ಗಣಿ ದಣಿ ಗಾಲಿ ಜನಾರ್ಧನ ರೆಡ್ಡಿ ಮತ್ತೆ ಮಾತೃಪಕ್ಷ ಸೇರುವ ಇಂಗಿತ

 

ಬೆಂಗಳೂರು, ಮಾ.28- ಅಕ್ರಮ ಗಣಿಗಾರಿಕೆ ಮೂಲಕವೇ ಜೈಲು ಪಾಲಾಗಿ ಸಕ್ರಿಯ ರಾಜಕಾರಣದಿಂದಲೇ ದೂರ ಉಳಿದಿದ್ದ ಬಳ್ಳಾರಿ ಗಣಿ ದಣಿ ಗಾಲಿ ಜನಾರ್ಧನ ರೆಡ್ಡಿ ಮತ್ತೆ ಮಾತೃಪಕ್ಷವನ್ನು ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತಮ್ಮನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ನಾಲ್ಕೈದು ಜಿಲ್ಲೆಗಳಲ್ಲಿ ತಾವು ಬಿಜೆಪಿ ಪರ ಸಕ್ರಿಯವಾಗಿ ಕೆಲಸ ಮಾಡಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಜನಾರ್ಧನರೆಡ್ಡಿ ವರಿಷ್ಠರಿಗೆ ಸಂದೇಶವನ್ನು ರವಾನಿಸಿದ್ದಾರೆ.

ಈಗಾಗಲೇ ತಮ್ಮ ಆಪ್ತರ ಬಳಿ ಪಕ್ಷ ಸೇರ್ಪಡೆ ಕುರಿತಂತೆ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿರುವ ಜನಾರ್ಧರೆಡ್ಡಿ, ಆದಷ್ಟು ಬೇಗ ವರಿಷ್ಠರು ಯಾವುದಾದರೊಂದು ತೀರ್ಮಾನ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಈವರೆಗೂ ರಾಜ್ಯ ನಾಯಕರನ್ನಾಗಲಿ ಅಥವಾ ರಾಷ್ಟ್ರೀಯ ನಾಯಕರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗದಿರುವ ರೆಡ್ಡಿ ನಿಮ್ಮ ಒಡನಾಡಿಗಳ ಮೂಲಕ ಪಕ್ಷ ಸೇರ್ಪಡೆ ಬಗ್ಗೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ.

ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ 2011ರ ಸೆ.5ರಂದು ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೊಳಪಟ್ಟಿದ್ದ ರೆಡ್ಡಿ ಅವರನ್ನು ಸದ್ಯಕ್ಕೆ ಬಿಜೆಪಿ ಪಕ್ಷದಿಂದ ಅಮಾನತು ಮಾಡಿದೆ. ಅವರನ್ನು ತೆಗೆದುಕೊಂಡರೆ ಪಕ್ಷಕ್ಕೆ ಆಗಬಹದಾದ ಲಾಭ-ನಷ್ಟಗಳ ಬಗ್ಗೆಯೂ ಲೆಕ್ಕಾಚಾರ ಹಾಕಿದೆ.

ನಾನು ಬಿಜೆಪಿಗೆ ಬಂದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಅಭ್ಯರ್ಥಿಗಳ ಗೆಲುವಿಗೆ ಎಲ್ಲಾ ರೀತಿಯ ಕಾರ್ಯತಂತ್ರವನ್ನು ರೂಪಿಸಲಿದ್ದೇನೆ. ನನ್ನ ಸಹೋದರರಾದ ಕರುಣಾಕರರೆಡ್ಡಿಗೆ ಹರಪ್ಪನಹಳ್ಳಿಯಿಂದ, ಸೋಮಶೇಖರರೆಡ್ಡಿಗೆ ಬಳ್ಳಾರಿಯಿಂದ, ಸಂಸದ ಶ್ರೀರಾಮುಲಿಗೆ ಬಳ್ಳಾರಿ ಗ್ರಾಮೀಣ, ಪತ್ನಿ ಅರುಣಾರೆಡ್ಡಿಗೆ ಕೋಲಾರದಿಂದ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ನನ್ನ ತವರು ಜಿಲ್ಲೆ ಬಳ್ಳಾರಿಗೆ ಹೋಗುವಂತಿಲ್ಲ ಎಂಬುದನ್ನು ಹೊರತುಪಡಿಸಿದರೆ ಉಳಿದಂತೆ ರಾಜ್ಯದ ಎಲ್ಲಾ ಕಡೆಯೂ ಪ್ರವಾಸ ಮಾಡಲು ಯಾವುದೇ ಕಾನೂನಿನ ತೊಡಕ್ಕಿಲ್ಲ ಎಂದಿದ್ದಾರೆ.
ನನ್ನದೇ ತರಹ ಗುರುತರ ಆರೋಪಕ್ಕೆ ಸಿಲುಕಿರುವ ಶಾಸಕರಾದ ಆನಂದ್‍ಸಿಂಗ್, ಬಿ.ನಾಗೇಂದ್ರ, ನೈಸ್ ಕಂಪೆನಿ ಮುಖ್ಯಸ್ಥ ಅಶೋಕ್ ಖೇಣಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿರುವಾಗ ನಾನು ಬಿಜೆಪಿಗೆ ಏಕೆ ಸೇರ್ಪಡೆಯಾಗಬಾರದು ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

ರೆಡ್ಡಿಯ ಈ ಮನವಿಯನ್ನು ಹೈಕಮಾಂಡ್ ತಿರಸ್ಕರಿಸಿಯೂ ಇಲ್ಲ, ಪುರಸ್ಕರಿಸಿಯೂ ಇಲ್ಲ. ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಕಳಂಕಿತರನ್ನು ಸೇರಿಸಿಕೊಂಡ ಆರೋಪಕ್ಕೆ ನಾವು ತುತ್ತಾಗುತ್ತೇವೆ. ಸೇರ್ಪಡೆ ಮಾಡಿಕೊಳ್ಳದಿದ್ದರೆ ಅದೇ ರೆಡ್ಡಿ ಅನ್ಯಪಕ್ಷಗಳ ಜತೆ ಒಳ ಒಪ್ಪಂದ ಮಾಡಿಕೊಂಡರೆ ಪಕ್ಷಕ್ಕೆ ನಷ್ಟ ಉಂಟಾಗಬಹುದೆಂಬ ಜಿಜ್ಞಾಸೆ ವರಿಷ್ಠರಲ್ಲಿ ಕಾಡುತ್ತಿದೆ.
ಆನಂದ್‍ಸಿಂಗ್ ಹಾಗೂ ಬಿ.ನಾಗೇಂದ್ರ ಅವರನ್ನೇ ಕಾಂಗ್ರೆಸ್ ಸೇರ್ಪಡೆ ಮಾಡಿಕೊಂಡು ಪಕ್ಷದ ಪ್ರಾಥಮಿಕ ಸದಸ್ಯ ನೀಡಿದೆ. ನಾನೂ ಕೂಡ ಬಿಜೆಪಿಗೆ ಸೇರ್ಪಡೆಯಾಗಲು ತುದಿಗಾಲಲ್ಲೇ ನಿಂತಿದ್ದೇನೆ. ವರಿಷ್ಠರು ಈ ವರೆಗೂ ಯಾವುದೇ ತೀರ್ಮಾನ ಕೈಗೊಳ್ಳದೇ ಇರುವುದು ಅತ್ಯಂತ ನೋವು ಉಂಟು ಮಾಡಿದೆ ಎಂದು ಜನಾರ್ಧನರೆಡ್ಡಿ ತಮ್ಮ ಆಪ್ತರ ಬಳಿ ಅಸಮಧಾನ ಹೊರ ಹಾಕಿದ್ದಾರೆ.

ಹೈಕಮಾಂಡ್ ಕೂಡ ಜನಾರ್ಧನರೆಡ್ಡಿಯನ್ನು ಕೆಂಪು ರತ್ನಗಂಬಲಿ ಹಾಕಿ ಸ್ವಾಗತ ಮಾಡುವ ಸ್ಥಿತಿಯಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಈಗಾಗಲೇ ಯಡಿಯೂರಪ್ಪ ಪ್ರಕರಣದಿಂದಲೇ ಈ ಸಂದರ್ಭದಲ್ಲಿ ಬಿಜೆಪಿ ಮುಜುಗರಕ್ಕೆ ಸಿಲುಕಿದೆ. ಇಂತಹ ವೇಳೆ ರೆಡ್ಡಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಮುಂದೆ ಉಂಟಾಗಬಹುದಾದ ಅನಾಹುತಗಳ ಬಗ್ಗೆ ಸಾಕಷ್ಟು ಯೋಚಿಸಿ ತೀರ್ಮಾನ ಕೈಗೊಳ್ಳಲು ಬಿಜೆಪಿ ಮುಂದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ