ಲಿಂಗಾಯತ ಮತ್ತು ವೀರಶೈವರು ಯಾರು ಎಂಬ ಬಗ್ಗೆ ಸಾಕಷ್ಟು ಗೊಂದಲ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು, ಮಾ.28- ಲಿಂಗಾಯತ ಮತ್ತು ವೀರಶೈವರು ಯಾರು ಎಂಬ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಹೀಗಾಗಿ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ರಾಜ್ಯಸರ್ಕಾರ ಮಾಡಿರುವ ಶಿಫಾರಸು ಲಾಭಕ್ಕಿಂತ ನಷ್ಟ ಉಂಟು ಮಾಡಲಿದೆಯೇ ಎಂಬ ಆತಂಕ ಎದುರಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿರುವ ಪ್ರಸಂಗ ನಡೆದಿದೆ.

ಕಾಂಗ್ರೆಸ್ ಕಚೇರಿಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಟಿಕೆಟ್ ಹಂಚಿಕೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧ್ಯಕ್ಷರ ಜತೆ ಸಮಾಲೋಚನೆ ನಡೆಸಿದ್ದರು.

ಈ ಸಂದರ್ಭದಲ್ಲಿ ಬೀದರ್ ಜಿಲ್ಲೆ ರಾಜಕೀಯ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ವಿಶ್ಲೇಷಣೆ ಕೇಳಿದ್ದು, ಅದಕ್ಕೆ ಉತ್ತರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳನ್ನು ಗೆಲ್ಲಲಾಗಿತ್ತು. ಈ ಬಾರಿ ಒಂದು ಕ್ಷೇತ್ರ ಸೋಲುವ ಆತಂಕವಿದೆ ಎಂದಿದ್ದಾರೆ.

ಇದಕ್ಕೆ ಸಿಡಿಮಿಡಿಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರ ಅಷ್ಟೆಲ್ಲ ಜನಪ್ರಿಯ ಯೋಜನೆಗಳನ್ನು ನೀಡಿದೆ. ಲಿಂಗಾಯತ ವೀರಶೈವ ಧರ್ಮಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ಕ್ರಮ ಕೈಗೊಂಡಿದೆ. ಹಾಗಿದ್ದೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಿಲ್ಲ ಎಂದರೆ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ವಿವರಣೆ ನೀಡಿರುವ ಈಶ್ವರ್ ಖಂಡ್ರೆ, ಲಿಂಗಾಯತ ಮತ್ತು ವೀರಶೈವರು ಯಾರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಲಿಂಗಾಯತರಿಗೆ ಪ್ರತ್ಯೇಕ ಸ್ಥಾನಮಾನಕ್ಕಾಗಿ ಹೋರಾಟ ಮಾಡಿರುವ ಎಂ.ಬಿ.ಪಾಟೀಲ್ ಕ್ಷೇತ್ರದಲ್ಲೇ ಸಮಸ್ಯೆಗಳಿವೆ. ಬೇಕಿದ್ದರೆ ಎಂ.ಬಿ.ಪಾಟೀಲ್ ಅವರನ್ನೇ ಖಾಸಗಿಯಾಗಿ ಕೇಳಿ ನೋಡಿ. ಅವರೂ ಗೆಲ್ಲುವುದು ಅನುಮಾನವಿದೆ. ಸಾಕಷ್ಟು ಮಂದಿಯಲ್ಲಿ ಗೊಂದಲವಿದೆ ಎಂದು ಹೇಳಿರುವುದು ತಿಳಿದುಬಂದಿದೆ.

ತಮ್ಮ ಕ್ಷೇತ್ರಗಳಲ್ಲಿ ವಿರೋಧ ಎಂಬುದು ಬೂದಿ ಮುಚ್ಚಿದ ಕೆಂಡದಂತೆ ಇದೆ. ಚುನಾವಣೆ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಹೇಳಲಾಗುವುದಿಲ್ಲ. ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರ ಒಲವಿದೆ. ಅದರ ನಡುವೆಯೂ ವಿವಾದ ಅನಗತ್ಯ ಎಂದು ಖಂಡ್ರೆ ವಿವರಿಸಿದ್ದಾರೆ.

ಅಶೋಕ್ ಖೇಣಿ ಅವರಿಗೆ ಟಿಕೆಟ್ ನೀಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಅಭಿಪ್ರಾಯ ತಿಳಿಸಿದ ಖಂಡ್ರೆ, ಬೀದರ್ ದಕ್ಷಿಣದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಅಳಿಯ ಚಂದ್ರಸಿಂಗ್ ಸಾಕಷ್ಟು ತಯಾರಿ ನಡೆಸಿದ್ದಾರೆ. ಅವರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ಪ್ರಬಲ ಹೋರಾಟ ಮಾಡಲು ಸಾಧ್ಯ. ಅಶೋಕ್ ಖೇಣಿ ಪಕ್ಷ ಸೇರ್ಪಡೆಗೆ ಸಾಕಷ್ಟು ವಿರೋಧವಿದೆ ಎಂದು ಖಂಡ್ರೆ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ