
ಕೊಚ್ಚಿನ್, ಮಾ.28-ಅತ್ಯಾಚಾರ ಎಸಗಿದ ಎಂಬ ಕಾರಣಕ್ಕಾಗಿ ಯುವತಿಯಿಂದ ಗುಪ್ತಾಂಗ ಕತ್ತರಿಸಲ್ಪಟ್ಟ ಸ್ವಯಂಘೋಷಿತ ದೇವಮಾನವ ಹರಿಸ್ವಾಮಿಗೆ(55) ಮಂಗಳವಾರ ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ಶಿಶ್ನಭಾಗ್ಯ ಮರಳಿ ಬಂದಿದೆ.
ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಆತನ ಶಿಷ್ಯ 23 ವರ್ಷದ ಮಹಿಳೆ ದೇವಮಾನವನ ಮರ್ಮಾಂಗವನ್ನು ಕತ್ತರಿಸಿದ್ದಳು. ಕಳೆದ ಮೇ ತಿಂಗಳಲ್ಲಿ ಈ ಘಟನೆ ನಡೆದಿತ್ತು. ಆದರೆ ಈ ಆರೋಪವನ್ನು ನಿರಾಕರಿಸಿದ್ದ ಹರಿಸ್ವಾಮಿ ತಾನೆ ತನ್ನ ಗುಪ್ತಾಂಗವನ್ನು ಕತ್ತರಿಸಿಕೊಂಡಿದ್ದಾಗಿ ಹೇಳಿಕೆ ನೀಡಿದ್ದ. ಈ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು.
ಈ ಘಟನೆ ನಂತರ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿ ತನಗೆ ಮತ್ತೆ ಶಿಶ್ನ ಭಾಗ್ಯ ಕರುಣಿಸುವಂತೆ ವೈದ್ಯರನ್ನು ಕೋರಿದ್ದ. ಆದರೆ ತಕ್ಷಣ ಇದು ಅಸಾಧ್ಯ ಎಂದು ವೈದ್ಯರು ತಿಳಿಸಿದ್ದರು. ನಿನ್ನೆ ಈತನಿಗೆ ಯಶಸ್ವಿ ಶಸ್ತ್ರಕ್ರಿಯೆ ನಡೆಸಲಾಗಿದ್ದು, ಶಿಶ್ನಭಾಗ್ಯ ಲಭಿಸಿದೆ. ತನ್ನ ವಿರುದ್ಧ ಕೆಲವು ದೈತ್ಯ ಶಕ್ತಿಗಳು ಪಿತೂರಿ ನಡೆಸಿದ್ದವು. ನಾನು ಆ ದುಷ್ಟ ಶಕ್ತಿಗಳನ್ನು ನಿಗ್ರಹಿಸಿದ್ದೇನೆ ಎಂದು ಹರಿಸ್ವಾಮಿ ಹೇಳಿಕೊಂಡಿದ್ದಾನೆ.