮಿಗಳು ದೇಶದಲ್ಲಿ ಜಾತ್ಯತೀತ ಸಿದ್ಧಾಂತಕ್ಕೆ ನಿಜವಾದ ಅರ್ಥ ಕಲ್ಪಿಸಿದ್ದಾರೆ.

ವಿದ್ಯೆಯೇ ಜೀವನ ಎಂಬುದನ್ನು ಸಾರಿ ಹೇಳುತ್ತಿರುವ ಶ್ರೀಗಳು, ಯಾವುದೇ ರೀತಿಯ ಜಾತಿ, ಧರ್ಮದ ಬೇಧ ಮಾಡದೆ ತಮ್ಮನ್ನು ಅರಸಿ ಬರುವ ಎಲ್ಲ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ವಸತಿಯೂ ನೀಡಿ ಜಾತ್ಯತೀತ ಪದಕ್ಕೆ ಒಂದು ಅರ್ಥ ಬರುವಂತೆ ಮಾಡಿದ್ದಾರೆ. ಇದರೊಂದಿಗೆ ದಿನನಿತ್ಯ ಸಾವಿರಾರು ಭಕ್ತರು ಹಾಗೂ ದರ್ಶನಾರ್ಥಿಗಳಿಗೆ ಮೂರು ಹೊತ್ತು ಅನ್ನದಾನ ಮಾಡುವ ಮೂಲಕ ತ್ರಿವಿಧ ದಾಸೋಹಿ ಎನಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ