ಸಾಂಸ್ಕøತಿಕ ನಗರಿಯಲ್ಲಿ ಇಂದಿನಿಂದ ಬಿರುಸುಗೊಂಧ ರಾಜಕೀಯ ಚಟುವಟಿಕೆಗಳು
ಬೆಂಗಳೂರು, ಮಾ.29- ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಾದ ಮೈಸೂರಿಗೆ ಬಿಜೆಪಿ ಚಾಣಕ್ಯ ಅಮಿತ್ ಷಾ ಇಂದು ಆಗಮಿಸಲಿದ್ದಾರೆ.
ಮತ್ತೊಂದೆಡೆ ಸಿದ್ದರಾಮಯ್ಯ ಕೂಡ ತಮ್ಮ ತವರು ಜಿಲ್ಲೆಯಲ್ಲಿ ಇಂದಿನಿಂದ ಪ್ರವಾಸ ಕೈಗೊಂಡಿದ್ದಾರೆ. ಹೀಗಾಗಿ ಸಾಂಸ್ಕøತಿಕ ನಗರಿಯಲ್ಲಿ ಇಂದಿನಿಂದ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.
ರಾತ್ರಿ ಮೈಸೂರಿಗೆ ಬರುತ್ತಿರುವ ಅಮಿತ್ ಷಾ ನಾಳೆ ಪೂರ್ತಿ ಜಿಲ್ಲೆಯಲ್ಲಿ ಸಂಚರಿಸಲಿದ್ದು, ಸಿಎಂ ಸೋಲಿಸಲು ರಣತಂತ್ರ ರೂಪಿಸಲಿದ್ದಾರೆ. ನಾಳೆ ಬೆಳಗ್ಗೆ ಮೊದಲು ಸುತ್ತೂರು ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಜೊತೆ ಮಾತುಕತೆ ನಡೆಸಲಿರುವ ಷಾ, ಬಳಿಕ ಅರಮನೆಯಲ್ಲಿ ರಾಜವಂಶಸ್ಥರನ್ನೂ ಭೇಟಿಯಾಗಲಿದ್ದಾರೆ. ಇದು ಯದುವೀರ್ ಅವರನ್ನು ಸೆಳೆಯುವ ಪ್ರಯತ್ನ ಎನ್ನಲಾಗುತ್ತಿದೆ. ಆದರೆ ಈ ಸುದ್ದಿಯನ್ನು ಯದುವೀರ್ ತಳ್ಳಿ ಹಾಕಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಸಮ್ಮುಖದಲ್ಲಿ ದಲಿತರ ನಾಯಕರ ಜತೆ ಷಾ ಸಂವಾದ ಕೂಡ ನಡೆಯಲಿದೆ. ಅಲ್ಲದೆ, ಟೆಂಪಲ್ ರನ್ ಮಾಡಲಿರುವ ಷಾ, ನಂಜನಗೂಡು ಶ್ರೀಕಂಠನ ದರ್ಶನ ಕೂಡ ಪಡೆಯಲಿದ್ದಾರೆ. ಬಳಿಕ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ಕೊಡಲಿದ್ದಾರೆ. ಮಾ.31ರಂದು ಯುವಮೋರ್ಚಾ ಕರುನಾಡು ಜಾಗೃತಿ ಯಾತ್ರೆಗೂ ಚಾಲನೆ ನೀಡಲಿದ್ದಾರೆ.
ಮೈಸೂರು ಬಳಿಕ ಮಂಡ್ಯದಲ್ಲಿ ಯಾತ್ರೆ ನಡೆಯಲಿದ್ದು, ಆತ್ಮಹತ್ಯೆ ಮಾಡಿಕೊಂಡ ಶ್ರೀರಂಗಪಟ್ಟಣದ ರೈತ ರಾಜೇಂದ್ರ ಮನೆಗೆ ಭೇಟಿ ನೀಡಲಿದ್ದಾರೆ. ಜೊತೆಗೆ ಮೇಲುಕೋಟೆ ಚೆಲುವರಾಯಸ್ವಾಮಿ ದರ್ಶನ ಪಡೆಯಲಿದ್ದು, ಮಂಡ್ಯದಲ್ಲಿ ಸಾವಯವ ರೈತರ ಜತೆಗೆ ಸಮಾಲೋಚನೆ ನಡೆಸಲಿದ್ದಾರೆ.
ಆ ಬಳಿಕ ರಾಮನಗರದ ಚನ್ನಪಟ್ಟಣದಲ್ಲಿ ರೇಷ್ಮೆ ಬೆಳೆಗಾರರ ಜೊತೆ ಸಂವಾದ ನಡೆಸಲಿದ್ದಾರೆ. ಒಟ್ಟಿನಲ್ಲಿ ಎರಡು ದಿನಗಳ ಪ್ರವಾಸದ ಮೂಲಕ ಮೈಸೂರು, ಮಂಡ್ಯ, ರಾಮನಗರ ಅಮಿತ್ ಷಾ ಅಬ್ಬರಿಸಲಿದ್ದಾರೆ.
ಮುಂಬೈ ಕರ್ನಾಟದಲ್ಲಿ ಬಿಜೆಪಿ ಚಾಣಕ್ಯ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮುಂಬೈ ಕರ್ನಾಟಕ ಪ್ರವಾಸ ಫಿಕ್ಸ್ ಆಗಿದ್ದು, ಏ.2 ಮತ್ತು 3ರಂದು ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಿದ್ದಾರೆ. 1ರಂದು ದೆಹಲಿಯಿಂದ ನೇರವಾಗಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಬೆಳಗಾವಿಯ ಸರ್ಕ್ಯೂಟ್ ಹೌಸ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಏ.2ರಂದು ಹೆಲಿಕಾಪ್ಟರ್ ಮೂಲಕ ಕಿತ್ತೂರಿಗೆ ಭೇಟಿ ನೀಡಿ ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಖಾನಾಪುರ ತಾಲೂಕಿನ ನಂದಗಢಕ್ಕೆ ಭೇಟಿ ನೀಡಿ ಸಂಗೊಳ್ಳಿ ರಾಯಣ್ಣ ಸಮಾಧಿಗೆ ಗೌರವ ಸಲ್ಲಿಸಲಿದ್ದಾರೆ. ನಂದಗಢದಿಂದ ಬೆಳಗಾವಿಗೆ ಬಂದು ಕಾಲೇಜು ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಲಿರುವ ಷಾ, ನಂತರ ನಿಪ್ಪಾಣಿಯಲ್ಲಿ ಮಹಿಳೆಯರ ಜತೆಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಗೋಕಾಕ್ ರೋಡ್ ಶೋ ನಡೆಸಲಿರುವ ಅಮಿತ್ ಷಾ, ಸಂಜೆ ಜೈನ ಸಮಾಜದ ಮುಖಂಡರ ಜತೆಗೆ ಮಾತುಕತೆ ನಡೆಸಲಿದ್ದಾರೆ.
ಏ.3ರಂದು ಅಮಿತ್ ಷಾ ಬೆಳಗಾವಿಯಿಂದ ವಿಜಯಪುರ ಜಿಲ್ಲೆಯ ಇಂಡಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇಂಡಿಯಲ್ಲಿ ನಡೆಯುವ ಮುಷ್ಠಿ ಅಕ್ಕಿ ಅಭಿಯಾನದಲ್ಲಿ ಪಾಲ್ಗೊಳ್ಳಲಿರುವ ಷಾ, ನಂತರ ವಿಜಯಪುರದಲ್ಲಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಮಾಜಿ ಸಚಿವ ಗೋವಿಂದ ಕಾರಜೋಳ್ ಮನೆಗೆ ಭೇಟಿ ನೀಡಿ, ನಂತರ ಬದಾಮಿಯ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ನಂತರ ಹಾವೇರಿ ಜಿಲ್ಲೆಯ ಕಾಗಿನೆಲೆಯತ್ತ ಪ್ರಯಾಣ ಬೆಳೆಸಲಿದ್ದು, ಹಿಂದುಳಿದ ವರ್ಗಗಳ ಸಮಾವೇಶಲ್ಲಿ ಭಾಗಿಯಾಗಲಿದ್ದಾರೆ.