ಮೇಲುಕೋಟೆ ಚೆಲುವ ನಾರಾಯಣಸ್ವಾಮಿಗೆ ವೈರಮುಡಿ ಕಿರೀಟ:

ಮಂಡ್ಯ,ಮಾ.26- ಶ್ರೀಮನ್ನಾರಾಯಣನ ಕಿರೀಟವೆಂದೇ ಖ್ಯಾತಿ ಪಡೆದಿರುವ ವೈರಮುಡಿ ಕಿರೀಟವನ್ನು ಮೇಲುಕೋಟೆ ಚೆಲುವ ನಾರಾಯಣಸ್ವಾಮಿಗೆ ಧರಿಸಲು ಇಂದು ಜಿಲ್ಲಾ ಖಜಾನೆಯಿಂದ ಜಿಲ್ಲಾಧಿಕಾರಿ ಮಂಜುಶ್ರೀ ನೇತೃತ್ವದಲ್ಲಿ ತರಲಾಯಿತು.
ಬ್ರಹ್ಮ ತಂತ್ರ ಸ್ವತಂತ್ರ ಪರಕಾಲ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್‍ನಲ್ಲಿ ತರಲಾಯಿತು.
ಮೇಲುಕೋಟೆ ಸ್ಥಾನಿಕಂ ಯೋಗಾನರಸಿಂಹ ಅಯ್ಯಂಗಾರ್ ಅವರು ಜಿಲ್ಲಾಧಿಕಾರಿಯವರಿಂದ ಕಿರೀಟವನ್ನು ಬರಮಾಡಿಕೊಂಡರು. ಅತ್ಯಂತ ಬೆಲೆ ಬಾಳುವ ಚೆಲುವ ನಾರಾಯಣಸ್ವಾಮಿಯ ಕಿರೀಟ ಮತ್ತು ಆಭರಣಗಳನ್ನು ಪರಕಾಲ ಮಠದ ಸ್ವಾಮೀಜಿಯವರ ವಾಹನದಲ್ಲಿ ಮೆರವಣಿಗೆ ಮೂಲಕ ತಂದು ನಗರದ ಲಕ್ಷ್ಮೀ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಇಂಡವಾಳು, ಬ್ಯಾಡರಹಳ್ಳಿ , ಪಾಂಡುಪುರ, ಜಗ್ಗನಹಳ್ಳಿ ಮಾರ್ಗವಾಗಿ ಮೇಲುಕೋಟೆಗೆ ಕೊಂಡೊಯ್ಯಲಾಯಿತು.
ಮಾರ್ಗಮಧ್ಯೆ ಎಲ್ಲ ಗ್ರಾಮಗಳಲ್ಲೂ ಭಕ್ತಾಧಿಗಳು ಭಕ್ತಿಯಿಂದ ಪೂಜೆ ಸಲ್ಲಿಸಿದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಧಿಕಾ, ಡಿವೈಎಸ್ಪಿ ಲಾವಣ್ಯ ಈ ಸಂದರ್ಭದಲ್ಲಿದ್ದರು.
ಮುಜರಾಯಿ ಇಲಾಖೆಯಿಂದ ಹೊರಟು ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಸಮೀಪದ ಶ್ರೀನಿವಾಸ ದೇವಾಲಯದ ಆವರಣದಲ್ಲಿ ದಿವಂಗತ ಭೋಜಪ್ಪ ಕುಟುಂಬದವರು ಪ್ರಥಮ ನಾಗರಿಕ ಪೂಜೆ ಸಲ್ಲಿಸಿದರು. ಮಡಿವಾಳ ಜನಾಂಗದವರಾದ ಈ ಕುಟುಂಬ ಕಳೆದ ಐದು ದಶಕಗಳಿಂದ ನಿಯಮಿತವಾಗಿ ಪ್ರಥಮ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ