ಜಿಎಸ್‍ಟಿ ಸುಂಕವನ್ನು ಪಾವತಿಸದೇ ವಂಚಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ:

ನವದೆಹಲಿ, ಮಾ.30- ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆಗಾಗಿ ಜಾರಿಗೊಳಿಸಿರುವ ಸರಕುಗಳು ಮತ್ತು ಸೇವಾ ತೆರಿಗೆಗಳು(ಜಿಎಸ್‍ಟಿ) ಸುಂಕವನ್ನು ಪಾವತಿಸದೇ ವಂಚಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ತೆರಿಗೆ ತಪ್ಪಿಸುವವರ ವಿರುದ್ಧ ಮಾ.27ರಿಂದಲೇ ಬಿರುಸಿನ ಕಾರ್ಯಾಚರಣೆ ಆರಂಭಿಸಿದೆ. ಕಳೆದ ವರ್ಷ ಜುಲೈ 1ರಿಂದ ದೇಶವ್ಯಾಪಿ ಜಿಎಸ್‍ಟಿ ಅನುಷ್ಠಾನಕ್ಕೆ ಬಂದ ನಂತರ ನಡೆಸಿರುವ ಪ್ರಪ್ರಥಮ ಪತ್ತೆ ಕಾರ್ಯ ಇದಾಗಿದೆ.
ಹಣಕಾಸು ವರ್ಷ ನಾಳೆ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಜಿಎಸ್‍ಟಿ ತೆರಿಗೆ ಪದ್ದತಿಯಡಿ ತೆರಿಗೆ ತಪ್ಪಿಸುವವರಿಗೆ ಸರ್ಕಾರ ಬಲೆ ಬೀಸಿದೆ. ಇದರೊಂದಿಗೆ ತೆರಿಗೆ ವಂಚಕರಿಗೆ ಶಾಸ್ತಿ ಮಾಡುವ ಸ್ಪಷ್ಟ ಸಂದೇಶ ರವಾನಿಸಿದೆ. ಕೇಂದ್ರಿಯ ಅಬಕಾರಿ ಮತ್ತು ಸೀಮಾಸುಂಕ ಮಂಡಳಿಯ ಜಿಎಸ್‍ಟಿ ವಿಚಕ್ಷಣ ವಿಭಾಗದ ಮಹಾನಿರ್ದೇಶನಾಲಯ ದೇಶಾದ್ಯಂತ ತೆರಿಗೆ ತಪ್ಪಿಸುವವರ ವಿರುದ್ಧ ಮಾ.27ರಿಂದಲೇ ಬಿರುಸಿನ ಕಾರ್ಯಾಚರಣೆ ಆರಂಭಿಸಿದೆ. ಅಲ್ಲದೇ ಇದುವರೆಗೂ 450 ಕೋಟಿ ರೂ.ಗಳ ತೆರಿಗೆ ವಂಚನೆಯನ್ನು ಪತ್ತೆ ಮಾಡಿದೆ ಎಂದು ಉನ್ನತ ಮೂಲಗಳು ಹೇಳಿವೆ. ಕಬ್ಬಿಣ ಮತ್ತು ಉಕ್ಕು, ಬಂದರು(ಹಡಗುಕಟ್ಟೆ ಸೇವೆ), ಸಂಘಟಿತ ಚಿಲ್ಲರೆ ಮಾರಾಟಗಾರರ ಜಾಲ ಸೇರಿದಂತೆ ವಿವಿಧ ವಲಯಗಳಲ್ಲಿ ವ್ಯಾಪಕ ಜಿಎಸ್‍ಟಿ ತೆರಿಗೆ ಕಳ್ಳತನ ಪತ್ತೆಯಾಗಿದೆ.
ಈ ಕಾರ್ಯಾಚರಣೆಯಲ್ಲಿ 125 ಘಟಕಗಳು ಮತ್ತು 110 ಉಪ-ಘಟಕಗಳನ್ನು ತನಿಖೆಗೆ ಗುರಿಪಡಿಸಿ ತಕ್ಷಣವೇ 49 ಕೋಟಿ ರೂ.ಗಳ ತೆರಿಗೆಯನ್ನು ವಸೂಲಿ ಮಾಡಲಾಗಿದೆ. ಚೆನ್ನೈ ಮಹಾನಗರವೊಂದರಲ್ಲೇ 100 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ತೆರಿಗೆ ವಂಚನೆ ಪತ್ತೆಯಾಗಿದೆ.
ತೆರಿಗೆ ಪಾವತಿಸದಿರುವುದು, ಉದ್ದೇಶಪೂರ್ವಕವಾಗಿ ತೆರಿಗೆ ತಪ್ಪಿಸುವುದು, ತೆರಿಗೆ ವಿನಾಯಿತಿಗಳನ್ನು ಸುಳ್ಳಾಗಿ ಪ್ರತಿಪಾದಿಸುವುದು, ಗ್ರಾಹಕರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಸರ್ಕಾರಕ್ಕೆ ಪಾವತಿಸದಿರುವುದು ಸೇರಿದಂತೆ ಮತ್ತಿತರ ವಂಚನೆ ಮತ್ತು ಕಾನೂನು ಬಾಹಿರ ಮೋಸಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ