ಮುಂಬೈ, ಮಾ.28- ಮಹರಾಷ್ಟ್ರದ ರಾಯ್ಗಢ್ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮತ್ತು ಪತನದ ವೇಳೆ ತೀವ್ರ ಗಾಯಗೊಂಡಿದ್ದ ಕರಾವಳಿ ರಕ್ಷಣಾ ಪಡೆಯ ಸಹ ಮಹಿಳಾ ಪೈಲೆಟ್ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಕರಾವಳಿ ರಕ್ಷಣ ಪಡೆಯ ಚೇತಕ್ ಹೆಲಿಕಾಪ್ಟರ್ ಮಾರ್ಚ್ 10ರಂದು ರಾಯ್ಗಢ್ನ ಮುರುದ್ ಬಳಿ ಅಪಘಾತಕ್ಕೀಡಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಹೆಲಿಕಾಪ್ಟರ್ ಪತನಾನಂತರ ಅವರು ಅದರಿಂದ ಹೊರಬಂದು ಪಾರಾಗುವ ಯತ್ನದಲ್ಲಿದ್ದಾಗ ತಿರುಗುತ್ತಿದ್ದ ರೋಟರ್ ಬ್ಲೇಡ್ ಅವರು ಧರಿಸಿದ್ದ ಹೆಲ್ಮೆಟ್ಗೆ ಬಡಿದು ತಲೆಗೆ ಬಲವಾದ ಗಾಯ ಮಾಡಿ ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು.
ಸಹ ಪೈಲೆಟ್ ಅಸಿಸ್ಟಂಟ್ ಕಮ್ಯಾಂಡೆಂಟ್ ಕ್ಯಾಪ್ಟನ್ ಪೆನ್ನಿ ಚೌಧರಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಅವರನ್ನು ಜೀವ ರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು.
ದಕ್ಷಿಣ ಮುಂಬೈನ್ ಕೊಲಾಬಾ ಪ್ರದೇಶದಲ ನೌಕಾ ಆಸ್ಪತ್ರೆ- ಐಎನ್ಎಚ್ಎಸ್ ಅಶ್ವಿನಿಯಲ್ಲಿ 17 ದಿನಗಳ ಜೀವನ್ಮರಣ ಹೋರಾಟದ ನಂತರ ಮಹಿಳಾ ಪೈಲೆಟ್
ಕ್ಯಾಪ್ಟನ್ ಪೆನ್ನಿ ನಿನ್ನೆ ರಾತ್ರಿ ಕೊನೆಯುಸಿರೆಳೆದರು ಎಂದು ಕೋಸ್ಟ್ ಗಾರ್ಡ್ ಪಿಆರ್ಒ ಕಮಾಂಡೆಂಟ್ ಅವಿನಂದನ್ ಮಿತ್ರ ತಿಳಿಸಿದ್ದಾರೆ.