ಬೆಂಗಳೂರು,ಮಾ.30- ಹಿಂದೆಂದೂ ಕಾಣದ ಜಿದ್ದಾಜಿದ್ದಿನ ಸ್ಪರ್ಧೆಗೆ ವೇದಿಕೆಯಾಗಿ ರಾಷ್ಟ್ರದ ಗಮನ ಸೆಳೆದಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 76, ಬಿಜೆಪಿ 75, ಜೆಡಿಎಸ್ 70 ಹಾಗೂ ಇತರರು ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಸರ್ಕಾರ ರಚನೆಯಲ್ಲಿ ಈ ಬಾರಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದ್ದು , ತೆನೆ ಹೊತ್ತ ಮಹಿಳೆಯ ಮುಂದೆ ಎರಡು ರಾಷ್ಟ್ರೀಯ ಪಕ್ಷಗಳು ಮಂಡಿ ಊರಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಮಾ.10ರಿಂದ ಮಾ.21ರವರೆಗೆ ರಾಜ್ಯದ 183 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 14 ಸಾವಿರ ಜನರನ್ನು ಸಂದರ್ಶಿಸಲಾಗಿದೆ. ಈ ಪ್ರಕಾರ ಈ ಬಾರಿ ರಾಜ್ಯದ ಜನತೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದೇ ಕಿಚಡಿ ಸರ್ಕಾರ ರಚನೆಯಾಗಲಿದೆ.
ಈ ಹಿಂದೆ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸಮೀಕ್ಷೆ ನಡೆಸಿದ ಟು ಡೇ ಚಾಣಕ್ಯ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಇದು ಬಹಿರಂಗಗೊಂಡಿದೆ.
ನಡೆಯದ ಜಾದು:
ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಯಾಗಲಿ, ಸಿದ್ದರಾಮಯ್ಯನವರ ಅಬ್ಬರಕ್ಕೆ ರಾಜ್ಯದ ಜನತೆ ಸೊಪ್ಪು ಹಾಕಿಲ್ಲ. ಬದಲಿಗೆ ಪ್ರಾದೇಶಿಕ ಪಕ್ಷ ಜೆಡಿಎಸ್‍ಗೆ ಮತದಾರ ಒಲವು ತೋರಿರುವುದು ಕಂಡುಬಂದಿದೆ.
ಬೇರೆ ರಾಜ್ಯಗಳಂತೆ ಇಲ್ಲಿ ಮೋದಿಯ ಮೋಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚಾಣಾಕ್ಷತನ, ಯುವ ನಾಯಕ ರಾಹುಲ್ ಗಾಂಧಿಯ ಅಲೆ ಮತದಾರನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಪ್ರಾದೇಶಿಕ ಪಕ್ಷವೇ ಸರಿ ಎಂಬುದು ಬಹುತೇಕರ ಅನಿಸಿಕೆಯಾಗಿದೆ.
ಸಮೀಕ್ಷೆಯಲ್ಲಿ ಮತದಾರರು ಸಮ್ಮಿಶ್ರ ಸರ್ಕಾರವೇ ಅಸ್ತಿತ್ವಕ್ಕೆ ಬಂದರೆ ರಾಜ್ಯದ ಅಭಿವೃದ್ದಿ ಸಾಧ್ಯ ಎಂಬ ಇಂಗಿತವನ್ನು ಹೊರ ಹಾಕಿದ್ದಾರೆ.ಶೇ.53ರಷ್ಟು ಜನರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೆಂದು ಹೇಳಿದ್ದರೆ ಶೇ.20ರಷ್ಟು ಬಿಜೆಪಿ , ಶೇ.16ರಷ್ಟು ಕಾಂಗ್ರೆಸ್ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನೆಚ್ಚಿನ ಸಿಎಂ ಯಾರು?:
ಇನ್ನು ಸಮೀಕ್ಷೆಯಲ್ಲಿ ಬಹುತೇಕ ಜನರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೇ ಮುಂದಿನ ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಂಡಿದ್ದಾರೆ. ಶೇ.30ರಷ್ಟು ಜನರು ಎಚ್‍ಡಿಕೆಗೆ ಜೈ ಅಂದಿದ್ದರೆ ಶೇ.28ರಷ್ಟು ಮಂದಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಶೇ.22ರಷ್ಟು ಮಂದಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶೇ.8ರಷ್ಟು ಡಾ.ಜಿ.ಪರಮೇಶ್ವರ್, ಶೇ.7ರಷ್ಟು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಶೇ.5ರಷ್ಟು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಪರ ಬ್ಯಾಟಿಂಗ್ ಮಾಡಿದ್ದಾರೆ.
ಬಿಜೆಪಿಗೆ ಬಿಎಸ್‍ವೈ ಅನಿವಾರ್ಯವೇ?:
ಬಿಜೆಪಿಯಿಂದ ಹೊರಹೋಗಿ ಕೆಜೆಪಿ ಕಟ್ಟಿದ್ದ ಯಡಿಯೂರಪ್ಪ ಬಿಜೆಪಿಗೆ ಪುನರ್ ಆಗಮನ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದಕ್ಕೆ ಶೇ.87ರಷ್ಟು ಮಂದಿ ಹೌದು ಎಂಬ ಉತ್ತರ ನೀಡಿದ್ದಾರೆ.
ಬಿಜೆಪಿಗೆ ಬಿಎಸ್‍ವೈ ಅನಿವಾರ್ಯ ಎಂಬುದು ಸಮೀಕ್ಷೆಯಿಂದಲೇ ತಿಳಿದಿದೆ.
ಪ್ರಚಲಿತ ಸಮಸ್ಯೆ ಯಾವುದು:
ಇನ್ನು ಸಮೀಕ್ಷೆಯಲ್ಲಿ ರಾಜ್ಯದ ಪ್ರಚಲಿತ ಸಮಸ್ಯೆ ಯಾವುದು ಎಂಬುದಕ್ಕೆ ಬಹುತೇಕ ಮಂದಿ ಬೆಲೆ ಏರಿಕೆ ಮತ್ತು ಹಣದುಬ್ಬರವನ್ನೇ ಪ್ರಮುಖ ಸಮಸ್ಯೆ ಎಂದು ಹೇಳಿದ್ದಾರೆ.ಇದಕ್ಕೆ ಶೇ.42ರಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ.
ಭ್ರಷ್ಟಾಚಾರ ಶೇ.19, ಸ್ಥಳೀಯ ಸಮಸ್ಯೆ ಶೇ.4, ಕೋಮು ಗಲಭೆ 6, ಆರೋಗ್ಯ ಮತ್ತು ಶಿಕ್ಷಣ 8, ಕಾನೂನು ಮತ್ತು ಸುವ್ಯವಸ್ಥೆ ಶೇ.7 ಹಾಗೂ ನಿರುದ್ಯೋಗ ಶೇ.14ರಷ್ಟು.
ರೈತರ ಹಿತಾಸಕ್ತಿ ಕಾಪಾಡಲು ಯಾವ ಪಕ್ಷ ಅತ್ಯುತ್ತಮ ಎಂಬುದಕ್ಕೆ ಜೆಡಿಎಸ್‍ಗೆ ಶೇ.71, ಕಾಂಗ್ರೆಸ್ ಶೇ.20 ಹಾಗೂ ಬಿಜೆಪಿಗೆ ಶೇ.9ರಷ್ಟು ಮಂದಿ ಮತ ಹಾಕಿದ್ದಾರೆ.
ಯಾವ ಭಾಗ್ಯ ಅತ್ಯುತ್ತಮ:
ಇನ್ನು ರಾಜ್ಯ ಸರ್ಕಾರದ ಹಲವು ಭಾಗ್ಯ ಯೋಜನೆಗಳಲ್ಲಿ ಯಾವುದು ಅತ್ಯುತ್ತಮ ಎಂಬುದಕ್ಕೆ ಬಹುತೇಕ ಜನರು ಅಂದರೆ ಶೇ.62ರಷ್ಟು ಮಂದಿ ಅನ್ನ ಭಾಗ್ಯ ಯೋಜನೆಗೆ ಪ್ರೀತಿ ತೋರಿದರೆ.
ಇಂದಿರಾ ಕ್ಯಾಂಟೀನ್ ಶೇ.13, ಶಾದಿ ಭಾಗ್ಯ 2 ಹಾಗೂ ಇತರೆ ಯೋಜನೆಗಳಿಗೆ ಶೇ.18ರಷ್ಟು ಮಂದಿ ಉತ್ತಮ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸಿದೆಯೇ ಎಂಬುದಕ್ಕೆ ಶೇ.69ರಷ್ಟು ಮಂದಿ ಇಲ್ಲ ಎಂದು ಹೇಳಿದ್ದಾರೆ. ಶೇ.20ರಷ್ಟು ಮಂದಿ ಹೌದು ಎಂದಿದ್ದರೆ , ಶೇ.8ರಷ್ಟು ಮಂದಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಹಳೆ ಮೈಸೂರಿನಲ್ಲಿ ಜೆಡಿಎಸ್ ಪ್ರಾಬಲ್ಯ:
ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯದಂತೆ ಹಳೆ ಮೈಸೂರು ಭಾಗದಲ್ಲಿ ತೆನೆ ಹೊತ್ತ ಮಹಿಳೆ ಈ ಬಾರಿ ಭರ್ಜರಿ ಬೆಲೆ ತೆಗೆಯಲಿದೆ. ಮೈಸೂರು ಮಂಡ್ಯ, ಹಾಸನ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಜೆಡಿಎಸ್ ಎರಡು ರಾಷ್ಟ್ರೀಯ ಪಕ್ಷಗಳನ್ನು ಹಿಂದಿಕ್ಕಿ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಜಿಲ್ಲೆಯವರಾದರೂ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತೋರಿದ ರಾಜಕೀಯ ಮುತ್ಸದ್ದಿತನ ಪಕ್ಷಕ್ಕೆ ಹೆಚ್ಚಿನ ಅನುಕೂಲ ತರಲಿದೆ.
ಈ ಭಾಗದಲ್ಲಿ ಅತ್ಯಂತ ಪ್ರಭಾವಿ ಸಚಿವರೆನಿಸಿಕೊಂಡಿದ್ದ ಎಚ್.ಸಿ.ಮಹದೇವಪ್ಪ , ತನ್ವೀರ್ ಸೇಠ್, ಎ.ಮಂಜು ಅವರಂತಹ ಪ್ರಮುಖರಿದ್ದರೂ ದಳಪತಿಗಳ ಮುಂದೆ ಶರಣಾಗಬೇಕಿದೆ.
ಬೆಂಗಳೂರಿನಲ್ಲಿ ಸಮಬಲ:
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸಮಬಲದ ಸ್ಪರ್ಧೆ ಏರ್ಪಡಲಿದೆ. ಒಟ್ಟು 28 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 13, ಬಿಜೆಪಿ 14 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇದೆ.
ಹದಗೆಟ್ಟ ರಸ್ತೆ, ಮೂಲಭೂತ ಸೌಕರ್ಯಗಳ ಕೊರತೆ, ಸಂಚಾರ ಸಮಸ್ಯೆಯಿಂದ ನಗರದ ಜನತೆ ಕಾಂಗ್ರೆಸ್‍ಗೆ ಹಿಡಿಶಾಪ ಹಾಕಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ , ಕೆ.ಜೆ.ಜಾರ್ಜ್, ತನ್ವೀರ್ ಸೇಠ, ಕೃಷ್ಣೇಭೆರೇಗೌಡ, ಎಂ.ಕೃಷ್ಣಪ್ಪ ಅವರುಗಳಲ್ಲಿ ಕೆಲವರು ಸುಲಭವಾಗಿ ದಡ ಸೇರಿದರೆ ಒಂದಿಬ್ಬರಿಗೆ ಹಿನ್ನಡೆಯಾಗಬಹುದೆಂಬ ಎಚ್ಚರಿಕೆ ನೀಡಲಾಗಿದೆ.
ಕರಾವಳಿ ಬಿಜೆಪಿ:
ಬಿಜೆಪಿಯ ಭದ್ರತೆ ಕೋಟೆ ಎನಿಸಿರುವ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ , ಉಡುಪಿ ಹಾಗೂ ಮಡಿಕೇರಿಯಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯಲಿದೆ. ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲೂ ಬಿಜೆಪಿ ಮುಂಚೂಣಿಯಲ್ಲಿದ್ದರೂ ಕೆಲವು ಕಡೆ ಜೆಡಿಎಸ್ ಕಮಲವನ್ನು ಮುದುಡುವಂತೆ ಮಾಡಲಿದೆ.
ಇನ್ನು ಕಾಂಗ್ರೆಸ್ ವಿರುದ್ಧ ಜನತೆ ಕೆಲವು ಕಾರಣಗಳಿಗಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿರುವುದು, ಎಸಿಬಿ ದುರ್ಬಳಕೆ, ಕೆಪಿಎಸ್‍ಸಿ ಸಂಸ್ಥೆಗೆ ಶ್ಯಾಮ್ ಭಟ್‍ಗೆ ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನ ನೀಡಿರುವುದು ಭ್ರಷ್ಟಾಚಾರದ ಪ್ರಕರಣಗಳನ್ನು ಮರೆಮಾಚಿರುವುದು, ಅಕ್ರಮ ಗಣಿಗಾರಿಕೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಮತದಾರರ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದಾನೆ.
50ಕ್ಕೂ ಹೆಚ್ಚು ಶಾಸಕರಿಗೆ ಸೋಲು:
ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯದಂತೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‍ನ 50ಕ್ಕೂ ಹೆಚ್ಚು ಶಾಸಕರು ಸೋಲಲಿದ್ದಾರೆ ಎಂದು ತಿಳಿದುಬಂದಿದೆ.
ಲಿಂಗಾಯಿತ ಧರ್ಮದ ಪರ ಹೋರಾಟ ನಡೆಸುತ್ತಿರುವ ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ, ವಿನಯ್ ಕುಲಕರ್ಣಿ ,ಶರಣಪ್ರಕಾಶ್ ಪಾಟೀಲ್ ಸೋಲುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.