ಗ್ರಾಮೀಣ ಬ್ಯಾಂಕ್ ನೌಕರರಿಂದ ಸತ್ಯಾಗ್ರಹ

ಬೆಂಗಳೂರು, ಮಾ.27-ಗ್ರಾಮೀಣ ಬ್ಯಾಂಕ್ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಈಗಾಗಲೇ ರಾಷ್ಟ್ರವ್ಯಾಪ್ತಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಅಧ್ಯಕ್ಷ ಕೆ.ಎಂ.ಮುನಿಯಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ವತಿಯಿಂದ ಸತ್ಯಾಗ್ರಹಕ್ಕೆ ಕರೆ ನೀಡಿದ್ದು, ದೇಶದ 56 ಗ್ರಾಮೀಣ ಬ್ಯಾಂಕ್‍ಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಮತ್ತು ಅಧಿಕಾರಿಗಳು ಈಗಾಗಲೇ ಮುಷ್ಕರ ಆರಂಭಿಸಿದ್ದು, ಮೂರು ದಿನಗಳ ಕಾಲ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ನಮ್ಮ ಪ್ರಮುಖ ಬೇಡಿಕೆಗಳೆಂದರೆ, ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‍ನಲ್ಲಿರುವ ದಾವೆಯನ್ನು ಹಿಂತೆಗೆದುಕೊಳ್ಳಬೇಕು, ಪ್ರವರ್ತಿತ ಬ್ಯಾಂಕ್‍ನಲ್ಲಿರುವಂತೆ ಐಬಿಎಯನ್ನು ಗ್ರಾಮೀಣ ಬ್ಯಾಂಕ್‍ಗಳ ಜೊತೆ ಜಂಟಿ ಮಾತುಕತೆಗೆ ನಿಗದಿಪಡಿಸಬೇಕು. ಪ್ರವರ್ತಿತ ಬ್ಯಾಂಕ್‍ನಲ್ಲಿರುವಂತೆ ದಿನಗೂಲಿ ನೌಕರರನ್ನು ಖಾಯಂಗೊಳಿಸುವ ಮುನ್ನ ಅವರಿಗೆ ನೀಡಬೇಕಾದ ಕನಿಷ್ಠ ವೇತನ ಹಾಗೂ ಇತರೆ ಭತ್ಯೆಗಳನ್ನು ನಿಗದಿಪಡಿಸಬೇಕು. ಪ್ರವರ್ತಿತ ಬ್ಯಾಂಕ್‍ನಲ್ಲಿರುವ ಸೇವಾ ಹಾಗೂ ಬಡ್ತಿ ನಿಯಮಗಳನ್ನು ಅಳವಡಿಸಿ ಸಮಾನತೆ ಕಾಯ್ದುಕೊಳ್ಳಬೇಕು ಹಾಗೂ ಇನ್ನುಳಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಒಕ್ಕೂಟದ ಪ್ರಧಾನಕಾರ್ಯದರ್ಶಿ ವಿ.ಕೆ.ಬನ್ನಿಗೋಳ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ