
ನವದೆಹಲಿ, ಮಾ.26-ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಮೊಬೈಲ್ ಆ್ಯಪ್ ಸಮ್ಮತಿ ಇಲ್ಲದೆಯೇ ಜನರ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಹಾಗೂ ದತ್ತಾಂಶ ಮಾಹಿತಿಯನ್ನು ಅಮೆರಿಕದ ಸಂಸ್ಥೆಯೊಂದಕ್ಕೆ ರವಾನಿಸಿದೆ ಎಂಬುದು ರಾಷ್ಟ್ರಮಟ್ಟದ ಸುದ್ದಿವಾಹಿನಿಯೊಂದು ನಡೆಸಿದ ವಾಸ್ತವ ಸಂಗತಿ ಪರಿಶೀಲನೆಯಿಂದ ದೃಢಪಟ್ಟಿದೆ. ಆಂಡ್ರಾಯ್ಡ್ ಒಂದರಲ್ಲೇ ಐದು ಲಕ್ಷ ಬಾರಿ ಈ ಆ್ಯಪ್ನಿಂದ ಡೌನ್ಲೋಡ್ ಮಾಡಲಾಗಿದೆ. ಈ ಡೇಟಾವನ್ನು ಸಮ್ಮತಿ ಇಲ್ಲದೇ ಅಮೆರಿಕ ಸಂಸ್ಥೆ ನಡೆಸುತ್ತಿರುವ ಸರ್ವರ್ಗಳಿಗೆ ರವಾನಿಸಲಾಗಿದೆ ಎಂದು ಎನ್ಡಿಟಿವಿಯ ಫ್ಯಾಕ್ಟ್-ಚೆಕ್ ಖಚಿತಪಡಿಸಿದೆ.
ಆರೋಪ-ಪ್ರತ್ಯಾರೋಪ: ಮೋದಿ ಆ್ಯಪ್ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಮತ್ತು ಬಿಜೆಪಿ ನಡುವೆ ವಾಕ್ಸಮರ ನಡೆದಿದೆ. ಈ ಮೊಬೈಲ್ ಆ್ಯಪ್ ಮೂಲಕ ಜನರ ಮಾಹಿತಿಗಳನ್ನು ಕಲೆ ಹಾಕಿ ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಅಲ್ಲಗಳೆದಿದೆ.
ಈ ಆ್ಯಪ್ನಲ್ಲಿ ಸಂಗ್ರಹವಾಗಿರುವ ದತ್ತಾಂಶಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹ್ಯಾಕರ್ವೊಬ್ಬರು ಆರೋಪ ಮಾಡಿದ್ದಾರೆ ಎಂಬ ವರದಿಯೊಂದು ಇತ್ತೀಚೆಗೆ ಪ್ರಕಟವಾಗಿತ್ತು. ಈ ವರದಿ ಆಧಾರದಲ್ಲಿ ರಾಹುಲ್ ಆರೋಪ ಮಾಡಿದ್ದಾರೆ. ದತ್ತಾಂಶ ಕಳ್ಳತನದ ಆರೋಪ ಪ್ರಧಾನಿ ಮೋದಿವರೆಗೂ ಬಂದಿದೆ. ಹ್ಯಾಕರ್ವೊಬ್ಬರಿಂದ ಆಘಾತಕಾರಿ ವಿಚಾರಗಳು ಬಹಿರಂಗ ಎಂಬ ವರದಿಯನ್ನು ತಮ್ಮ ಟ್ವೀಟ್ಗೆ ರಾಹುಲ್ಲಗತ್ತಿಸಿದ್ದಾರೆ.
ಆ್ಯಪ್ ಬಳಕೆದಾರರ ಹೆಸರು, ಇಮೇಲ್ ವಿಳಾಸ, ಫೆÇೀಟೊ ಮುಂತಾದ ಮಾಹಿತಿಗಳನ್ನು ಅವರ ಅನುಮತಿ ಮತ್ತು ಸಮ್ಮತಿ ಇಲ್ಲದೆಯೇ ಬೇರೊಂದು ಸಂಸ್ಥೆಗೆ ನೀಡಲಾಗುತ್ತಿದೆ ಎಂಬುದು ರಾಹುಲ್ ಆಪಾದನೆಯಾಗಿದೆ.
ಬಳಕೆದಾರರಿಗೆ ಯಾವ ಮಾಹಿತಿ ಅಗತ್ಯ ಎಂಬುದನ್ನು ವಿಶ್ಲೇಷಿಸಿ, ಆ ಮಾಹಿತಿಗಳನ್ನಷ್ಟೇ ಅವರಿಗೆ ದೊರಕುವಂತೆ ಮಾಡಲು ಈ ದತ್ತಾಂಶ ವಿಶ್ಲೇಷಣೆ ನಡೆಸಲಾಗುತ್ತಿದೆ. ಇದು ದತ್ತಾಂಶ ಸೋರಿಕೆ ಅಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಫೇಸ್ಬುಕ್ ಮೂಲಕ ಮಾಹಿತಿ ಕಳ್ಳತನ ಮಾಡಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ನೆರವಾದ ಕೇಂಬ್ರಿಜ್ ಅನಲಿಟಿಕಾ ಕಂಪನಿಯ ಸೇವೆ ಬಳಸಿಕೊಂಡ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದವು. ಅದರ ಹಿಂದೆಯೇ ಮೋದಿ ಆ್ಯಪ್ ಮೂಲಕ ಮಾಹಿತಿ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ರಾಹುಲ್ ಮಾಡಿದ್ದಾರೆ.
ನಮೋ ಆ್ಯಪ್ ಮೂಲಕ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಸುದ್ದಿಗಳು ಸುಳ್ಳು. ಬಳಕೆದಾರರ ವೈಯಕ್ತಿಕ ಮಾಹಿತಿ ನೀಡುವಂತೆ ಆ್ಯಪ್ ಕೇಳುವುದೇ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನಮೋ ಆ್ಯಪ್ಬಹಳ ವಿಶಿಷ್ಟವಾಗಿದೆ. ಈ ಆ್ಯಪ್ನಲ್ಲಿ ಬಳಕೆದಾರರನ್ನು ಅತಿಥಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇಲ್ಲಿ ಅನುಮತಿ ಪಡೆದುಕೊಳ್ಳುವ ಅಥವಾ ಯಾವುದೇ ಮಾಹಿತಿ ನೀಡುವ ಅಗತ್ಯ ಇಲ್ಲ. ಸಾಂದರ್ಭಿಕ ಮತ್ತು ನಿರ್ದಿಷ್ಟ ಅನುಮತಿಗಳು ಮಾತ್ರ ಬೇಕಾಗುತ್ತವೆ ಎಂದು ಸರ್ಕಾರ ತಿಳಿಸಿದೆ.