ಅಫ್ಜಲ್ ಪುರ್ ಶಾಸಕ ಮಾಲೀಕಯ್ಯ ಗುತ್ತೇದಾರ್ ನಾಳೆ ಕಾಂಗ್ರೆಸ್‍ಗೆ ಗುಡ್‍ಬೈ ಹೇಳುತ್ತಿದ್ದಾರೆ

ಬೆಂಗಳೂರು, ಮಾ.29- ಅಫ್ಜಲ್ ಪುರ್ ಶಾಸಕ ಮಾಲೀಕಯ್ಯ ಗುತ್ತೇದಾರ್ ನಾಳೆ ಕಾಂಗ್ರೆಸ್‍ಗೆ ಗುಡ್‍ಬೈ ಹೇಳುತ್ತಿದ್ದಾರೆ.

ಅವರ ಈ ನಡೆ ಹೈದರಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಭಾರೀ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿದೆ. ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ ಬಳಿಕ ಇನ್ನೆರಡು ದಿನಗಳಲ್ಲಿ ಮಾಲೀಕಯ್ಯ ಗುತ್ತೇದಾರ್ ಬಿಜೆಪಿ ಸೇರುತ್ತಿದ್ದಾರೆ.

ಕೆಲ ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಭೇಟಿ ಸಂದರ್ಭವೂ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆದರೆ, ಇದೀಗ ಮನಸ್ಸು ಬದಲಿಸಿರುವ ಗುತ್ತೇದಾರ್ ಕಮಲದತ್ತ ಚಿತ್ತ ಹರಿಸಿದ್ದಾರೆ.

ಸಚಿವ ಸ್ಥಾನದ ಜೊತೆ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕೆಂದು ಮಾಲೀಕಯ್ಯ ಗುತ್ತೇದಾರ್ ಬೇಡಿಕೆ ಇಟ್ಟಿದ್ದರು. ಆದರೆ, ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿಯತ್ತ ಗುತ್ತೇದಾರ್ ಮುಖ ಮಾಡಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಮಾಲೀಕಯ್ಯ ಗುತ್ತೇದಾರ್, ಪಕ್ಷ ಬಿಡುತ್ತಿರುವುದನ್ನ ಸ್ಪಷ್ಟಪಡಿಸಿದ್ದಾರೆ. ರಾಹುಲ್ ಗಾಂಧಿ ರಾಜ್ಯ ಭೇಟಿ ಸಂದರ್ಭ ನನ್ನನ್ನ ಭೇಟಿ ಮಾಡಿಸುವ ಸೌಜನ್ಯ ತೋರಲಿಲ್ಲ. ಯಾರಿಂದಲೂ ಸಂಧಾನ ನಡೆಸುವ ಯತ್ನ ಆಗಿಲ್ಲ. ಸಚಿವ ಸ್ಥಾನವಿರಲಿ ನಮಗೊಂದು ಯಾವುದೇ ಹುದ್ದೆಯನ್ನೂ ಕೊಟ್ಟಿಲ್ಲ. ಯಾವ ಪುರುಷಾರ್ಥಕ್ಕಾಗಿ ಮುಂದುವರೆಯಬೇಕು. ಸಿಎಂ ಸಿದ್ದರಾಮಯ್ಯ ಅವರಿಗೂ ಪಕ್ಷ ಬಿಡುವ ಬಗ್ಗೆ ತಿಳಿಸಿದ್ದೇನೆ ಎಂದು ಮಾಲೀಕಯ್ಯ ಗುತ್ತೇದಾರ್ ತಿಳಿಸಿದ್ದಾರೆ.

ಇವತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಡುತ್ತಿದ್ದು, ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ. ಇದೇವೇಳೆ, ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆಯಿಂದಲೇ ನನಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.
ನನಗೆ ಕಾಂಗ್ರೆಸ್ ಪಕ್ಷದಲ್ಲಿ ಸರಿಯಾಗಿ ಸ್ಥಾನಮಾನ ನೀಡುತ್ತಿಲ್ಲ. ಸಿ.ಎಂ ಈ ಹಿಂದೆ ಸಚಿವ ಸ್ಥಾನ ವಿಸ್ತರಣೆ ವೇಳೇಯಲ್ಲಿ ನನಗೆ ನೀಡಿದ ಮಾತಿಗೆ ಅನುಗುಣವಾಗಿ ನಾನು ಇಲ್ಲಿ ತನಕ ಸುಮ್ಮನಿದ್ದೆ ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ.ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಬಗ್ಗೆ ಮೊದಲು ಸಿಎಂ ಸಿದ್ದರಾಮಯ್ಯ ಅವರಿಗೆ ಮೊದಲು ತಿಳಿಸಿ ನಂತರ ಬೆಳಗ್ಗೆ 11 ಗಂಟೆ ಸುಮಾರಿಗೆ ಸ್ಪಿಕರ್ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದರು.
ನನ್ನ ರಾಜಕೀಯ ಭವಿಷ್ಯವನ್ನು ಜೆಡಿಎಸ್ ಇಲ್ಲ ಬಿಜೆಪಿಯೊಂದಿಗೆ ಕಟ್ಟುಕೊಳ್ಳುವೆ. ಇದಲ್ಲದೆ, ನಮ್ಮ ಭಾಗದ ಪ್ರಿಯಾಂಕ ಹಾಗೂ ಶರಣಬಸಪ್ಪ ಪಾಟೀಲ್ ಪಟ್ಟಭದ್ರ ಹಿತಾಸಕ್ತಿ ಹೊಂದಿದ್ದಾರೆ. ನನ್ನ ರಾಜಕೀಯವಾಗಿ ಮುಗಿಸಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ನಾನು ನನ್ನ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದಿದ್ದಾರೆ.

ಹಾಗೆ ನೋಡಿದರೆ ಗುತ್ತೇದಾರ್ ಅಸಮಾಧಾನ ಹೊಂದಿದ್ದು ಇದೇ ಮೊದಲಲ್ಲ. ಈ ಹಿಂದೆ ಸಚಿವ ಸಂಪುಟ ವಿಸ್ತರಣೆಯ ವೇಳೆಯೂ ತಮ್ಮನ್ನು ಕಡೆಗಡಿಸಲಾಗುತ್ತದೆ ಎಂದು ಪಕ್ಷದ ವಿರುದ್ದ ಬಹಿರಂಗವಾಗವಾಗಿಯೇ ಕಿಡಿಕಾರಿದ್ದರು.
ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಂ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ರಾಜಕೀಯ ಭವಿಷ್ಯಕ್ಕೆ ಮುಳ್ಳಗಿದ್ದಾರೆಂಬುದು ಅವರ ಆರೋಪವಾಗಿತ್ತು. ಪ್ರಿಯಾಂಕ ಖರ್ಗೆ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಾಗಲೇ ಸಿದ್ದರಾಮಯ್ಯ ವಿರುದ್ದ ಅಪಸ್ವರ ತೆಗೆದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ