ಬೆಂಗಳೂರು, ಮಾ.31-ಚುನಾವಣಾ ದಿನಾಂಕ ಘೋಷಣೆಯಾದ ನಂತರ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರ ವಿರುದ್ದ ಆವಲಹಳ್ಳಿ ಪೆÇಲೀಸ್ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ.
ಕಳೆದ 28 ರಂದು ಮಹದೇವಪುರ ವಿಧಾನಸಭಾ ಕ್ಷೇತದ ಯುವಮೋರ್ಚಾ ಘಟಕದ ವತಿಯಿಂದ ವಿಜಯಸಂಕಲ್ಪ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ರ್ಯಾಲಿ ಜ್ಯೋತಿಪುರದಿಂದ ಆರಂಭವಾಗಿ ಮಾರತಹಳ್ಳಿಯಲ್ಲಿ ಕೊನೆಗೊಳ್ಳಬೇಕಿತ್ತು. ಇದಕ್ಕೆ ಚುನಾವಣಾ ಆಯೋಗ ಮಾ.29ರ ಮಧ್ಯಾಹ್ನದವರೆಗೂ ಷರತ್ತು ವಿಧಿಸಿ ಅನುಮತಿಯನ್ನೂ ನೀಡಿತ್ತು.
ಅದರೆ ರ್ಯಾಲಿ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರು ಧರಿಸಿದ್ದ ಹೆಲ್ಮೆಟ್ ಮೇಲೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಮಿತ್ಷಾ, ಅರವಿಂದಲಿಂಬಾವಳಿ ಅವರ ಭಾವಚಿತ್ರ ಹಾಗೂ ಮಹದೇವಪುರ ಎಂದು ಸ್ಟಿಕ್ಕರ್ ಅಂಟಿಸಲಾಗಿತ್ತು. ರ್ಯಾಲಿಗೆ ಮಾತ್ರ ಅನುಮತಿ ಪಡೆದು ಸ್ಟಿಕ್ಕರ್ ಅಂಟಿಸಲು ಅನುಮತಿ ಪಡೆದಿರಲಿಲ್ಲ. ಚುನಾವಣಾ ಆಯೋಗದವರೇ ರ್ಯಾಲಿಯ ಚಿತ್ರೀಕರಣವನ್ನು ಮಾಡಿತ್ತು. ಇದರಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಅಧ್ಯಕ್ಷರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿಕೊಳ್ಳುವಂತೆ ಆವಲಹಳ್ಳಿ ಆರಕ್ಷಕ ನಿರೀಕ್ಷಕರಿಗೆ ಪತ್ರ ಬರೆದಿದ್ದರು.
ಇದರನ್ವಯ ಪೆÇಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಮತದಾನ ಹೆಚ್ಚಳಕ್ಕೆ ಮಾಲ್ ಹಾಗೂ ಹೊಟೇಲ್ಗಳಲ್ಲಿ ನೀಡುವ ರಿಯಾಯ್ತಿ ವಿಚಾರ ಸಭೆ ದಿಢೀರ್ ರದ್ದು
ಬೆಂಗಳೂರು, ಮಾ.31-ನಗರದಲ್ಲಿ ಮತದಾನ ಹೆಚ್ಚಳ ಮಾಡಲು ಮಾಲ್ ಹಾಗೂ ಹೊಟೇಲ್ಗಳಲ್ಲಿ ನೀಡುವ ರಿಯಾಯ್ತಿ ರಾಜಕೀಯ ದುರುದ್ದೇಶಕ್ಕೆ ಒಳಪಡುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಮಾಲ್ ಮತ್ತು ಹೊಟೇಲ್ ಮಾಲೀಕರೊಂದಿಗೆ ನಡೆಸಲು ಉದ್ದೇಶಿಸಿದ್ದ ಸಭೆಯನ್ನು ದಿಢೀರ್ ರದ್ದುಗೊಳಿಸಲಾಗಿದೆ.
ಮಾಲ್ ಮತ್ತು ಹೊಟೇಲ್ಗಳಲ್ಲಿ ಮತದಾನದ ದಿನ ಮತ ಚಲಾಯಿಸಿದವರು ಹೆಬ್ಬೆಟ್ಟಿನ ಶಾಯಿ ತೋರಿಸಿದವರಿಗೆ ಮಾಲ್ ಹಾಗೂ ಹೊಟೇಲ್ಗಳಲ್ಲಿ ರಿಯಾಯ್ತಿ ನೀಡಲು ಮನವಿ ಮಾಡುವ ಬಗ್ಗೆ ಚಿಂತನೆ ನಡೆದಿತ್ತು. ಅದರಂತೆ ಮಾಲೀಕರೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾಗಿತ್ತು.
ಇಂದು ಮಲ್ಲೇಶ್ವರದ ಐಟಿಪಿ ಸಭಾಂಗಣದಲ್ಲಿ ನಡೆಯಬೇಕಿದ್ದ ಸಭೆಯನ್ನು ಯಾವುದೇ ಹೊಟೇಲ್ ಅಥವಾ ಮಾಲ್ ಮಾಲೀಕರು ಇಂಥದ್ದೇ ಪಕ್ಷಗಳಿಗೆ ಮತ ಚಲಾಯಿಸಿದರೆ ರಿಯಾಯ್ತಿ ನೀಡುವುದಾಗಿ ಆಮಿಷವೊಡ್ಡುವ ಸಾಧ್ಯತೆ ಇರುವ ಕಾರಣದಿಂದ ಸಭೆ ದಿಢೀರ್ ರದ್ದಾಗಿದೆ.
ಬಹುತೇಕ ಎಲ್ಲಾ ಮಾಲ್ ಮತ್ತು ಹೊಟೇಲ್ ಮಾಲೀಕರು ವಿವಿಧ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದಾರೆ. ಉದಾಹರಣೆಗೆ ಜಿ.ಟಿ. ಮಾಲ್ನ ಮಾಲೀಕರು ರಾಜಾಜಿನಗರ ಜೆಡಿಎಸ್ ಅಭ್ಯರ್ಥಿ. ಹಾಗಾಗಿ ಜೆಡಿಎಸ್ಗೆ ಮತ ಹಾಕುವಂತೆ ಆಮಿಷವೊಡ್ಡಿ ರಿಯಾಯ್ತಿ ನೀಡುವ ಸಾಧ್ಯತೆ ಇದೆ. ಅದೇ ರೀತಿ ಗರುಡಾಮಾಲ್ನ ಮಾಲೀಕ ಉದಯ್ಗರುಡಾಚಾರ್ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದ್ದು, ತಮ್ಮ ಗೆಲುವಿಗಾಗಿ ರಿಯಾಯ್ತಿ ನೀಡುವುದನ್ನು ಬಳಸಿಕೊಂಡರೆ ಎಂಬೆಲ್ಲಾ ಕಾರಣಗಳಿಂದಾಗಿ ಸಭೆ ರದ್ದು ಮಾಡಲಾಗಿದೆ.
ಆದರೆ ಮತದಾನ ಹೆಚ್ಚಿಸುವ ಕುರಿತಂತೆ ಸಾರ್ವಜನಿಕರ ಮನವೊಲಿಸಲು ಹೊಟೇಲ್ ಮತ್ತು ಮಾಲ್ ಮಾಲೀಕರಿಗೆ ಈ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಚುನಾವಣಾ ಆಯೋಗದಿಂದಲೇ ನೋಟಿಸ್ ನೀಡಲು ತೀರ್ಮಾನಿಸಲಾಗಿದೆ. ಮತದಾರರಿಗೆ ಶೇ.5 ಅಥವಾ ಶೇ.10ರಷ್ಟು ರಿಯಾಯ್ತಿ ನೀಡುವ ನೀತಿಯನ್ನು ಸ್ವತಃ ತಾವೇ ಘೋಷಣೆ ಮಾಡಿಕೊಂಡು ರಿಯಾಯ್ತಿ ನೀಡಿ ಮತದಾನ ಹೆಚ್ಚಳಕ್ಕೆ ಕೈ ಜೋಡಿಸಿ ಎಂಬ ತಿಳುವಳಿಕೆ ಪತ್ರ ನೀಡಲು ನಿರ್ಧರಿಸಿದೆ.