ಕಾಫಿ ನಾಡು ಚಿಕ್ಕಮಗಳೂರು ಎಂದರೆ ಎಲ್ಲಿಲ್ಲದ ಪ್ರೀತಿ – ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್

ಚಿಕ್ಕಮಗಳೂರು, ಮಾ.26- ಕಾಫಿ ನಾಡು ಚಿಕ್ಕಮಗಳೂರು ಎಂದರೆ ಎಲ್ಲಿಲ್ಲದ ಪ್ರೀತಿ, ಇಲ್ಲಿನ ಜನರೆಂದರೆ ನನಗೆ ಬಲು ಅಚ್ಚುಮೆಚ್ಚು, ಶಿವಸೈನ್ಯದ ಚಿಕ್ಕಮಗಳೂರು ಚಿಕ್ಕಮಲ್ಲಿಗೆ ಎಂಬ ಗೀತೆಯ ಚಿತ್ರೀಕರಣ ಸೇರಿದಂತೆ ನನ್ನ ಅನೇಕ ಚಿತ್ರಗಳ ಚಿತ್ರೀಕರಣವೂ ಇಲ್ಲಾಗಿದೆ ಎಂದು ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್ ಸಂತಸ ಹಂಚಿಕೊಂಡರು.
ಶಿವರಾಜ್‍ಕುಮಾರ್ ನಟನೆಯ ದುನಿಯಾ ಸೂರಿ ನಿರ್ದೇಶನದ ಟಗರು ಚಿತ್ರ 25 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಚಿಕ್ಕಮಗಳೂರಿನ ಮಿಲನ್ ಚಿತ್ರಮಂದಿರಕ್ಕೆ ಆಗಮಿಸಿ ಅಭಿಮಾನಿಗಳೊಂದಿಗೆ ಚಿತ್ರವನ್ನು ವೀಕ್ಷಿಸಿದರು.
ಟಗರು ಚಿತ್ರತಂಡದೊಂದಿಗೆ ಕಾಫಿನಾಡಿಗೆ ಆಗಮಿಸಿದ ಶಿವರಾಜ್‍ಕುಮಾರ್ ಹಾಗೂ ಇತರ ಸಹನಟರನ್ನು ತೆರೆದ ವಾಹನದಲ್ಲಿ ಅಜಾದ್ ಪಾರ್ಕ್‍ನಿಂದ ಮಿಲನ್ ಚಿತ್ರಮಂದಿರದವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲ್ಲಾಯಿತು.
ಮಿಲನ್ ಚಿತ್ರಮಂದಿರದಲ್ಲಿ ಟಗರು ಚಿತ್ರದ 25ನೆ ಯಶಸ್ವಿ ಪ್ರದರ್ಶನಕ್ಕಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್‍ಕುಮಾರ್, ಚಿಕ್ಕಮಗಳೂರು ತುಂಬಾ ಸುಂದರವಾದ ನಾಡು, ಇಲ್ಲಿ ನನ್ನ ಬಹುತೇಕ ಚಿತ್ರಗಳ ಚಿತ್ರೀಕರಣ ಆಗಿದೆ. ಇಲ್ಲಿ ಶೂಟಿಂಗ್ ನಡೆಯುವಾಗ ನಡೆದ ಅನೇಕ ರೋಮಾಂಚನ ಘಟನೆಗಳು ಇನ್ನು ನೆನಪಿನಲ್ಲಿವೆ.
ನಮ್ಮ ಟಗರು ಚಿತ್ರವು ಮಿಲನ್ ಚಿತ್ರಮಂದಿರದಲ್ಲಿ 25 ದಿನ ಪೂರೈಸಿ ಮುನ್ನುಗ್ಗಲು ಸಹಕರಿಸಿದ ಚಿತ್ರಮಂದಿರದವರಿಗೆ ಹಾಗೂ ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಿತ್ರಮಂದಿರದ ವ್ಯವಸ್ಥಾಪಕ ಶಿವಪ್ಪ, ಡಾ.ರಾಜ್‍ಕುಮಾರ್ ಅಭಿಮಾನಿ ಸಂಘದ ಸ್ಥಾಪಕ ಅಧ್ಯಕ್ಷ ಬಿ.ಎಂ.ಕುಮಾರ್, ಎಲ್.ವಿ.ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಓಂಕಾರೇಗೌಡ, ಎ.ಎನ್.ಮೂರ್ತಿ ಮೊದಲಾದವರು ಹಾಜರಿದ್ದರು.
ಈ ಸಮಯದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್‍ಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ