![bsy_mike](http://kannada.vartamitra.com/wp-content/uploads/2018/03/bsy_mike-640x381.jpg)
ಬೆಂಗಳೂರು, ಮಾ.29-ಇನ್ನು ಎರಡು ಮೂರು ದಿನದಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಿದ್ದೇವೆ ಎಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ರಾಷ್ಟ್ರೀಯ ಮುಖಂಡರೊಂದಿಗೆ ಚರ್ಚಿಸಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದೇವೆ. ಸಮೀಕ್ಷಾ ವರದಿ ಹಾಗೂ ಗೆಲ್ಲುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ತಿಂಗಳಿನಿಂದಲೇ ನಾವು ಅಭ್ಯರ್ಥಿಗಳ ಆಯ್ಕೆ ಸಂಬಂಧ ಕ್ಷೇತ್ರವಾರು ಸಮೀಕ್ಷೆ ನಡೆಸಿದ್ದವು. ಹಾಲಿ ಶಾಸಕರು ಹಾಗೂ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿರುವವರನ್ನು ಪರಿಗಣಿಸಲಾಗಿದೆ. ಅಂತಿಮವಾಗಿ ಸಮೀಕ್ಷೆ ಹಾಗೂ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದರು.
ಅಫ್ಜಲ್ಪುರ ವಿಧಾನಸಭಾ ಕ್ಷೇತ್ರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಪಕ್ಷ ಸೇರ್ಪಡೆ ಕುರಿತಂತೆ ನಾನು ಯಾವುದೇ ಆತುರದ ಹೇಳಿಕೆ ನೀಡುವುದಿಲ್ಲ. ಇಂದು ನಮ್ಮ ಪಕ್ಷದ ಮುಖಂಡರ ಜೊತೆ ಅವರು ಮಾತುಕತೆ ನಡೆಸಲಿದ್ದಾರೆ. ಇನ್ನೂ ಕೆಲವರು ಬೇರೆ ಬೇರೆ ಪಕ್ಷಗಳಿಂದ ಬರಲು ಸಿದ್ದರಾಗಿದ್ದಾರೆ. ನೀವೇ ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು.
ಸಿದ್ದರಾಮಯ್ಯ ನಾಯಕತ್ವದ ವಿರುದ್ಧ ಅನೇಕರು ಅಸಮಾಧಾನಗೊಂಡಿದ್ದಾರೆ. ಚುನಾವಣಾ ದಿನಾಂಕ ನಿಗದಿಯಾಗಲಿ ಎಂದು ಕಾಯುತ್ತಿದ್ದರು. ಮುಂದಿನ ದಿನಗಳಲ್ಲಿ ನಮ್ಮ ಪಕ್ಷಕ್ಕೆ ಯಾರ್ಯಾರು ಬರಲಿದ್ದಾರೆ ಎಂಬುದು ನಿಮಗೇ ಗೊತ್ತಾಗುತ್ತದೆ ಎಂದರು.
ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಬಿಜೆಪಿ ಬರುವ ಬಗ್ಗೆ ಇನ್ನು ಅಂತಿಮವಾಗಿಲ್ಲ. ನಾಳೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಸಮ್ಮುಖದಲ್ಲಿ ಅವರ ಸಹೋದರ ಮತ್ತು ಪುತ್ರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಬೇಕೆಂಬುದು ಈವರೆಗೂ ಅಂತಿಮವಾಗಿಲ್ಲ. ಸಮೀಕ್ಷಾ ವರದಿ, ಜಿಲ್ಲಾ ಸಮಿತಿ ಯಾರಿಗೆ ಶಿಫಾರಸು ಮಾಡುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಯಾರಿಗೇ ಟಿಕೆಟ್ ನೀಡಿದರೂ ಅಸಮಾಧಾನಗೊಳ್ಳದ ಪಕ್ಷದ ಪರ ಕೆಲಸ ಮಾಡುವಂತೆ ಸೂಚಿಸಿದರು.
ಎಡವಿದ ಬಿಎಸ್ವೈ: ಇನ್ನು ರೈಲ್ವೆ ಉದ್ಯೋಗ ವಂಚಿತರಿಂದ ಮನವಿ ಪತ್ರ ಸ್ವೀಕರಿಸಲು ಆಗಮಿಸಿದ ವೇಳೆ ಯಡಿಯೂರಪ್ಪ ಎಡವಿದ ಪ್ರಸಂಗ ಧಾವಳಗಿರಿ ನಿವಾಸದಲ್ಲಿ ನಡೆಯಿತು.
ರೈಲ್ವೆ ಉದ್ಯೋಗ ವಂಚಿತ ನೂರಾರು ನಿರುದ್ಯೋಗಿಗಳು ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲು ಬಂದಿದ್ದರು. ಮನವಿ ಪತ್ರ ಸ್ವೀಕರಿಸಲು ಮನೆಯಿಂದ ಮೆಟ್ಟಿಲು ಇಳಿಯುವಾಗ ಕಾಲಿಗೆ ಚಪ್ಪಲಿ ತಗುಲಿ ಎಡವಿದರು. ತಕ್ಷಣವೇ ಆಪ್ತ ಸಿಬ್ಬಂದಿ ಯಡಿಯೂರಪ್ಪನವರು ಹಿಡಿದುಕೊಂಡರು. ಇದರಿಂದ ಕುಪಿತರಾದ ಬಿಎಸ್ವೈ ಉದ್ಯೋಗ ವಂಚಿತರಿಗೆ ಗದರಿದರು.
ದೇಶದಲ್ಲಿ ಏನು ನಿಯಮವಿದೆ ಎಂಬುದು ನನಗೆ ತಿಳಿದಿಲ್ಲ. ನೇರವಾಗಿ ನಿಮಗೆ ಉದ್ಯೋಗ ಕೊಡುವಂತೆ ರೈಲ್ವೆ ಸಚಿವರಿಗೆ ನಾನು ಹೇಳಲು ಸಾಧ್ಯವಿಲ್ಲ. ಆದರೂ ನಿಮ್ಮ ಮನವಿ ಪತ್ರವನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.