ಬೆಂಗಳೂರು, ಮಾ.27-ಪರಿಶಿಷ್ಟ ಪಂಗಡದ ಜನಸಂಖ್ಯೆಗನುಗುಣವಾಗಿ ಎಲ್ಲಾ ರಾಜಕೀಯಪಕ್ಷಗಳು ಮೀಸಲಾತಿ ಹೆಚ್ಚಳ ಮಾಡಬೇಕೆಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಅಧ್ಯಕ್ಷ ಎಂ.ನರಸಿಂಹಯ್ಯ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಕ್ಕೆ 1956ರಲ್ಲಿ ನಿಗದಿಪಡಿಸಲಾಗಿದ್ದ ಶೇ.3ರ ಮೀಸಲಾತಿಯನ್ನು ಇಂದಿಗೂ ಮುಂದುವರೆಸುತ್ತಿದೆ. ಆದರೆ ಕ್ರಮೇಣ ಪರಿಶಿಷ್ಟ ಪಂಗಡಕ್ಕೆ ಅನೇಕ ಜಾತಿ-ಉಪಜಾತಿ ಪಂಗಡಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಸಂವಿಧಾನ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂದು ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪರಿಶಿಷ್ಟ ಪಂಗಡಕ್ಕೆ ಅನ್ಯಾಯವಾಗುತ್ತಿದೆ ಎಂದರು.
ಈ ಕೂಡಲೇ ಕರ್ನಾಟಕ ಸರ್ಕಾರ ಮೀಸಲಾತಿ ಪ್ರಮಾಣವನ್ನು ಪರಿಷ್ಕರಣೆ ಮಾಡಿ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ನಿಗದಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಧಾನಕಾರ್ಯದರ್ಶಿ ಡಾ.ಆರ್.ಗೋಪಾಲಕೃಷ್ಣ, ಉಪಾಧ್ಯಕ್ಷ ಡಿ.ರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.