ರಿಯಾದ್, ಮಾ.26-ಯೆಮನ್ ಬಂಡುಕೋರರು ಸೌದಿ ಅರೇಬಿಯಾ ಮೇಲೆ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಸೌದಿ ರಾಜಧಾನಿ ರಿಯಾದ್ ಸೇರಿದಂತೆ ವಿವಿಧ ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ಉಗ್ರರು ಉಡಾಯಿಸಿದ ಏಳು ಕ್ಷಿಪಣಿಗಳನ್ನು ಸೇನಾ ಪಡೆಗಳು ಹೊಡೆದುರುಳಿಸಿದ್ದಾರೆ. ಈ ಘಟನೆಯಲ್ಲಿ ಸಾವು-ನೋವಿನ ವರದಿಯಾಗಿದೆ. ಯೆಮೆನ್ ಮೇಲೆ ಸೌದಿ ನೇತೃತ್ವದ ಮಿತ್ರಪಡೆಗಳು ನಡೆಸಿದ ಸೇನಾ ಕಾರ್ಯಾಚರಣೆಯ ತೃತೀಯ ವರ್ಷಾಚರಣೆ ಸಂದರ್ಭದಲ್ಲಿ ಪ್ರತೀಕಾರದ ಕ್ರಮವಾಗಿ ಉಗ್ರರು ಈ ಕ್ಷಿಪಣಿ ದಾಳಿಗಳನ್ನು ಮಾಡಿದರು. ಕ್ಷಿಪಣಿ ಹೊಡೆದುರುಳಿಸಿದ ಸಂದರ್ಭದಲ್ಲಿ ಈಜಿಪ್ಟ್ನ ವ್ಯಕ್ತಿಯೊಬ್ಬ ಮೃತಪಟ್ಟು ಕೆಲವರಿಗೆ ಗಾಯಗಳಾಗಿವೆ.
ಕ್ಷಿಪಣಿಗಳ ದಾಳಿ ಮತ್ತು ಆನಂತರ ಅವುಗಳನ್ನು ಸೇನಾ ಪಡೆಗಳು ಹೊಡೆದುರುಳಿಸಿದಾಗ ಭಾರೀ ಶಬ್ದಗಳು ಕೇಳಿಸಿ ಬೆಂಕಿಯ ಜ್ವಾಲೆಗಳು ಗೋಚರಿಸಿದವು ಎಂದು ರಿಯಾದ್ ನಿವಾಸಿಗಳು ಹೇಳಿದ್ದಾರೆ. ರಿಯಾದ್ ಮೇಲೆ ಮೂರು ಕ್ಷಿಪಣಿಗಳ ಹಾಗೂ ಖಾಮಿಸ್, ಮುಷೈತ್, ಜಿಝಾನ್ ಮತ್ತು ನರ್ಜಾನ್ ನಗರಗಳ ಮೇಲೆ ನಾಲ್ಕು ಕ್ಷಿಪಣಿಗಳನ್ನು ಬಂಡುಕೋರರು ಉಡಾಯಿಸಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಯತ್ನಿಸಿದರು. ಆದರೆ ಭದ್ರತಾಪಡೆಗಳು ಅವುಗಳನ್ನು ಹೊಡೆದುರುಳಿಸಿ ಭಾರೀ ದುರಂತ ತಪ್ಪಿಸಿದ್ದಾರೆ.