ನೀರವ್ ಮೋದಿಯನ್ನು ಭಾರತಕ್ಕೆ ಎಳೆದು ತರುತ್ತೇವೆ – ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ, ಮಾ.30- ದೇಶದ ಬ್ಯಾಂಕಿಂಗ್ ವಲಯವನ್ನೇ ತಲ್ಲಣಗೊಳಿಸಿದ 12,723 ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣದ ಪ್ರಮುಖ ಸೂತ್ರಧಾರರಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಯನ್ನು ವಿದೇಶದಿಂದ ಭಾರತಕ್ಕೆ ಎಳೆದು ತರುತ್ತೇವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಭಾರತ ಆರ್ಥಿಕ ಸಮಾವೇಶ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಆರ್ಥಿಕ ಅಪರಾಧಗಳನ್ನು ಎಸಗಿ ಪರಾರಿಯಾಗುವಂಥ ದುರ್ಬಲ ವ್ಯವಸ್ಥೆಗೆ ಅವಕಾಶ ನೀಡದಂತೆ ನಾವು ಎಚ್ಚರ ವಹಿಸಬೇಕಿತ್ತು. ನೀರವ್ ಮತ್ತು ಚೋಕ್ಸಿ ದೇಶದಿಂದ ಓಡಿ ಹೋಗಿದ್ದಾರೆ. ಆದರೆ ಅವರನ್ನು ಸರ್ಕಾರ ಹಿಡಿದು ಸ್ವದೇಶಕ್ಕೆ ತರಲಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಿದೆ. ಸರ್ಕಾರದಲ್ಲಿ ಒಂದೇ ಒಂದು ಭ್ರಷ್ಟಾಚಾರ ಪ್ರಕರಣ ಇಲ್ಲ. ಸೂಕ್ತ ವೆಚ್ಚವನ್ನು ಸೂಕ್ತ ವ್ಯಕ್ತಿಗಳ ಮೇಲೆ ಸದ್ವಿನಿಯೋಗ ಮಾಡುವ ಮೂಲಕ ಸರ್ಕಾರ ಪಾರದರ್ಶಕತೆ ಕಾಪಾಡಿದೆ ಎಂದು ರಕ್ಷಣಾ ಸಚಿವರು ಹೇಳಿದರು.
ಆರ್ಥಿಕ ಅಪರಾಧಗಳನ್ನು ಎಸಗಿ ದೇಶದಿಂದ ಪರಾರಿಯಾಗುವ ವಂಚಕರ ಆಸ್ತಿ-ಪಾಸ್ತಿಗಳನ್ನು ಜಫ್ತಿ ಮಾಡಲು ಸರ್ಕಾರ ಕಟ್ಟುನಿಟ್ಟಿನ ಕಾನೂನು ರೂಪಿಸಿದೆ. ಉದ್ದೇಶಪೂರ್ವಕ ಸುಸ್ತಿದಾರರಿಗೆ ಕಡಿವಾಣ ಹಾಕಲು ಇದು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ನಿರ್ಮಲಾ ತಿಳಿಸಿದರು.
ಫ್ರಾನ್ಸ್‍ನಿಂದ ಖರೀದಿಸಿರುವ ರಫೇಲ್ ಯುದ್ದ ವಿಮಾನಗಳ ವೆಚ್ಚದ ಬಗ್ಗೆ ನಿಖರ ಮಾಹಿತಿ ಬಹಿರಂಗಗೊಳಿಸದಿರುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ರಾಷ್ಟ್ರದ ಭದ್ರತೆ ನಮ್ಮ ಪರಮೋಚ್ಚ ಆದ್ಯತೆ. ಹೀಗಾಗಿ ವಿರೋಧಪಕ್ಷಗಳ ಒತ್ತಡಕ್ಕೆ ಮಣಿದು ವಿವರವನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ