ಬೆಂಗಳೂರು, ಮಾ.29- ಜೈಲಿಗೆ ಹೋಗಿ ಬಂದಂತಹ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಂದ ಪಾಠ ಹೇಳಿಸಿಕೊಳ್ಳುವ ಸ್ಥಿತಿ ಬಿಜೆಪಿಗೆ ಬಂದಿರುವುದು ದುರಂತ. ರಾಜ್ಯದ ಜನತೆಯ ಮುಂದೆ ಶಾ ಅವರ ಡ್ರಾಮಾಬಾಜಿ ನಡೆಯುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಕರ್ನಾಟಕಕ್ಕೆ ಬಂದಾಗಲೆಲ್ಲಾ ನಮ್ಮ ರಾಜ್ಯದ ರಾಜಕಾರಣಿಗಳ ಬಗ್ಗೆ ತೀವ್ರ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುವೆಂಪು ಅವರ ಪುಸ್ತಕ ಓದಿ ಎಂದು ಸಲಹೆ ನೀಡುತ್ತಾರೆ. ಕುವೆಂಪು ಬಗ್ಗೆ ಅಮಿತ್ ಶಾಗೆ ಏನು ಗೊತ್ತಿದೆ ? ಕುವೆಂಪು ಅವರ ಯಾವ ಪುಸ್ತಕವನ್ನು ಅಮಿತ್ ಶಾ ಓದಿದ್ದಾರೆ ಎಂದು ಪ್ರಶ್ನಿಸಿದರು.
ಕುವೆಂಪು ಅವರು ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ. ಆದರೆ, ಬಿಜೆಪಿ ಅದಕ್ಕೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿದೆ. ಕುವೆಂಪು ಅವರ ಆದರ್ಶಕ್ಕೂ, ಬಿಜೆಪಿಯವರ ಸಿದ್ದಾಂತಕ್ಕೂ ಒಂದಕ್ಕೊಂದು ಹೊಂದಾಣಿಕೆ ಇಲ್ಲ ಎಂದರು.
ಅಮಿತ್ ಶಾ ಜೈಲಿಗೆ ಹೋಗಿ ಬಂದ ವ್ಯಕ್ತಿ. ಅಂತಹವರಿಂದ ನೀತಿ ಪಾಠ ಹೇಳಿಸಿಕೊಳ್ಳುವ ದುಸ್ಥಿತಿ ಬಿಜೆಪಿಗೆ ಬರಬಾರದಿತ್ತು. ಶಾ ರಾಜ್ಯಕ್ಕೆ ಬಂದಾಗಲೆಲ್ಲಾ ನಮ್ಮ ನಾಯಕರನ್ನು ಅವಹೇಳನ ಮಾಡುತ್ತಿರುವುದನ್ನು ಜನ ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಅಮಿತ್ ಶಾ ಅವರನ್ನು ಚಾಣಕ್ಯ ಎಂದು ಹೇಳುತ್ತಾರೆ. ನೀತಿ, ಸಿದ್ಧಾಂತ ಬಿಟ್ಟು ರಾಜಕಾರಣ ಮಾಡಿದರೆ ಯಾರು ಬೇಕಾದರೂ ಚಾಣಕ್ಯರಾಗಬಹುದು. ಕೇವಲ ಅಧಿಕಾರಗಳಿಸುವುದಷ್ಟೇ ಉದ್ದೇಶವಾದರೆ ರಾಜಕಾರಣದಲ್ಲಿ ಚಾಣಕ್ಯರಾಗುವುದು ದೊಡ್ಡದಲ್ಲ ಎಂದರು.
ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿರುವ ಅಮಿತ್ ಶಾ ಮಠಾಧೀಶರ ಕಾಲಿಗೆ ಬೀಳುವಾಗ ಫೆÇೀಟೋ ತೆಗೆಯಿರಿ ಎಂದು ಹೇಳುತ್ತಾರೆ. ಇಂತಹ ಡ್ರಾಮಾಬಾಜಿಗಳನ್ನು ಜನ ಸಾಕಷ್ಟು ನೋಡಿದ್ದಾರೆ. ಇದ್ಯಾವೂದು ವರ್ಕ್ ಔಟ್ ಹಾಗುವುದಿಲ್ಲ. ನಾಡಿನ ಜನರು ಎನ್ನವನ್ನು ಬಲ್ಲರು ಎಂದು ಹೇಳಿದರು.
ಕಾಂಗ್ರೆಸ್‍ನಿಂದ ಯಾವುದೇ ಶಾಸಕರು ಬಿಜೆಪಿ ಸೇರುತ್ತಿಲ್ಲ. ಆದಾಯ ತೆರಿಗೆ ಇಲಾಖೆ, ಸಿಬಿಐಯನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ಶಾಸಕರನ್ನು ಬೆದರಿಸಿ ಸೆಳೆದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಆದರೂ ಫಲ ಸಿಕ್ಕಿಲ್ಲ. ನಾವು ಯಾರನ್ನೂ ಹುಡುಕಿಕೊಂಡು ಹೋಗಿ ಕಾಂಗ್ರೆಸ್ ಸೇರಿ ಎಂದು ಬಲವಂತ ಮಾಡುತ್ತಿಲ್ಲ. ಪಕ್ಷಕ್ಕೆ ಬರುವವರನ್ನೂ ಬೇಡ ಎನ್ನುವುದಿಲ್ಲ ಎಂದು ತಿಳಿಸಿದರು.
ಜೆಡಿಎಸ್ ಜತೆ ಮೈತ್ರಿ ನಮಗೆ ಅನಿವಾರ್ಯವಲ್ಲ. ರಾಜ್ಯದ 224 ಕ್ಷೇತ್ರಗಳಲ್ಲೂ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಜಾತ್ಯಾತೀತ ಮತಗಳು ವಿಭಜನೆಯಾಗಬಾರದು, ಕೋಮುವಾದಿ ಶಕ್ತಿಗಳು ಗೆಲ್ಲಬಾರದು ಎಂಬ ಹಿನ್ನೆಲೆಯಲ್ಲಿ ಸಂವಿಧಾನ ಉಳುವಿಗಾಗಿ ಕರ್ನಾಟಕ ಸಂಘಟನೆ ಕಾರ್ಯಕರ್ತರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಜೆಡಿಎಸ್‍ನವರು ಮೊದಲು ತಮ್ಮ ನಿಲುವನ್ನು ಸ್ಪಷ್ಟಪಡಿಸಲು. ಈಗಾಗಲೇ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದು, ಅಧಿಕಾರ ಹಂಚಿಕೊಂಡಿದ್ದಾರೆ. ಅನಂತರವೂ ಅವರ ಪಕ್ಷ ಜಾತ್ಯಾತೀತ ಎಂದು ಪದ ಬಳಕೆ ಮಾಡುವುದು ಹಾಸ್ಯಾಸ್ಪದ ಎಂದರು.