ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ: ಸಿ-ಫೋರ್ ಸಮೀಕ್ಷೆ

ಬೆಂಗಳೂರು:ಮಾ-೨೭: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಅಲ್ಲದೇ  2013ರಲ್ಲಿ ಪಡೆದ ಸ್ಥನಗಳಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ  ಎಂದು ‘ಸಿ-ಫೋರ್’ ಸಮೀಕ್ಷೆ ಹೇಳಿದೆ.

ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ ಸಿ-ಫೋರ್,  154 ವಿಧಾನಸಭಾ ಕ್ಷೇತ್ರಗಳಲ್ಲಿನ 22,357 ಮತದಾರರ ಸಂದರ್ಶನ ನಡೆಸಿ ಸಮೀಕ್ಷಾ ವರದಿ ಸಿದ್ಧಪಡಿಸಿದೆ. ಸಂದರ್ಶನಕ್ಕೆ ಒಳಪಡಿಸಿದ ಮತದಾರರು 2,368 ಮತಗಟ್ಟೆಗಳಿಗೆ ಸೇರಿದ್ದಾರೆ. 326 ಪಟ್ಟಣ, ನಗರ ಪ್ರದೇಶ ಮತ್ತು 977 ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದು ಸಿ-ಫೋರ್ ಸಂಸ್ಥೆ ವಿವರಿಸಿದೆ.

ವಿಧಾನಸಭೆಯ ಒಟ್ಟು 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ 126, ಬಿಜೆಪಿ 70 ಹಾಗೂ ಜೆಡಿಎಸ್‌ 27 ಸ್ಥಾನ ಪಡೆಯಲಿವೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ  ಶೇ 46ರಷ್ಟು ಮತಗಳನ್ನು ಪಡೆಯಲಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಶೇ 9ರಷ್ಟು ಹೆಚ್ಚು ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಬಿಜೆಪಿ ಮತ್ತು ಜೆಡಿಎಸ್‌ ಕ್ರಮವಾಗಿ ಶೇ 31 ಹಾಗೂ ಶೇ 16 ರಷ್ಟು ಮತಗಳನ್ನು ಪಡೆಯಲಿವೆ. ಜೆಡಿಎಸ್‌ ಮತಗಳಿಕೆ ಪ್ರಮಾಣ ಕಳೆದ ಸಲಕ್ಕಿಂತಲೂ ಶೇ 4ರಷ್ಟು ಕಡಿಮೆಯಾಗುವ ಸಂಭವವಿದೆ. ಈ ಪಕ್ಷದ ಮುಸ್ಲಿಂ, ದಲಿತ ಮತಗಳು ಕಾಂಗ್ರೆಸ್‌ ಪರ ವಾಲಬಹುದೆಂದು ಸಮೀಕ್ಷೆ ನಿರೀಕ್ಷಿಸಿದೆ.

 

ಹೈದರಾಬಾದ್‌– ಕರ್ನಾಟಕ, ಹಳೇ ಮೈಸೂರು ಹಾಗೂ ಬೆಂಗಳೂರು ವಿಭಾಗಗಳಲ್ಲಿ ಕಾಂಗ್ರೆಸ್‌ ಅತ್ಯಧಿಕ ಸ್ಥಾನಗಳನ್ನು ಗೆಲ್ಲಲಿದೆ. ಕರಾವಳಿ ಕರ್ನಾಟಕದಲ್ಲಿ ಎರಡು ಪ್ರಮುಖ ಪಕ್ಷಗಳ ನಡುವೆ ತೀವ್ರ ಹಣಾಹಣಿ ನಡೆಯಲಿದ್ದು, ಸ್ವಲ್ಪಮಟ್ಟಿಗೆ ಕಾಂಗ್ರೆಸ್‌ ಮೇಲುಗೈ ಸಾಧಿಸಬಹುದು. ಮಧ್ಯ ಕರ್ನಾಟಕ ಭಾಗದಲ್ಲಿ ಬಿಜೆಪಿ ಉಳಿದೆರಡು ಪಕ್ಷಗಳಿಗಿಂತ ಮುಂದಿದೆ ಎಂದೂ ಸಮೀಕ್ಷೆ ತಿಳಿಸಿದೆ.

 

ಸಾಮಾಜಿಕವಾಗಿ ತುಳಿತಕ್ಕೊಳಗಾಗಿರುವ ಜನರಿಗಾಗಿ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್‌ ಹಾಗೂ ಕೃಷಿ ಭಾಗ್ಯ, ರೈತರ ಸಾಲ ಮನ್ನಾ ಮೊದಲಾದ ಕಾರ್ಯಕ್ರಮಗಳು ಕಾಂಗ್ರೆಸ್‌ ವರ್ಚಸ್ಸನ್ನು ಹೆಚ್ಚಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ