ಮಾಲೂರಿನ ರಾಸಾಯನಿಕ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ:

ಕೋಲಾರ, ಮಾ.29-ಮಾಲೂರಿನ ಕೆಐಡಿಬಿ ಕೈಗಾರಿಕಾ ಪ್ರದೇಶದ 3ನೇ ಹಂತದಲ್ಲಿರುವ ರಾಸಾಯನಿಕ ತಯಾರಿಕಾ ಕಾರ್ಖಾನೆಗೆ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ಜ್ವಾಲೆ ಆಕಾಶದೆತ್ತರಕ್ಕೆ ಹಬ್ಬಿ, ಸ್ಥಳೀಯ ನಿವಾಸಿಗಳು ದಿಕ್ಕಾಪಾಲಾಗಿ ಓಡಿರುವ ಘಟನೆ ನಡೆದಿದೆ.
ಬೆಳಿಗ್ಗೆ 10 ಗಂಟೆ ಸುಮಾರಿನಲ್ಲಿ ಈ ಅನಾಹುತ ಸಂಭವಿಸಿದ್ದು, ಬೃಹದಾಕಾರದ ಬೆಂಕಿ ಜ್ವಾಲೆ ಕ್ಷಣಮಾತ್ರದಲ್ಲಿ ಫ್ಯಾಕ್ಟರಿಯೆಲ್ಲ ಆವರಿಸಿ ಸುಮಾರು 200 ಮೀಟರ್ ಎತ್ತರದವರೆಗೆ ರಾಸಾಯನಿಕ ವಸ್ತುಗಳು ಸಿಡಿಯುತ್ತಿವೆ. ಒಂದು ಕಿಲೋಮೀಟರ್‍ವರೆಗೆ ಆಯಿಲ್ ಎಗರುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ಭಯಭೀತರಾಗಿ ಮನೆಯಿಂದ ಹೊರಗೋಡಿ ಹೋಗಿದ್ದಾರೆ.
ಪಟ್ಟಣದ ಸಮೀಪದಲ್ಲೇ ಈ ಪ್ರದೇಶ ಇರುವುದರಿಂದ ದಟ್ಟ ಹೊಗೆ ಇಡೀ ಪಟ್ಟಣವನ್ನೇ ಆವರಿಸಿ ಕೆಟ್ಟ ವಾಸನೆಯಿಂದ ಸ್ಥಳೀಯರು ಉಸಿರಾಡಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬೆಳಗ್ಗೆ ಕಾರ್ಮಿಕರು ಎಂದಿನಂತೆ ಕೆಲಸಕ್ಕೆ ಬಂದಿದ್ದು, ಅವರೆಲ್ಲ ಒಳಗಿದ್ದರು ಎನ್ನಲಾಗಿದೆ. ಅವರಿಗೆಲ್ಲ ಏನಾಗಿದೆ ಎಂಬ ಬಗ್ಗೆ ಆತಂಕ ಶುರುವಾಗಿದೆ. ಮೂಲಗಳ ಪ್ರಕಾರ ಕೆಲವರು ಗಂಭೀರ ಗಾಯಗೊಂಡಿದ್ದಾರೆ, ಇನ್ನು ಕೆಲವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಹಾಗೂ ತುರ್ತು ಪರಿಹಾರ ತಂಡ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ಬೆಂಕಿ ಕೆನ್ನಾಲಿಗೆ ಹಾಗೂ ದಟ್ಟ ಹೊಗೆಯಿಂದಾಗಿ ಕಾರ್ಖಾನೆ ಹತ್ತಿರ ಹೋಗಲೂ ಸಹ ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಿಂದ ತುರ್ತು ಕಾರ್ಯಾಚರಣೆ ಪಡೆ ಕರೆಸಿಕೊಳ್ಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ