ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಆಯಾ ಪಕ್ಷಗಳ ಕೆಲವು ನಾಯಕರುಗಳಿಗೆ ಗೆಲುವಿನ ನಾಗಾಲೋಟಕ್ಕೆ ತೊಡರುಗಾಲಾಗುವ ಸಾಧ್ಯತೆ

ಬೆಂಗಳೂರು, ಮಾ.29- ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಆಯಾ ಪಕ್ಷಗಳ ಕೆಲವು ನಾಯಕರುಗಳಿಗೆ ಗೆಲುವಿನ ನಾಗಾಲೋಟಕ್ಕೆ ತೊಡರುಗಾಲಾಗುವ ಸಾಧ್ಯತೆಗಳಿವೆ.

ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿರುವ ಕೆಲವರು ಪಕ್ಷದ ವಿರುದ್ಧ ಬಂಡಾಯ ಎದ್ದಿರುವುದು ಮೂರೂ ಪಕ್ಷಗಳ ನಾಯಕರ ನಿದ್ದೆಗೆಡಿಸಿದೆ.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಸುರೇಶ್‍ಕುಮಾರ್ ಸೋಲಿಲ್ಲದ ಸರದಾರರೆನಿಸಿಕೊಂಡಿದ್ದಾರೆ. ಈ ಬಾರಿಯೂ ಅವರೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಆದರೆ, ಸುರೇಶ್‍ಕುಮಾರ್ ಅವರ ಕಡು ವಿರೋಧಿ ಎಂದೇ ಗುರುತಿಸಿಕೊಂಡಿರುವ ಅದೇ ಪಕ್ಷದ ಬಿಬಿಎಂಪಿ ಮಾಜಿ ಸದಸ್ಯ ಮಂಜುನಾಥ್ ಅವರು ಈ ಬಾರಿ ರಾಜಾಜಿನಗರದಲ್ಲಿ ನನಗೇ ಟಿಕೆಟ್ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.

ಈ ಹಿಂದೆ ಬಿಬಿಎಂಪಿ ಸದಸ್ಯರಾಗಿದ್ದಾಗಲೂ ಶಾಸಕ ಸುರೇಶ್‍ಕುಮಾರ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದ ಮಂಜುನಾಥ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ.
ನನಗೆ ಟಿಕೆಟ್ ಕೈ ತಪ್ಪಲು ಸುರೇಶ್‍ಕುಮಾರ್ ಅವರೇ ಕಾರಣ ಎಂಬ ಜಿದ್ದಿಗೆ ಬಿದ್ದಿರುವ ಮಂಜುನಾಥ್ ಅವರು ಈ ಬಾರಿ ನನಗೇ ಟಿಕೆಟ್ ನೀಡುವಂತೆ ಬಿಜೆಪಿಗೆ ಅರ್ಜಿ ಸಲ್ಲಿಸಿದ್ದಾರೆ.
ಆರ್‍ಎಸ್‍ಎಸ್‍ನಲ್ಲಿ ಉತ್ತಮ ಹೆಸರು ಗಳಿಸಿಕೊಂಡಿರುವ ಮಂಜುನಾಥ್ ಅವರು ಈ ಬಾರಿ ಟಿಕೆಟ್ ದೊರೆಯದಿದ್ದರೆ ಸುರೇಶ್‍ಕುಮಾರ್ ಅವರ ವಿರುದ್ಧ ಕೆಲಸ ಮಾಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ರವಿ ಸುಬ್ರಹ್ಮಣ್ಯ ಅವರಿಗೂ ಸಂಕಟ: ಬಸವನಗುಡಿ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಇಲ್ಲಿ ಬ್ರಾಹ್ಮಣ ಮತದಾರರೇ ನಿರ್ಣಾಯಕ. ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಬ್ರಾಹ್ಮಣ ಅಭ್ಯರ್ಥಿ ನಿರಾಯಾಸವಾಗಿ ಗೆದ್ದು ಬರುತ್ತಾರೆ.

ಹಾಲಿ ಶಾಸಕ ರವಿ ಸುಬ್ರಹ್ಮಣ್ಯ ಅವರು ಈಗಾಗಲೇ ಎರಡು ಬಾರಿ ಶಾಸಕರಾಗಿ ಆರಿಸಿ ಬಂದಿದ್ದು, ಮತ್ತೊಮ್ಮೆ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಬಸವನಗುಡಿ ವಾರ್ಡ್‍ನಿಂದ ಈಗಾಗಲೇ ಐದು ಬಾರಿ ಬಿಬಿಎಂಪಿ ಸದಸ್ಯರಾಗಿ ಮೇಯರ್, ಆಡಳಿತ ಪಕ್ಷ, ವಿರೋಧ ಪಕ್ಷ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಆಯ್ಕೆಯಾಗಿ ಪಾಲಿಕೆಯಲ್ಲೇ ಅತ್ಯಂತ ಹಿರಿಯ ಸದಸ್ಯ ಎಂಬ ಖ್ಯಾತಿಯ ಕಟ್ಟೆ ಸತ್ಯನಾರಾಯಣ ಅವರು ಈ ಬಾರಿ ನನಗೆ ಬಸವನಗುಡಿಯಿಂದ ಬಿಜೆಪಿ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಈಗಾಗಲೇ ಪಾಲಿಕೆಯಲ್ಲಿ ಐದು ಬಾರಿ ಸದಸ್ಯರಾಗಿ ಆಯ್ಕೆಯಾಗಿರುವುದರಿಂದ ಮುಂದೆ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕು ಎಂದು ಕಳೆದ ಬಾರಿಯೇ ಕಟ್ಟೆ ಸತ್ಯನಾರಾಯಣ ಪಟ್ಟು ಹಿಡಿದಿದ್ದರು. ಆದರೆ, ಕೇಂದ್ರ ಸಚಿವ ಅನಂತ್‍ಕುಮಾರ್ ಅವರು ಮುಂದಿನ ಬಾರಿ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು.

ಕೊಟ್ಟ ಮಾತಿನಂತೆ ಈ ಬಾರಿ ಬಸವನಗುಡಿಯಿಂದ ನನಗೇ ಟಿಕೆಟ್ ನೀಡಬೇಕು ಎಂದು ಕಟ್ಟೆ ಸತ್ಯನಾರಾಯಣ ಪಟ್ಟು ಹಿಡಿದಿರುವುದು ಬಿಜೆಪಿ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.
ಅಯ್ಯಂಗಾರ್ ಪಟ್ಟು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲೂ ಬ್ರಾಹ್ಮಣ ಮತದಾರರೇ ನಿರ್ಣಾಯಕ. ಇಲ್ಲಿ ಡಾ.ಅಶ್ವತ್ಥ ನಾರಾಯಣ್ ಅವರು ಎರಡು ಬಾರಿ ಬಿಜೆಪಿ ಶಾಸಕರಾಗಿ ಆರಿಸಿ ಬಂದು ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದಾರೆ.

ಆದರೆ, ಇವರ ಕನಸಿಗೆ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪ್ರಕಾಶ್ ಅಯ್ಯಂಗಾರ್ ಕಂಟಕರಾಗಿದ್ದಾರೆ.
ಈ ಭಾಗದಲ್ಲಿ ಸಮಾಜಸೇವೆ ಮಾಡಿಕೊಂಡು ಉತ್ತಮ ವ್ಯಕ್ತಿ ಎಂದೇ ಗುರುತಿಸಿಕೊಂಡಿರುವ ಪ್ರಕಾಶ್ ಅಯ್ಯಂಗಾರ್ ಅವರು ಈ ಬಾರಿ ಮಲ್ಲೇಶ್ವರಂನಿಂದ ಬ್ರಾಹ್ಮಣರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇನ್ನು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‍ಗಾಗಿ ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರಪ್ಪ ಮತ್ತು ತುಳಸಿ ಮುನಿರಾಜು ನಡುವೆ ಬಿಗ್‍ಫೈಟ್ ನಡೆಯುತ್ತಿದೆ. ಇವರಿಬ್ಬರಲ್ಲಿ ಯಾರಿಗೇ ಬಿಜೆಪಿ ಟಿಕೆಟ್ ದೊರೆತರೂ ಮತ್ತೊಬ್ಬರು ಪಕ್ಷ ತೊರೆದು ಜೆಡಿಎಸ್ ಕದ ತಟ್ಟುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿಬರುತ್ತಿವೆ.

ಇವರಿಬ್ಬರ ನಡುವಿನ ಜಗಳದಲ್ಲಿ ಖ್ಯಾತ ಚಿತ್ರನಟ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅಥವಾ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪುತ್ರಿ ಶಾಂಭವಿ ಅವರು ಬಿಜೆಪಿ ಅಭ್ಯರ್ಥಿಯಾದರೂ ಅಚ್ಚರಿ ಪಡುವಂತಿಲ್ಲ.
ಚಿಕ್ಕಪೇಟೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಆಂಜನೇಯನ ಬಾಲದಂತೆ ಬೆಳೆಯುತ್ತಿದೆ. ಇಲ್ಲಿ ಮಾಜಿ ಶಾಸಕ ಹೇಮಚಂದ್ರ ಸಾಗರ್, ಉದಯ್ ಗರುಡಾಚಾರ್ ಮತ್ತು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರ ನಡುವೆ ಜಂಗಿಕುಸ್ತಿ ಆರಂಭವಾಗಿದೆ.

ಉದಯ್ ಗರುಡಾಚಾರ್ ಅವರು ಈ ಬಾರಿ ಬಿಜೆಪಿ ಟಿಕೆಟ್ ದೊರೆಯದಿದ್ದರೆ ಜೆಡಿಎಸ್ ಸೇರುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಚಿಕ್ಕಪೇಟೆಯ ಗಲ್ಲಿ ಗಲ್ಲಿಗಳಲ್ಲಿ ಗುಸು ಗುಸು ಕೇಳಿಬರುತ್ತಿದೆ.
ಇನ್ನು ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಎನ್.ಆರ್.ರಮೇಶ್ ಅವರಿಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ತಪ್ಪಿದರೆ ಅವರು ಯಾವ ನಿರ್ಧಾರ ಕೈಗೊಳ್ಳುವರೋ ಎಂಬುದು ಕುತೂಹಲ ಮೂಡಿಸಿದೆ.

ಅದೇ ರೀತಿ ಪದ್ಮನಾಭನಗರ, ಸರ್ವಜ್ಞನಗರ, ವಿಜಯನಗರ, ಗೋವಿಂದರಾಜನಗರ, ಕೆಆರ್ ಪುರ ಮತ್ತಿತರ ವಿಧಾನಸಭಾ ಕ್ಷೇತ್ರಗಳಲ್ಲೂ ಗೊಂದಲವಿದೆ.
ಕೈನಲ್ಲೂ ಬಿಕ್ಕಟ್ಟು: ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈ ಟಿಕೆಟ್‍ಗಾಗಿ ಮಾಜಿ ಮೇಯರ್ ಜಿ.ಪದ್ಮಾವತಿ ಮತ್ತು ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಮಂಜುಳಾ ನಾಯ್ಡು ಅವರ ನಡುವೆ ಹಗ್ಗ-ಜಗ್ಗಾಟ ನಡೆಯುತ್ತಿದೆ. ಇವರಿಬ್ಬರಲ್ಲಿ ಯಾರಿಗೇ ಟಿಕೆಟ್ ದೊರೆತರೂ ಮತ್ತೊಬ್ಬರು ಅವರ ವಿರುದ್ಧ ಕೆಲಸ ಮಾಡುವುದು ನಿಶ್ಚಿತ. ಒಬ್ಬರ ವಿರುದ್ಧದ ಆರೋಪಗಳ ಪಟ್ಟಿ ಮತ್ತೊಬ್ಬರ ಕೈಲಿ, ಮತ್ತೊಬ್ಬರ ಆರೋಪಗಳ ಪಟ್ಟಿ ಇನ್ನೊಬ್ಬರ ಕೈನಲ್ಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಒಬ್ಬರಿಗೆ ಇಲ್ಲಿ ಹರಿಪ್ರಸಾದ್ ಗಾಡ್‍ಫಾದರ್ ಆದರೆ ಮತ್ತೊಬ್ಬರಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೃಪಾಶೀರ್ವಾದವಿದೆ. ಇವರಿಬ್ಬರ ನಡುವಿನ ಗದ್ದಲದಲ್ಲಿ ಮೂರನೆ ವ್ಯಕ್ತಿಗೆ ಟಿಕೆಟ್ ನೀಡಿದರೂ ಅಚ್ಚರಿ ಪಡುವಂತಿಲ್ಲ.

ಇನ್ನು ರಾಜರಾಜೇಶ್ವರಿನಗರ ವಾರ್ಡ್‍ನಲ್ಲಿ ಶಾಸಕ ಮುನಿರತ್ನ ಅವರ ವಿರುದ್ಧ ಅದೇ ಪಕ್ಷದ ಬಿಬಿಎಂಪಿ ಸದಸ್ಯೆ ಆಶಾ ಸುರೇಶ್ ತಿರುಗಿ ಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ತಮ್ಮದೇ ಪಕ್ಷದ ಶಾಸಕನ ವಿರುದ್ಧ ಪ್ರತ್ಯಕ್ಷವಾಗಿಯೇ ಕೆಲಸ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಇವರಿಗೆ ಕಾಂಗ್ರೆಸ್‍ನ ಕೆಲ ಮಾಜಿ ಸದಸ್ಯರು ಹಾಗೂ ಬಿಜೆಪಿ ಮತ್ತು ಜೆಡಿಎಸ್‍ನ ಬಿಬಿಎಂಪಿ ಸದಸ್ಯರು ಸಾಥ್ ನೀಡಲು ಮುಂದಾಗಿರುವುದು ಮುನಿರತ್ನ ಅವರ ನಿದ್ದೆಗೆಡಿಸಿದೆ.
ಪುಲಿಕೇಶಿನಗರ, ಮಹದೇವಪುರ, ಸರ್ ಸಿ.ವಿ.ರಾಮನ್ ನಗರ ಮತ್ತಿತರ ವಿಧಾನಸಭಾ ಕ್ಷೇತ್ರಗಳಲ್ಲೂ ಕೈ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಈ ಕ್ಷೇತ್ರಗಳಲ್ಲಿ ಒಬ್ಬರಿಗೆ ಟಿಕೆಟ್ ದೊರೆತರೆ ಮತ್ತೊಬ್ಬರು ಎದುರಾಳಿಗಳಾಗಿ ಪರಿವರ್ತನೆಗೊಳ್ಳುವುದು ಗ್ಯಾರಂಟಿ.
ಜೆಡಿಎಸ್‍ಗೂ ಗ್ರಹಣ: ರಾಷ್ಟ್ರೀಯ ಪಕ್ಷಗಳ ಅತೃಪ್ತರಿಗೆ ಗಾಳ ಹಾಕಲು ಹೊಂಚು ಹಾಕುತ್ತಿರುವ ಜೆಡಿಎಸ್ ಪಕ್ಷಕ್ಕೂ ಬಂಡಾಯದ ಗ್ರಹಣ ತಪ್ಪಿಲ್ಲ.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಬಿಎಂಪಿ ಮಾಜಿ ಸದಸ್ಯ ಆರ್.ಪ್ರಕಾಶ್ ಅವರನ್ನು ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಆದರೆ, ನನಗೇ ಟಿಕೆಟ್ ಎಂದು ಬಿಬಿಎಂಪಿ ಸದಸ್ಯೆ ಮಂಜುಳಾ ಅವರ ಪತಿ ನಾರಾಯಣಸ್ವಾಮಿ ಅವರು ಹೇಳಿಕೊಂಡು ತಿರುಗುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲೂ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಅಂದಿನ ಜೆಡಿಎಸ್ ಅಭ್ಯರ್ಥಿಯಾಗಿದ್ದ ತಿಮ್ಮನಂಜಯ್ಯ ಅವರ ಸೋಲಿಗೆ ಇದೇ ನಾರಾಯಣಸ್ವಾಮಿ ಕಾರಣರಾಗಿದ್ದರು.

ಅದೇ ರೀತಿ ಈ ಬಾರಿಯೂ ಅವರಿಗೆ ಟಿಕೆಟ್ ತಪ್ಪಿದರೆ ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಜಮೀರ್ ಅಹಮ್ಮದ್‍ಖಾನ್ ಅವರು ಈ ಬಾರಿ ಚಾಮರಾಜಪೇಟೆಯಿಂದ ಕೈ ಅಭ್ಯರ್ಥಿಯಾಗಲಿದ್ದಾರೆ. ಇವರ ವಿರುದ್ಧ ಜಮೀರ್ ಬಲಗೈ ಭಂಟ ಇಮ್ರಾನ್ ಪಾಷ ಅವರನ್ನು ಕಣಕ್ಕಿಳಿಸಲು ವರಿಷ್ಠರು ತೀರ್ಮಾನಿಸಿದ್ದರು. ಆದರೆ, ಇಮ್ರಾನ್ ಪಾಷ ಅವರು ಗುರುವಿಗೆ ಶರಣಾಗುವ ಭೀತಿ ಇರುವುದರಿಂದ ಕಾಂಗ್ರೆಸ್‍ನಲ್ಲಿದ್ದ ಜಮೀರ್ ಕಡು ವಿರೋಧಿ ಅಲ್ತಾಫ್‍ಖಾನ್ ಅವರಿಗೆ ಟಿಕೆಟ್ ನೀಡಲು ದೇವೇಗೌಡರು ಚಿಂತನೆ ನಡೆಸಿದ್ದಾರೆ.

ಇನ್ನು ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಿವೃತ್ತ ಪೆÇಲೀಸ್ ಅಧಿಕಾರಿ ಜಿ.ಎ.ಬಾವಾ ಅವರು ಯಾವ ತೀರ್ಮಾನಕ್ಕೆ ಬರುವರೋ ತಿಳಿದುಬಂದಿಲ್ಲ.
ಒಟ್ಟಾರೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲೂ ಬಂಡಾಯಗಾರರು ತಲೆನೋವಾಗಿ ಪರಿಣಮಿಸುತ್ತಿದ್ದು, ಈ ಸಮಸ್ಯೆಯನ್ನು ಆಯಾ ಪಕ್ಷಗಳ ಮುಖಂಡರು ಬಗೆಹರಿಸಿಕೊಳ್ಳುವರೋ ಅಥವಾ ಬಂಡಾಯದ ಬಿಸಿಗೆ ಬಲಿಯಾಗುವರೋ ಕಾಲವೇ ನಿರ್ಧರಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ