ಬೆಂಗಳೂರು, ಮಾ.28-ಪಾವಗಡದ ಸೋಲಾರ್ ಪಾರ್ಕ್ ಮಾದರಿಯಲ್ಲೇ ರಾಜ್ಯದ ಮೂರು ಕಡೆಯಲ್ಲಿ 4ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಖಾಸಗಿ ಸಂಸ್ಥೆ ಮುಂದೆ ಬಂದಿದ್ದು, 20ಸಾವಿರ ಕೋಟಿ ಹೂಡಿಕೆ ಮಾಡಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾವಗಡದ ಸೋಲಾರ್ ಪಾರ್ಕ್ ಬಳಿಯಲ್ಲೇ 7ಸಾವಿರ ಹೆಕರೆ ಪ್ರದೇಶದಲ್ಲಿ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಗ್ರೀನ್ಕೋ ಸಂಸ್ಥೆ ಮುಂದಾಗಿದ್ದು, 5ಸಾವಿರ ಕೋಟಿ ಹೂಡಿಕೆ ಮಾಡಲಿದೆ. ರೈತರು ಜಮೀನು ನೀಡಲು ಮುಂದೆ ಬಂದಿದ್ದು, ಕ್ರೇಡೆಲ್ ಮೂಲಕ ಖಾಸಗಿ ಸಂಸ್ಥೆಗೆ ಜಮೀನು ಒದಗಿಸಲಾಗುವುದು. ಅದೇ ರೀತಿ ರೋಣಾ ವಿಧಾನಸಭಾ ಕ್ಷೇತ್ರದಲ್ಲೂ ಒಂದು ಸಾವಿರ ಮೊಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸಲು 5ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ. ಈ ವಿದ್ಯುತನ್ನು ರಾಜ್ಯ ಸರ್ಕಾರ ಖರೀದಿಸುವ ಒಪ್ಪಂದ ಮಾಡಿಕೊಂಡಿಲ್ಲ. ಕೇಂದ್ರ ವಿದ್ಯುತ್ ಸ್ಥಾವರ ಸೇರಿದಂತೆ ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡಿಕೊಳ್ಳುವ ಅವಕಾಶವಿದೆ ಎಂದರು.
ಅದೇ ರೀತಿ ಬೆಳಗಾವಿಯಲ್ಲಿ ಗ್ರೀನ್ ಕೋ ಕಂಪೆನಿ ಜಲ, ಪವನ ಹಾಗೂ ಸೌರ ವಿದ್ಯುತ್ ಉತ್ಪಾದನೆಗೆ ಸುಮಾರು 10ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದು, 2ಸಾವಿರ ಮೆಗಾವ್ಯಾಟ್ ಉತ್ಪಾದನೆಯಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಇಂಧನ ಇಲಾಖೆ 188 ವಿದ್ಯುತ್ ಪರಿವರ್ತಕಗಳನ್ನು ಸ್ಥಾಪನೆ ಮಾಡಿದ್ದು, 142 ಟಿಸಿ ದುರಸ್ತಿ ಕೇಂದ್ರಗಳನ್ನು ತೆರೆಯಲಾಗಿದೆ.169 ವಿಧಾನಸಭಾ ಕ್ಷೇತ್ರಗಳಲ್ಲಿ 6340 ಸದಸ್ಯರನ್ನೊಳಗೊಂಡ ಗ್ರಾಹಕರ ಸಲಹಾ ಸಮಿತಿಯನ್ನು ರಚಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.