ಜನರಲ್ಲಿ ಮತದಾನದ ಬಗ್ಗೆ ಅರಿವು ಕಾರ್ಯಕ್ರಮ

ಬೆಂಗಳೂರು, ಮಾ.29- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಸಿಕ್ಕಿರುವ ಪ್ರಮುಖ ಅಸ್ತ್ರ ಮತದಾನ. ಮತದಾರ ಪ್ರಭು ತಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಮಾಡಿಕೊಡಲಾಗಿದೆ. ಮತ ಚಲಾಯಿಸುವ ಹಕ್ಕು ಪಡೆದಿದ್ದರೂ ಬಹಳಷ್ಟು ಮಂದಿ ಮತದಾನದಿಂದ ದೂರ ಉಳಿಯುತ್ತಾರೆ.

ಹೀಗಾಗಿ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಹಲವು ರೀತಿಯ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ಹಮ್ಮಿಕೊಳ್ಳುತ್ತ ಬರಲಾಗಿದೆ. ಆದರೆ, ಇದುವರೆಗೂ ಗರಿಷ್ಠ ಪ್ರಮಾಣದ ಮತದಾನ ಮಾತ್ರ ನಡೆದಿಲ್ಲ.
ರಾಜ್ಯದ ಕಳೆದ 60 ವರ್ಷಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮತದಾನವನ್ನು ಅವಲೋಕಿಸಿದರೆ 1978ರಲ್ಲಿ ಅತ್ಯಧಿಕ ಪ್ರಮಾಣದ ಮತದಾನವಾಗಿದೆ. ಆಗ ಶೇ.71.90ರಷ್ಟು ಮತದಾನವಾಗಿರುವುದು ಇದುವರೆಗಿನ ಗರಿಷ್ಟ ದಾಖಲೆಯಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಕೇಂದ್ರ ಚುನಾವಣಾ ಆಯೋಗ ನಾನಾ ರೀತಿಯ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಆದರೂ ವಿಧಾನಸಭೆ ಚುನಾವಣೆಗಳಲ್ಲಿ ಸರಾಸರಿ ಶೇ.60 ರಿಂದ 65ರಷ್ಟು ಮತದಾನ ನಡೆದಿರುವ ನಿದರ್ಶನಗಳಿವೆ.

ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಈ ಬಾರಿ ಚುನಾವಣಾ ಆಯೋಗ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್ ಅವರನ್ನು ಬಳಸುತ್ತಿದೆ. ಜತೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಎಂದು ಮನವಿ ಮಾಡುತ್ತ ಬಂದಿದೆ.

ಕೇಂದ್ರ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ರಾಜ್ಯದ ಎರಡನೆ ವಿಧಾನಸಭೆಯಿಂದ 14ನೆ ವಿಧಾನಸಭೆವರೆಗೂ ಮತದಾನದ ಪ್ರಮಾಣದಲ್ಲಿ ಏರಿಳಿತವಾಗಿರುವುದನ್ನು ಗಮನಿಸಬಹುದಾಗಿದೆ.
1957ರಲ್ಲಿ ರಾಜ್ಯದ ಎರಡನೆ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 1,00,06,931ನಷ್ಟಿದ್ದು, ಮತ ಚಲಾವಣೆ ಮಾಡಿದವರು 64,20,159ರಷ್ಟು ಮತದಾರರು ಮಾತ್ರ. ಒಟ್ಟಾರೆ ಶೇ.51.30ಯಷ್ಟು ಮತ ಚಲಾವಣೆಯಾಗಿತ್ತು.
1962ರಲ್ಲಿ ಮೂರನೆ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಶೇ.59ರಷ್ಟು ಮತದಾನವಾಗಿತ್ತು. 1,13,53,892 ಮತದಾರರ ಪೈಕಿ 66,99,286 ಮತದಾರರು ಮತ ಚಲಾಯಿಸಿದ್ದರು.

1967ರಲ್ಲಿ ನಡೆದ ನಾಲ್ಕನೆ ವಿಧಾನಸಭೆ ಚುನಾವಣೆಯಲ್ಲಿ ಶೇ.63.10ಯಷ್ಟು ಮತದಾನವಾಗಿತ್ತು. 1,26,69,162 ಮತದಾರರ ಪೈಕಿ 79,94,419 ಮತದಾರರು ಮತ ಚಲಾವಣೆ ಮಾಡಿದ್ದರು.
ನಿರಂತರವಾಗಿ ಎರಡು ವಿಧಾನಸಭೆಗಳಲ್ಲಿ ಮತದಾನದ ಪ್ರಮಾಣ ಏರಿಕೆ ಕಂಡುಬಂದಿತ್ತು. ಆದರೆ, 1972ರಲ್ಲಿ ಐದನೆ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಇಳಿಕೆಯಾಗಿದೆ. ಆಗ ಶೇ.61.57ರಷ್ಟು ಮತದಾನವಾಗಿತ್ತು. 1,50,84,388 ಮತದಾರರ ಪೈಕಿ 92,86,389 ಮತದಾರರು ಮಾತ್ರ ಮತಚಲಾವಣೆ ಮಾಡಿದ್ದರು.

1978ರಲ್ಲಿ ನಡೆದ ಆರನೆ ವಿಧಾನಸಭೆ ಚುನಾವಣೆಯಲ್ಲಿ ಐದನೆ ವಿಧಾನಸಭೆ ಚುನಾವಣೆಗಿಂತ ಶೇ.10ರಷ್ಟು ಹೆಚ್ಚು ಮತದಾನವಾಗಿದೆ. ಆಗ ಶೇ.71.90ಯಷ್ಟು ಮತದಾನವಾಗಿದ್ದು, 1,79,13,358 ಮತದಾರರು, 1,28,79,969 ಮಂದಿ ಮತದಾರರು ಮತದಾನ ಮಾಡಿದ್ದರು.

1983ರಲ್ಲಿ ನಡೆದ ಏಳನೆ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಮತದಾನದ ಪ್ರಮಾಣ ಶೇ.6ರಷ್ಟು ಇಳಿಕೆಯಾಗಿದೆ. ಆಗ 2,01,72,133 ಮತದಾರರ ಪೈಕಿ 1,32,46,269 ಮತದಾರರು ಮತದಾನ ಮಾಡಿದ್ದು, ಒಟ್ಟಾರೆ ಶೇ.65.67ರಷ್ಟು ಮತದಾನವಾಗಿತ್ತು.
ರಾಜ್ಯದ ಎಂಟನೆ ವಿಧಾನಸಭೆಗೆ 1985ರಲ್ಲಿ ನಡೆದ ಚುನಾವಣೆಯಲ್ಲಿ ಶೇ.67.25ರಷ್ಟು ಮತದಾನವಾಗಿತ್ತು. ಆಗ 2,22,81,366 ಮತದಾರರ ಪೈಕಿ 1,49,84,698 ಮತದಾರರು ಮತ ಚಲಾವಣೆ ಮಾಡಿದ್ದರು.
ಒಂಬತ್ತನೆ ವಿಧಾನಸಭೆಗೆ 1989ರಲ್ಲಿ ಚುನಾವಣೆ ನಡೆದಾಗ ಶೇ.67.57ರಷ್ಟು ಮತದಾನವಾಗಿದ್ದು, ಕಳೆದ ಎರಡು ಚುನಾವಣೆಯಲ್ಲಿ ಮಾತ್ರ ಹೆಚ್ಚಿನ ಮತದಾನವಾಗಿತ್ತು. ಆಗ 2,86,24,013 ಮತದಾರರ ಪೈಕಿ 1,93,40,042 ಮತದಾರರು ಮತ ಚಲಾವಣೆ ಮಾಡಿದ್ದರು.

1994ರಲ್ಲಿ ನಡೆದ 10ನೆ ವಿಧಾನಸಭೆ ಚುನಾವಣೆಯಲ್ಲೂ ಕೂಡ ಮತದಾನದ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಆಗ 3,08,35,415 ಮತದಾರರ ಪೈಕಿ 2,11,49,966 ಮತದಾರರು ಮತದಾನ ಮಾಡಿದ್ದು, ಒಟ್ಟಾರೆ ಶೇ.68.59ರಷ್ಟು ಮತದಾನವಾಗಿತ್ತು.
1999ರಲ್ಲಿ ನಡೆದ 11ನೆ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಮತ್ತೆ ಇಳಿಕೆಯಾಗಿದೆ. 3,42,84,098 ಮತದಾರರ ಪೈಕಿ 2,31,94,283 ಮತದಾರರು ಮತ ಚಲಾವಣೆ ಮಾಡಿದ್ದು, ಒಟ್ಟಾರೆ ಶೇ.67.65ರಷ್ಟು ಮತದಾನ ಆಗಿತ್ತು.

2004ರಲ್ಲಿ ನಡೆದ 12ನೆ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮತ್ತಷ್ಟು ಇಳಿಕೆಯಾಗಿದೆ. ಶೇ.65.17ರಷ್ಟು ಮತದಾನವಾಗಿತ್ತು. 3,85,86,754 ಮತದಾರರ ಪೈಕಿ 2,51,45,590 ಮತದಾರರು ಮತದಾನ ಮಾಡಿದ್ದರು.
2008ರಲ್ಲಿ ನಡೆದ 13ನೆ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಮತ್ತೆ ಇಳಿಕೆಯಾಗಿದೆ. ಶೇ.64.68ರಷ್ಟು ಮತದಾನವಾಗಿತ್ತು. 4,03,63,725 ಮತದಾರರ ಪೈಕಿ 2,61,07,566 ಮತದಾರರು ಮತದಾನ ಮಾಡಿದ್ದರು.

2013ರಲ್ಲಿ ನಡೆದ 14ನೆ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ.7ರಷ್ಟು ಹೆಚ್ಚಳವಾಗಿದೆ. ಒಟ್ಟಾರೆ ಶೇ.71.45ರಷ್ಟು ಮತದಾನವಾಗಿದ್ದು, 4,36,85,739 ಮತದಾರರ ಪೈಕಿ 3,12,13,124 ಮಂದಿ ಮತ ಚಲಾವಣೆ ಮಾಡಿದ್ದರು.
ಈಗ ನಡೆಯುವ 15ನೆ ವಿಧಾನಸಭೆ ಚುನಾವಣೆಯಲ್ಲಿ ಯುವ ಮತದಾರರ ಸಂಖ್ಯೆ ಏರಿಕೆಯಾಗಿದ್ದು, ಮತದಾನದ ಪ್ರಮಾಣ ಹೆಚ್ಚಳವಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ