25 ಮಂದಿ ಹಿಂದೂಗಳ ಹತ್ಯೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ರಕ್ಷಣೆ ಇಲ್ಲ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ

ಮೈಸೂರು, ಮಾ.30-ಕರ್ನಾಟಕದಲ್ಲಿ 25 ಮಂದಿ ಹಿಂದೂಗಳ ಹತ್ಯೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ರಕ್ಷಣೆ ಇಲ್ಲದೆ ಜನ ಪರಿತಪಿಸುವಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದಿಲ್ಲಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಇಂದು ಹಮ್ಮಿಕೊಂಡಿದ್ದ ನವಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮುಂದೆ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ. ಹಿಂದೂಗಳ ಹತ್ಯೆ ನಡೆಸಿ ಕುಕೃತ್ಯವೆಸಗಿದ ಆರೋಪಿಗಳನ್ನು ಪಾತಾಳದಲ್ಲಿದ್ದರೂ ಬಿಡುವುದಿಲ್ಲ. ಅವರನ್ನು ಬಂಧಿಸಿ ಜೈಲಿಗಟ್ಟುತ್ತೇವೆ ಎಂದು ಹೇಳಿದರು.

ನಿಮಗೆ ಟಿಪ್ಪು ಸುಲ್ತಾನ್ ಜಯಂತಿ ನೆನಪಾಗುತ್ತದೆ. ಆದರೆ ನಾಡಿಗಾಗಿ ದುಡಿದ ಕುವೆಂಪು ಹಾಗೂ ವಿಶ್ವೇಶ್ವರಯ್ಯನವರ ಜಯಂತಿಗಳು ನೆನಪಾಗುವುದಿಲ್ಲ ಎಂದು ಪ್ರಶ್ನಿಸಿದರು.

ಹಿಂದೂ ವಿರೋಧಿ ಟಿಪ್ಪು ಜಯಂತಿ ಆಚರಣೆ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಷ್ಟ್ರಕವಿ ಕುವೆಂಪು ಹಾಗೂ ವಿಶ್ವೇಶ್ವರಯ್ಯನವರ ಜಯಂತಿ ಮಾಡಲಿ ಎಂದರು.

ತಮ್ಮ ಭಾಷಣದುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅಮಿತ್ ಷಾ ಕರ್ನಾಟಕದ ಜನತೆ ಯಾವುದೇ ಕಾರಣಕ್ಕೂ ಈ ಬಾರಿ ತಪ್ಪು ಮಾಡುವುದಿಲ್ಲ. 2013 ರಲ್ಲಿ ಮಾಡಿದ ತಪ್ಪಿಗಾಗಿ ಪರಿತಪಿಸುತ್ತಿದ್ದಾರೆ. ಕಾಂಗ್ರೆಸ್ ಈ ಬಾರಿ ಅಧಿಕಾರ ಕಳೆದುಕೊಳ್ಳುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಭವಿಷ್ಯ ನುಡಿದರು.

ಮೈಸೂರಿನಲ್ಲಿ ಸಿದ್ದರಾಮಯ್ಯಗೆ ಕರೆಂಟ್ ಹೊಡೆದರೆ ಕಾಂಗ್ರೆಸ್ ಸಂಪೂರ್ಣವಾಗಿ ಮಲಗುತ್ತದೆ. ಸಾಂಸ್ಕøತಿಕ ನಗರಿ ಜನತೆ ಈ ಬಾರಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಕಿತ್ತೆಸೆಯಬೇಕು. ಯಾವುದೇ ಕಾರಣಕ್ಕೂ ನೀವು ಕಾಂಗ್ರೆಸ್‍ಗೆ ಮತ ಹಾಕಬಾರದೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ನಾನು ಚಿತ್ರದುರ್ಗದಲ್ಲಿ ಬಾಯಿ ತಪ್ಪಿನಿಂದ ಆಡಿದ ಮಾತನ್ನೇ ನೀವು ದೊಡ್ಡ ರಾದ್ಧಾಂತ ಮಾಡಿದ್ದೀರಿ. ಹಿಂದೆ ನೀವು ಕಾಂಗ್ರೆಸ್ ಹಾಗೂ ಪಕ್ಷದ ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿ ವಿರುದ್ದ ಏನೇನು ಮಾತನಾಡಿದ್ದೀರಿ ಎಂಬುದನ್ನು ಮರೆತಿದ್ದೀರಾ. ತಾಯಿ-ಮಗನ ಪಕ್ಷ ಎಂದು ಹೇಳಿದ್ದು, ನೆನಪಿಲ್ಲವೇ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಭಯ್ಯಾ… ಸಿದ್ದರಾಮಯ್ಯ ನಾನು ಎನ್‍ಡಿಎ ಸರ್ಕಾರ ಅನುದಾನ ಕೊಟ್ಟಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಕೊಟ್ಟಿರುವ ಅನುದಾನವನ್ನು ರಾಜ್ಯಸರ್ಕಾರ ಸರಿಯಾಗಿ ಸದ್ಬಳಕೆ ಮಾಡಿಕೊಂಡಿಲ್ಲ ಎಂದು ದಾಖಲೆಗಳ ಸಹಿತ ತಿಳಿಸಿದ್ದೇನೆ. ನಿಮ್ಮ ಯುಪಿಎ ಅಧಿಕಾರದ ಅವಧಿಯಲ್ಲಿ ರಾಜ್ಯಕ್ಕೆ ಸಿಗಬೇಕಾದ ಅನುದಾನವನ್ನು ಎಷ್ಟು ಕೊಟ್ಟಿದ್ದೀರಿ ಎಂಬುದನ್ನು ಶ್ವೇತಪತ್ರ ಹೊರಡಿಸಲು ಸಿದ್ಧರೇ ಎಂದು ಹರಿಹಾಯ್ದರು.

ದೇಶದ ಯಾವುದೇ ರಾಜ್ಯದಲ್ಲೂ ಜನತೆ ಕಾಂಗ್ರೆಸ್ ಪಕ್ಷವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. 2014ರ ಲೋಕಸಭೆ ಚುನಾವಣೆ ನಂತರ ನಡೆದಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಾದರೂ ಒಂದೇ ಒಂದು ರಾಜ್ಯವನ್ನು ಗೆದ್ದಿದೆಯೇ? ಎಂದು ಪ್ರಶ್ನಿಸಿದರು.

ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್, ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ, ತ್ರಿಪುರಾ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷವನ್ನು ಜನತೆ ಸರಾಸಗಟಾಗಿ ತಿರಸ್ಕರಿಸಿದ್ದಾರೆ. ಕರ್ನಾಟಕದಲ್ಲೂ ಈ ಬಾರಿ ಜನತೆ ಬಿಜೆಪಿಯನ್ನು ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ತರಲಿದ್ದಾರೆ ಎಂದು ಹೇಳಿದರು.

ಇದಕ್ಕೂ ಮುನ್ನ ಅಮಿತ್ ಷಾ ಹತ್ಯೆಗೀಡಾಗಿದ್ದ ಕ್ಯಾತಮಾರನಹಳ್ಳಿಯ ಬಿಜೆಪಿ ಕಾರ್ಯಕರ್ತ ರಾಜು ಮನೆಗೆ ಭೇಟಿ ನೀಡಿ ಅವರ ತಾಯಿಗೆ ಸಾಂತ್ವನ ಹೇಳಿ 5 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ರಾಜು ಹತ್ಯೆ ಕುರಿತಂತೆ ಕೇಂದ್ರ ಸಚಿವ ಅನಂತ್‍ಕುಮಾರ್ ಮತ್ತು ಸಂಸದ ಪ್ರತಾಪ್‍ಸಿಂಹ ಪೂರ್ಣ ಮಾಹಿತಿಯನ್ನು ಅಮಿತ್ ಷಾ ಅವರಿಗೆ ಒದಗಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ