ಕನ್ನಡ ಭಾಷೆಯ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ಸರ್ಕಾರ ಉತ್ತೇಜನ ನೀಡುತ್ತಿಲ್ಲ: ನಿವೃತ್ತ ಐಎಎಸ್ ಮತ್ತು ಕನ್ನಡ ಗಣಕ ಉಚಿತ ತರಬೇತಿ ಕೇಂದ್ರದ ಅಧ್ಯಕ್ಷ ಎಲ್.ಡಬ್ಲ್ಯು.ಗಂಗಾಧರಪ್ಪ

ಬೆಂಗಳೂರು, ಮಾ.31-ಸರ್ಕಾರವು ಕನ್ನಡ ಭಾಷೆಯ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ಉತ್ತೇಜನ ನೀಡುತ್ತಿಲ್ಲ ಎಂದು ನಿವೃತ್ತ ಐಎಎಸ್ ಮತ್ತು ಕನ್ನಡ ಗಣಕ ಉಚಿತ ತರಬೇತಿ ಕೇಂದ್ರದ ಅಧ್ಯಕ್ಷ ಎಲ್.ಡಬ್ಲ್ಯು.ಗಂಗಾಧರಪ್ಪ ವಿಷಾದ ವ್ಯಕ್ತಪಡಿಸಿದರು.

ಮಲ್ಲೇಶ್ವರಂನ ಗಾಂಧಿ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಕನ್ನಡ ಗಣಕ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕನ್ನಡ ಭಾಷೆಯ ಪರವಾಗಿ ದುಡಿಯುತ್ತಿರುವ ಸಂಸ್ಥೆಗಳಿಗೆ ಅನುದಾನ ನೀಡುತ್ತಿಲ್ಲ. ಪ್ರಯೋಜನವೇ ಇಲ್ಲದ ಬೇರೆ ಬೇರೆ ಕಾರ್ಯಕ್ರಮಗಳಿಗೆ ಲಕ್ಷಗಟ್ಟಲೆ ಹಣವನ್ನು ನೀಡುತ್ತಿದೆ.
ಉದಾಹರಣೆಗೆ ಎಸ್ಸಿ-ಎಸ್ಟಿ ಮಕ್ಕಳಿಗೆ ಹಲವು ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡದೆ , ಇಂದಿರಾ ಕ್ಯಾಂಟೀನ್‍ನಂತಹ ಯೋಜನೆಯನ್ನು ಅನುಷ್ಠಾನಗೊಳಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 8 ಕೋಟಿ ರೂ. ಅನುದಾನ ನೀಡುತ್ತಿದ್ದು, ಈಗ 4 ಕೋಟಿ ರೂ. ಇಳಿಕೆ ಮಾಡಿದ್ದಾರೆ. ಇದು ರಾಜ್ಯ ಸರ್ಕಾರ ಮಾಡುತ್ತಿರುವ ವಂಚನೆಯಾಗಿದೆ ಎಂದರು.
ಮುಂದೊಂದು ದಿನ ಕನ್ನಡ ಭಾಷೆಗೆ ಉಳಿಗಾಲವಿಲ್ಲದಂತಾಗುತ್ತದೆ. ಕನ್ನಡದಲ್ಲಿ 15 ರಿಂದ 20 ಚಾನೆಲ್‍ಗಳಿವೆ. ಆದರೆ ಈ ಚಾನೆಲ್‍ಗಳಲ್ಲಿ ಯಾರೂ ಶುದ್ಧ ಕನ್ನಡ ಬಳಸುತ್ತಿಲ್ಲ. ಕೇಂದ್ರ ಸರ್ಕಾರದ ಡಿಡಿ ಚಂದನ ಚಾನೆಲ್ ಬಿಟ್ಟರೆ ಬೇರೆ ಯಾವುದೇ ವಾಹಿನಿ ಶುದ್ಧ ಕನ್ನಡ ಬಳಸುತ್ತಿಲ್ಲ ಎಂದು ಕಿಡಿಕಾರಿದರು.

ಹಿಂದಿ ರಾಜ್ಯೋತ್ಸವ, ತಮಿಳುರಾಜ್ಯೋತ್ಸವ, ಆಂಧ್ರರಾಜ್ಯೋತ್ಸವ ಎಂದು ಯಾವ ರಾಜ್ಯದಲ್ಲೂ ಮಾಡುವುದಿಲ್ಲ. ಆದರೆ ನಮ್ಮ ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ. ಇದು ಹೆಮ್ಮೆಯ ವಿಷಯ. ಆದರೆ ನಮ್ಮವರಿಗೆ ಕನ್ನಡ ಭಾಷಾಭಿಮಾನವೇ ಕಡಿಮೆಯಾಗಿರುವುದು ವಿಷಾದದ ಸಂಗತಿ ಎಂದರು.
ಕನ್ನಡಿಗರು ಯಾರು ಎಂದರೆ ತಮಿಳು ಜನರ ಜೊತೆ ತಮಿಳು ಮಾತನಾಡುವುದು, ಮಲೆಯಾಳಿಗರ ಜೊತೆ ಮಲೆಯಾಳಂ ಮಾತನಾಡುವುದು, ಕನ್ನಡಿಗರ ಜೊತೆ ಇಂಗ್ಲೀಷ್‍ನಲ್ಲಿ ಮಾತನಾಡುವವರು ಎಂಬಂತಾಗಿದೆ. ಇದೇ ನಮ್ಮ ರಾಜ್ಯದ ಪರಿಸ್ಥಿತಿ ಎಂದು ತಿಳಿಸಿದರು.

ಕನ್ನಡ ಚಿಂತಕ ಆರ್.ಎ.ಪ್ರಸಾದ್ ಮಾತನಾಡಿ, ತಾಂತ್ರಿಕವಾಗಿ ಕನ್ನಡವನ್ನು ಅಳವಡಿಸಿಕೊಂಡರೆ ಕನ್ನಡ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಭಾರತದಲ್ಲೇ ಪ್ರಾದೇಶಿಕ ಭಾಷೆಯಲ್ಲಿ ತರಬೇತಿ ನೀಡುತ್ತಿರುವ ಸಂಸ್ಥೆ ನಮ್ಮದಾಗಿದ್ದು, 25 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದು , 4,500 ಸರ್ಕಾರಿ ನೌಕರರಿಗೆ ತರಬೇತಿ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ 250 ತರಬೇತಿದಾರರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ