
ನವದೆಹಲಿ,ಮಾ.31-ಕಾವೇರಿ ನದಿನೀರು ನಿರ್ವಹಣಾ ಮಂಡಳಿ ರಚನೆ ಕುರಿತಂತೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಉಂಟಾಗಿರುವ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸ್ಪಷ್ಟೀಕರಣ ಕೋರಿ ಕೇಂದ್ರ ಸರ್ಕಾರ ಇಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಆರು ವಾರಗಳಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ
ರಚನೆ ಮಾಡಬೇಕೆಂದು ಸುಪ್ರೀಂಕೋರ್ಟ್ ಮುಖ್ಯ ನಾಯ್ಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ತ್ರಿ ಸದಸ್ಯತ್ವ ಪೀಠ ಆದೇಶ ನೀಡಿತ್ತು. ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಆರು ವಾರದೊಳಗೆ ಸ್ಕೀಮ್ ರಚನೆ ಮಾಡಬೇಕೆಂದು ಸೂಚಿಸಿತ್ತು. ಈ ಬಗ್ಗೆ ಸ್ಪಷ್ಟನೆ ಕೋರಿರುವ ಕೇಂದ್ರ ಸರ್ಕಾರ ಆದೇಶದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಮಾಡಬೇಕೆ ಇಲ್ಲವೇ ಸ್ಕೀಮ್ ರಚನೆ ಮಾಡಬೇಕೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಮನವಿ ಮಾಡಿದೆ.
ಇಂದು ಅರ್ಟಾನಿ ಜನರಲ್ ಮೂಲಕ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಕೇಂದ್ರ ಸರ್ಕಾರ ಇದೊಂದು ಗಂಭೀರವಾದ ವಿಷಯ. ಎರಡು ರಾಜ್ಯಗಳ ನಡುವೆ ಪರ-ವಿರೋಧ ವ್ಯಕ್ತವಾಗಿದೆ. ಹಾಗಾಗಿ ನ್ಯಾಯಾಲಯ ತುರ್ತಾಗಿ ಅರ್ಜಿಯನ್ನು ಕೈಗೆತ್ತಿಕೊಳ್ಳುವಂತೆ ಕೋರಲಾಗಿದೆ. ಕೇಂದ್ರ ಸರ್ಕಾರದ ಮನವಿ ಮೇರೆಗೆ ಸುಪ್ರೀಂಕೋರ್ಟ್ ಅರ್ಜಿಯನ್ನು ಸೋಮವಾರ ಕೈಗೆತ್ತಿಕೊಳ್ಳುವ ಸಂಭವವಿದೆ.
ಕೇಂದ್ರದ ವಿರುದ್ದ ನ್ಯಾಯಾಂಗ ನಿಂದನೆ:
ನ್ಯಾಯಾಲಯದ ಆದೇಶದಂತೆ ಕಾವೇರಿ ನದಿನೀರು ನಿರ್ವಹಣಾ ಮಂಡಳಿ ರಚನೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ಇಂದು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಯು.ಪಿ.ಸಿಂಗ್ ವಿರುದ್ಧ ತಮಿಳುನಾಡು ಸರ್ಕಾರ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ ಕೇಂದ್ರ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ನಿನ್ನೆ ಕೇಂದ್ರ ಸರ್ಕಾರ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬೇಕಿತ್ತು. ಆದರೆ ಇದಕ್ಕೆ ಕರ್ನಾಟಕ, ಪಾಂಡಿಚೇರಿ ಹಾಗೂ ಕೇರಳ ಸರ್ಕಾರ ವಿರೋಧ ವ್ಯಕ್ತಪಡಿಸಿವೆ.
ನಿರ್ವಹಣಾ ಮಂಡಳಿ ರಚನೆ ಮಾಡುವ ಮುನ್ನ ಕಾವೇರಿ ನದಿ ನೀರು ಪಾತ್ರದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ನಂತರ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇಂದ್ರಕ್ಕೆ ಒತ್ತಾಯಿಸಿದ್ದರು.
ಇತ್ತೀಚೆಗೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಇದೇ ಅಭಿಪ್ರಾಯ ವ್ಯಕ್ತವಾಗಿತ್ತು. ಯಾವುದೇ ಕಾರಣಕ್ಕೂ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬಾರದೆಂದು ಕೇಂದ್ರಕ್ಕೆ ಆಗ್ರಹಿಸಿದೆ. ಆದರೆ ತಮಿಳುನಾಡು ಸರ್ಕಾರ ಮಾತ್ರ ನಿರ್ವಹಣಾ ಮಂಡಳಿ ರಚನೆ ಮಾಡಬೇಕೆಂದು ಕೇಂದ್ರದ ಮೇಲೆ ಒತ್ತಡ ಹಾಕಿದೆ. ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠ ಆರು ವಾರದೊಳಗೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಆದೇಶ ನೀಡಿತ್ತು.