ಬೆಂಗಳೂರು ,ಮಾ.31-ಆರ್ಎಸ್ಎಸ್ ಹಾಗೂ ಬಿಜೆಪಿ ಬಗ್ಗೆ ವಾಚಾಮಗೋಚರವಾಗಿ ಬೈಯ್ದವರಿಗೆ ಟಿಕೆಟ್ ನೀಡುವುದೇ ಖಚಿತವಾಗಿದೆ ಎಂದರೆ ಶೀಘ್ರದಲ್ಲಿ ಹಿತೈಷಿಗಳು ಹಾಗೂ ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಹರತಾಳು ಹಾಲಪ್ಪ ಪರೋಕ್ಷವಾಗಿ ಪಕ್ಷ ಬಿಡುವ ಸುಳಿವು ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ನಾನು ಈಗಲೂ ಸಾಗರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ಪ್ರಮುಖರು ಟಿಕೆಟ್ ನೀಡುವರೆಂಬ ವಿಶ್ವಾಸವನ್ನು ಈಗಲೂ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
ನನಗೆ ಸಾಗರದಿಂದ ಟಿಕೆಟ್ ತಪ್ಪಿದರೆ ನನ್ನ ಮುಂದಿನ ರಾಜಕೀಯ ತೀರ್ಮಾನವನ್ನು ಶೀಘ್ರದಲ್ಲೆ ಬೆಂಬಲಿಗರು ಮತ್ತು ಹಿತೈಷಿಗಳ ಸಭೆ ಕರೆದು ಪ್ರಕಟಿಸುತ್ತೇನೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಹಿತೈಷಿಗಳಿದ್ದಾರೆ. ಮುಂದೆ ನೋಡೋಣ ಏನಾಗುತ್ತದೆ ಎಂದು ಸೂಚ್ಯವಾಗಿ ಕಾಂಗ್ರೆಸ್ ಸೇರುವ ಸುಳಿವು ನೀಡಿದರು.
ನಾನು ಈಗಲೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸಾಗರದಲ್ಲಿ ವರಿಷ್ಠರು ಸಮೀಕ್ಷೆ ನಡೆಸಿ ಟಿಕೆಟ್ ನೀಡುವುದಾದರೆ ಯಾರು ಮುಂದಿದ್ದಾರೆ ಎಂದು ಬಹಿರಂಗಪಡಿಸಲಿ. ಪಕ್ಷದಲ್ಲಿ ಎಲ್ಲರನ್ನು ಟೀಕೆ ಮಾಡಿ ಬೈಯ್ದವರಿಗೆ ಟಿಕೆಟ್ ನೀಡುವುದಾದರೆ ನಾನು ಇರಬೇಕೆ ಎಂದು ಹಾಲಪ್ಪ ಪ್ರಶ್ನಿಸಿದರು.
ಬೇಳೂರು ಗೋಪಾಲಕೃಷ್ಣ ವಿರುದ್ದ ವಾಗ್ದಾಳಿ:
ತಮ್ಮ ಮಾತಿನುದ್ದಕ್ಕೂ ಮಾಜಿ ಶಾಸಕ ಹಾಗೂ ಸಾಗರದ ಮತ್ತೋರ್ವ ಪ್ರಬಲ ಆಕಾಂಕ್ಷಿ ಗೋಪಾಲ ಕೃಷ್ಣ ಬೇಳೂರು ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಹಾಲಪ್ಪ ಬಿಜೆಪಿ ಬಿಟ್ಟಾಗ ಈ ಮಹಾನುಭಾವರು ಏನೇನು ಮಾತನಾಡಿದ್ದರು, ಯಾರ್ಯಾರಿಗೆ ಏನೇನು ಅಂದಿದ್ದಾರೆ ಎಂಬುದು ನೆನಪಿದೆಯೇ ಎಂದು ತರಾಟೆಗೆ ತೆಗೆದುಕೊಂಡರು.
ಯಡಿಯೂರಪ್ಪ ವಿರುದ್ಧ ಏಕವಚನದಲ್ಲಿ ಬೈಯ್ದವರು, ಸಂಸದೆ ಶೋಭಾ ಕರಂದ್ಲಾಜೆ ಜೊತೆ ಸಂಬಂಧ ಕಲ್ಪಿಸಿದವರು, ಆರ್ಎಸ್ಎಸ್ ನಾಯಕರು 200 ಕೋಟಿ ಹೊಡೆದುಕೊಂಡಿದ್ದಾರೆ ಎಂದವರು, ಸಂಸದ ರಾಘವೇಂದ್ರನನ್ನು ಬಸ್ಸ್ಟ್ಯಾಂಡ್ ರಾಘವೇಂದ್ರ ಎಂದಿದ್ದು ನಾನಾ ಇವರ ಎಂದು ಪ್ರಶ್ನೆ ಮಾಡಿದರು.
ಸಾಗರದಲ್ಲಿ ಕಳೆದ ಬಾರಿ ಮೂರನೇ ಸ್ಥಾನಕ್ಕೆ ಬಂದಿದ್ದವರಿಗೆ ಟಿಕೆಟ್ ನೀಡಲಾಗುತ್ತದೆ. ಶಿವಮೊಗ್ಗದಲ್ಲಿ ಮೂರನೇ ಸ್ಥಾನಕ್ಕೆ ಬಂದವರು ಟಿಕೆಟ್ ಬೇಕು ಎನ್ನುವಾಗ ಸೊರಬದಲ್ಲಿ ಎರಡನೇ ಸ್ಥಾನಕ್ಕೆ ಬಂದಿದ್ದ ನನಗೆ ಏಕೆ ಟಿಕೆಟ್ ನೀಡಬಾರದು ಎಂದು ಕೇಳಿದರು.
ನಾನು ಸಾಗರಕ್ಕೆ ಹೊಸಬನಲ್ಲ. ನನ್ನ ತಂದೆತಾಯಿಗಳು, ನನ್ನ ಕುಟುಂಬ ಇರುವುದು ಇಲ್ಲೇ. ಕೆಲವರು ನಾನು ಬೇರೆ ಪಕ್ಷದಿಂದ ಬಂದವನು ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಜನರನ್ನು ಮೂರ್ಖರು ಎಂದುಕೊಂಡಿದ್ದೀರ ಎಂದು ತರಾಟೆಗೆ ತೆಗೆದುಕೊಂಡರು.
ಶಿವಮೊಗ್ಗದಲ್ಲಿ 254 ಅಂತರದ ಮತಗಳಿಂದ ಸೋತ ರುದ್ರೇಗೌಡರಿಗೆ ಟಿಕೆಟ್ ಕೊಡುವುದಿಲ್ಲ. ಮೂರನೇ ಸ್ಥಾನಕ್ಕೆ ಹೋಗಿದ್ದವರು ಈಗ ನಾನೇ ಗೆಲ್ಲುತ್ತೇನೆ ಎಂದು ಹೇಳುತ್ತಿದ್ದಾರೆ. ರುದ್ರೇಗೌಡರ ಶಾಪ ಒಳ್ಳೆಯದಲ್ಲ ಎಂದು ಪರೋಕ್ಷವಾಗಿ ಈಶ್ವರಪ್ಪ ವಿರುದ್ದವೂ ಹರಿಹಾಯ್ದರು.
ಬೇರೆ ಪಕ್ಷದವರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ನಾನು ಈವರೆಗೂ ಪಕ್ಷ ಬಿಡುವ ತೀರ್ಮಾನವನ್ನು ಕೈಗೊಂಡಿಲ್ಲ. ನಮ್ಮ ರಾಜ್ಯಾಧ್ಯಕ್ಷರು ಏನು ತೀರ್ಮಾನ ಕೈಗೊಳ್ಳುತ್ತಾರೊ ನೋಡೋಣ ಎಂದರು.