ಈ ಬಾರಿ ನ್ಯಾಯಸಮ್ಮತ, ನಿಸ್ಪಕ್ಷಪಾತ ಚುನಾವಣೆ ನಡೆಸಲು ಆಯೋಗ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು, ಮಾ.27- ಈ ಬಾರಿ ನ್ಯಾಯಸಮ್ಮತ, ನಿಸ್ಪಕ್ಷಪಾತ ಚುನಾವಣೆ ನಡೆಸಲು ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸೂಕ್ಷ್ಮ ಮತಗಟ್ಟೆಗಳ ಮೇಲೆ ಸಿಸಿ ಕ್ಯಾಮೆರಾಗಳ ನೇರ ನಿಗಾವಣೆ, ಜಿಪಿಎಸ್ ಆಧಾರಿತ ವಾಹನಗಳ ಬಳಕೆ ಸೇರಿದಂತೆ ಹಲವಾರು ಬಿಗಿ ಕ್ರಮಗಳನ್ನು ತೆಗೆದುಕೊಂಡಿದೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಮುಖ್ಯಾಧಿಕಾರಿ ಸಂಜೀವ್‍ಕುಮಾರ್ ಅವರು, ಚುನಾವಣೆ ಅಕ್ರಮಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುವುದು. ಕಾನೂನು ಸುವ್ಯವಸ್ಥೆ ಪಾಲನೆಗೆ ಈಗಾಗಲೇ ಪೆÇಲೀಸರು ಕ್ರಮ ಕೈಗೊಂಡಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಸ್ಪಕ್ಷಪಾತವಾಗಿ ಕೆಲಸ ಮಾಡಬೇಕೆಂದು ಕಟ್ಟಪ್ಪಣೆ ಮಾಡಲಾಗಿದೆ. ಯಾರಾದರೂ ನಿಯಮ ಮೀರಿದರೆ ಉಗ್ರ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಗುರುತಿಸಲಾಗಿರುವ 3ಸಾವಿರದಿಂದ 6 ಸಾವಿರ ಮತಗಟ್ಟೆಗಳಲ್ಲಿ ಸಿಸಿ ಟಿವಿ ಅಳವಡಿಸಿ ವೆಬ್‍ಕಾಸ್ಟಿಂಗ್ ಮೂಲಕ ಅಲ್ಲಿನ ನೇರ ನಿಗಾವಣೆ ನಡೆಸಲಾಗುವುದು. ಚುನಾವಣಾ ಕರ್ತವ್ಯಕ್ಕೆ 3,56,552 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ರಾಜ್ಯಮಟ್ಟದ ತರಬೇತಿ ಪೂರ್ಣಗೊಳಿಸಲಾಗಿದೆ. ಜಿಲ್ಲಾ ಮತ್ತು ಕ್ಷೇತ್ರ ಮಟ್ಟದ ತರಬೇತಿ ಆರಂಭಗೊಂಡಿದೆ. 87,819 ಮತ ಯಂತ್ರಗಳನ್ನು, 73,185 ಮತಯಂತ್ರ ನಿಯಂತ್ರಕಗಳನ್ನು, 76,110 ವಿವಿ ಪ್ಯಾಟ್‍ಗಳನ್ನು ಬಳಸಲಾಗುತ್ತಿದೆ.

ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು 1361 ಎಂಸಿಸಿ ತಂಡಗಳನ್ನು, 1503 ಅಂಕಿ-ಅಂಶಗಳ ಸಂಗ್ರಹಣಾ ತಂಡಗಳನ್ನು, 1542 ಸಂಚಾರಿ ತಂಡಗಳನ್ನು, 1907 ಚೆಕ್‍ಪೆÇೀಸ್ಟ್‍ಗಳನ್ನು ನಿರ್ಮಿಸಲಾಗಿದೆ ಎಂದರು.
ಕಾನೂನು ಸುವ್ಯವಸ್ಥೆ ರಕ್ಷಣೆಗೆ ಬಿಗಿ ಕ್ರಮಗಳನ್ನು ಕೈಗೊಂಡಿದ್ದು, ಹಿಂದಿನ ವರ್ಷ ದಾಖಲಾದ ಪ್ರಕರಣಗಳ ಪೈಕಿ 1096 ಪ್ರಕರಣಗಳು ಬಾಕಿ ಉಳಿದಿವೆ. ರಾಜ್ಯದಲ್ಲಿ ಸುಮಾರು 42,815 ಜಾಮೀನು ರಹಿತ ವಾರೆಂಟ್‍ಗಳು ಜಾರಿಯಾಗಿದ್ದು, ಕೂಡಲೇ ಅವುಗಳನ್ನು ಅನುಷ್ಟಾನಕ್ಕೆ ತರಲು ಪೆÇಲೀಸರಿಗೆ ಸೂಚಿಸಲಾಗಿದೆ. 92,867 ಅಧಿಕೃತ ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳ ಪೈಕಿ 31,227ಶಸ್ತ್ರಾಸ್ತ್ರಗಳನ್ನು ಈಗಾಗಲೇ ಠಾಣೆಗೆ ತರಿಸಿಕೊಳ್ಳಲಾಗಿದೆ. 15 ಕಾನೂನು ಬಾಹೀರ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ಸೆಕ್ಷನ್ 107ರ ಅಡಿ 29,030 ಪ್ರಕರಣಗಳನ್ನು ದಾಖಲಿಸಲಾಗಿದ್ದು, 15,405 ಮಧ್ಯಂತರ ಬಾಂಡ್‍ಗಳನ್ನು ಪಡೆಯಲಾಗಿದೆ. ಪೆÇಲೀಸರು ಈಗಾಗಲೇ ಕಾರ್ಯಾಚರಣೆ ನಡೆಸಿ 16,046 ಲೀಟರ್ ಅಕ್ರಮ ಮದ್ಯವನ್ನು, ಅಬಕಾರಿ ಇಲಾಖೆಯವರು 1292 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ರಾಜ್ಯಾದ್ಯಂತ ಈಗಾಗಲೇ ಚುನಾವಣೆ ಅಕ್ರಮ ಸಂಬಂಧ 7110 ದೂರುಗಳು ಬಂದಿವೆ. ಅವುಗಳ ಪೈಕಿ 6,125 ದೂರುಗಳನ್ನು ಇತ್ಯರ್ಥ ಪಡಿಸಲಾಗಿದೆ. 136 ದೂರುಗಳಲ್ಲಿ ಸತ್ಯಾಂಶವಿದೆ ಎಂಬ ಕಂಡುಬಂದ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.

ರಾಜ್ಯಾದ್ಯಂತ 450ಕ್ಕೂ ಹೆಚ್ಚು ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ನಗರ ಪ್ರದೇಶದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 3 ಮತ್ತು ಗ್ರಾಮಾಂತರ ಭಾಗದ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದು ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.

ಈ ವರ್ಷ ಮತದಾರರ ಸಂಖ್ಯೆಯಲ್ಲಿ ಶೇ.9ರಷ್ಟು ಏರಿಕೆಯಾಗಿದೆ. ಈ ವರ್ಷ ಅಂತಿಮ ಮತಪಟ್ಟಿ ಪ್ರಕಟಗೊಂಡಿದ್ದು, 4,96,82,351 ಮತದಾರರಿದ್ದು, ಕಳೆದ ವರ್ಷ 4,36,85,739 ಮತದಾರರಿದ್ದರು. ಈ ವರ್ಷದ ಮತದಾರರಲ್ಲಿ ಪುರುಷರು 2,58,05,820, ಮಹಿಳಾ ಮತದಾರರು 2,44,71,979 ಕಳೆದ ವರ್ಷ 3,13,81,136 ಮಂದಿ ಮತ ಚಲಾವಣೆ ಮಾಡಿದ್ದರು. ಈ ವರ್ಷ ಶೇ.75ಕ್ಕಿಂತಲೂ ಹೆಚ್ಚು ಮತದಾನ ಮಾಡುವ ಗುರಿಯನ್ನು ಆಯೋಗ ಹೋಂದಿದೆ.

15,42,000 ಹೊಸ ಮತದಾರರು ಈ ವರ್ಷ ಸೇರ್ಪಡೆಯಾಗಿದ್ದಾರೆ. ಲಿಂಗ ಅನುಪಾತ 958ರಿಂದ 972ಕ್ಕೆ ಏರಿಕೆಯಾಗಿದೆ ಎಂದು ಅವರು ವಿವರಿಸಿದರು.
ಮತದಾರರ ಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಮತ ಕೇಂದ್ರಗಳ ಸಂಖ್ಯೆಯನ್ನು ಕಳೆದ ವರ್ಷ 58,134 ಮತ ಕೇಂದ್ರಗಳಿದ್ದವು, ಈ ವರ್ಷ 56,696 ಮತಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಹೆಚ್ಚುವರಿ ಮತಗಟ್ಟೆಗಳನ್ನೂ ಆರಂಭಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ನೀತಿ ಸಂಹಿತೆ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳಿಗೂ ಅನ್ವಯವಾಗಲಿದೆ. ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಸುದ್ದಿಯನ್ನು ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಿ ಸುಪ್ರೀಂಕೋರ್ಟ್ ನಿರ್ದೇಶನದ ಅನುಸಾರ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಚುನಾವಣೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದ್ದು, ಸಚಿವರು ಮತ್ತು ಜನಪ್ರತಿನಿಧಿಗಳನ್ನು ಅದನ್ನು ಸಮರ್ಥವಾಗಿ ಪಾಲಿಸಬೇಕು. ಸರ್ಕಾರಿ ವಾಹನಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಬಾರದು. ಕಚೇರಿಯಿಂದ ಮನೆ, ಮನೆಯಿಂದ ಕಚೇರಿಗೆ ಮಾತ್ರ ವಾಹನ ಬಳಕೆ ಮಾಡಲು ಅವಕಾಶವಿದೆ. ಬೇರೆ ಕಡೆ ಸಂಚರಿಸುವಾಗ ಖಾಸಗಿ ವಾಹನಗಳನ್ನು ಬಳಸಬೇಕೆಂದು ಹೇಳಿದರು.
ಸಾಮಾಜಿ ಜಾಲ ತಾಣಗಳನ್ನು ಬಳಸಿಕೊಳ್ಳುವುದರ ಮೇಲೂ ತೀವ್ರ ನಿಗಾವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ವಿಕಲಚೇತನರ ಮತದಾನಕ್ಕೆ ಅನುಕೂಲಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ