ವಿದೇಶಕ್ಕೆ ಗೋಮಾಂಸ ರಫ್ತನ್ನು ನಿಷೇಧಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಚಿವ ರಾಮಲಿಂಗಾರೆಡ್ಡಿ ಸವಾಲು

ಬೆಂಗಳೂರು, ಮಾ.31- ಗೋಹತ್ಯೆ ನಿಷೇಧಿಸುವುದಾಗಿ ಚುನಾವಣೆ ವೇಳೆ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವ ಬದಲು ವಿದೇಶಕ್ಕೆ ಗೋಮಾಂಸ ರಫ್ತನ್ನು ನಿಷೇಧಿಸಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸವಾಲು ಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವುಗಳಷ್ಟೇ ಅಲ್ಲ ಭೂಮಿ ಮೇಲಿರುವ 14 ಲಕ್ಷ ಜೀವರಾಶಿಯಲ್ಲಿ ಯಾವ ಪ್ರಾಣಿಯ ಹತ್ಯೆಯೂ ಆಗಬಾರದು. ವೈಯಕ್ತಿಕವಾಗಿ ಪ್ರಾಣಿ ಹತ್ಯೆಗೆ ನಮ್ಮ ವಿರೋಧವಿದೆ ಎಂದು ಹೇಳಿದರು.

ಅಮಿತ್ ಶಾ ಕರ್ನಾಟಕ ಪ್ರವಾಸದ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧಿಸುವುದಾಗಿ ಹೇಳಿದ್ದಾರೆ. ಹಾಗಿದ್ದರೆ ಬಿಜೆಪಿ ಆಡಳಿತ ಇರುವ ಈಶಾನ್ಯ ರಾಜ್ಯಗಳು, ಗೋವಾ, ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಏಕೆ ಗೋಹತ್ಯೆಯನ್ನು ನಿಷೇಧಿಸಿಲ್ಲ ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲು ಗೋಮಾಂಸ ರಫ್ತಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿತ್ತು. ಆಸ್ಟ್ರೇಲಿಯ ಎರಡನೇ ಸ್ಥಾನದಲ್ಲಿತ್ತು. ಬಿಜೆಪಿ ಸರ್ಕಾರದಲ್ಲಿ ಆಸ್ಟ್ರೇಲಿಯವನ್ನೂ ಹಿಂದಿಕ್ಕಿ ಭಾರತ ಎರಡನೇ ಸ್ಥಾನಕ್ಕೆ ಬಂದಿದೆ. ಮೊದಲನೇ ಸ್ಥಾನದಲ್ಲಿರುವ ಬ್ರೆಜಿಲ್‍ನನ್ನು ಹಿಂದಿಕ್ಕಲು ಪೈಪೆÇೀಟಿ ನಡೆಸುತ್ತಿದೆ. ಬಿಜೆಪಿ ಆಡಳಿತದಲ್ಲಿರುವ ಮಹಾರಾಷ್ಟ್ರ, ಉತ್ತರಪ್ರದೇಶದಿಂದ ವಿಯಟ್ನಾಮ್ ದೇಶಕ್ಕೆ ಅತಿ ಹೆಚ್ಚು ಗೋ ಮಾಂಸ ರಫ್ತಾಗುತ್ತಿದೆ. ರಫ್ತು ಕಂಪೆನಿಗಳಲ್ಲಿ ಬಿಜೆಪಿ ನಾಯಕರೇ ಪಾಲುದಾರರಾಗಿದ್ದಾರೆ ಎಂದು ದೂರಿದರು.

ಬಿಜೆಪಿ ಆಡಳಿತ ಇರುವ ಗೋವಾದಲ್ಲಿ ಪ್ರತಿ ದಿನ 30ರಿಂದ 50 ಟನ್ ಗೋಮಾಂಸ ಬಳಕೆಯಾಗುತ್ತಿದೆ. ಈಶಾನ್ಯ ರಾಜ್ಯದಲ್ಲಿ ಇಂದಿಗೂ ಗೋಮಾಂಸವನ್ನು ಆಹಾರವನ್ನಾಗಿ ಬಳಕೆ ಮಾಡಲಾಗುತ್ತಿದೆ. ಕೇಂದ್ರ ಸಚಿವ ಕಿರಣ್ ಬಿಜೀಜು ನಾನು ಗೋಮಾಂಸ ತಿನ್ನುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಗೋಮಾಂಸ ರಫ್ತಿನಿಂದ ಕೇಂದ್ರ ಸರ್ಕಾರ 2015-16ನೇ ಸಾಲಿನಲ್ಲಿ 26,682 ಕೋಟಿ ರೂ. ಆದಾಯ ಗಳಿಸಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಡಾಟಾ ಸಂಸ್ಥೆಯ ಮಾಹಿತಿ ಪ್ರಕಾರ ಮೋದಿ ಆಡಳಿತದಲ್ಲಿ ಗೋಮಾಂಸ ರಫ್ತು ಶೇ.14ರಷ್ಟು ಹೆಚ್ಚಿದೆ. ರಾಜಕೀಯ ಕಾರಣಕ್ಕಾಗಿ ಅಮಿತ್ ಶಾ ಇಲ್ಲಿಗೆ ಬಂದು ಗೋಮಾಂಸ ನಿಷೇಧಿಸುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ತರಾಟೆಗೆ ತೆಗೆದುಕೊಂಡರು.

ಅಮಿತ್ ಶಾ ಚುನಾವಣೆ ವ್ಯಾಪಾರಿ:
ಅಮಿತ್ ಶಾ ಹೇಳಿಕೇಳಿ ವ್ಯಾಪಾರಿ ಕುಟುಂಬದಿಂದ ಬಂದವರು. ಈ ಹಿಂದೆ ಹೊಳಲ್ಕೆರೆಗೆ ಬಂದಾಗ ನಾನು ಕರ್ನಾಟಕಕ್ಕೆ ವ್ಯಾಪಾರಕ್ಕಾಗಿ ಬಂದಿದ್ದೇನೆ ಎಂದು ಹೇಳಿದ್ದರು. ಯಲಹಂಕದಲ್ಲಿ ನಡೆದ ಬಿಜೆಪಿ ಸಭೆಯೊಂದರಲ್ಲಿ ಚುನಾವಣೆಯಲ್ಲಿ ಬಂಡವಾಳ ಹಾಕಿ ಲಾಭ ತೆಗೆಯುತ್ತೇವೆ. ನೀವೂ ಕೂಡ ಹಾಗೆ ಮಾಡಬೇಕೆಂದು ಅಮಿತ್ ಶಾ ಪಾಠ ಮಾಡಿದರು. ಕರ್ನಾಟಕ ಮಾರಾಟಕ್ಕಿಲ್ಲ. ಇಲ್ಲಿ ಮತದಾರರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದರು.

ಅಮಿತ್ ಶಾ ಈಸ್ಟ್ ಇಂಡಿಯಾ ಕಂಪೆನಿ ಏಜೆಂಟರಂತೆ ಕರ್ನಾಟಕದಲ್ಲಿ ವ್ಯಾಪಾರದ ರಾಜಕಾರಣ ಮಾಡಲು ಹೋದರೆ ಜನತೆ ತಕ್ಕ ಪಾಠ ಕಲಿಸುತ್ತಾರೆ. ರಾಜಕೀಯ ನಾಟಕಗಳನ್ನು ಬಿಟ್ಟು ನೇರವಾಗಿ ಚುನಾವಣೆ ಎದುರಿಸಿ ಜನಾದೇಶ ಪಡೆದುಕೊಳ್ಳಿ ಎಂದು ರೆಡ್ಡಿ ಸವಾಲು ಹಾಕಿದರು.

ಈ ಮೊದಲು ಅಮಿತ್ ಶಾ ಹಲವಾರು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಆಗೆಲ್ಲಾ ಮಠ ಮತ್ತು ಮಹಾರಾಜರು ನೆನಪಾಗಲಿಲ್ಲ. ಚುನಾವಣೆ ಹತ್ತಿರಬರುತ್ತಿದ್ದಂತೆ ಮಠಗಳು ನೆನಪಾಗುತ್ತಿವೆ. ಇಂತಹ ರಾಜಕಾರಣವನ್ನು ಬಿಜೆಪಿ ಮಾಡುವುದರಿಂದ ಯಾವುದೇ ಲಾಭವಾಗುವುದಿಲ್ಲ. ಜನರು ವಿಶ್ವಾಸಗಳಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಸರ್ಕಾರ ರಾಜ್ಯಕ್ಕೆ ಸ್ವಾಭಿಮಾನ ಆಡಳಿತ ನೀಡಿದೆ. ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಮೋದಿ, ಅಮಿತ್ ಶಾ ಎಷ್ಟೇ ಬಾರಿ ಕರ್ನಾಟಕಕ್ಕೆ ಬಂದರೂ ಯಾವುದೇ ಬದಲಾವಣೆ ಕಾಣದೇ ಇರುವುದು ಬಿಜೆಪಿ ನಾಯಕರಿಗೆ ನಿರಾಶೆ ಮೂಡಿಸಿದೆ ಎಂದು ರಾಮಲಿಂಗಾರೆಡ್ಡಿ ಲೇವಡಿ ಮಾಡಿದರು.
ದೇಶದಲ್ಲೇ ಕಾಂಗ್ರೆಸ್ ಪುನರ್‍ಸ್ಥಾಪನೆಗೊಳ್ಳಲಿದೆ. ಕರ್ನಾಟಕದಿಂದಲೇ ದಕ್ಷಿಣ ಭಾರತದ ಚೈತ್ರಯಾತ್ರೆ ಆರಂಭವಾಗಲಿದೆ. ವ್ಯಾಪಾರಿ ಮನೋಭಾವದ ಬಿಜೆಪಿಯವರನ್ನು ಜನ ತಿರಸ್ಕರಿಸಲಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ