ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಸಾರ್ವಜನಿಕರಿಗೆ ಬೇಸಿಗೆ ರಜೆ ಪ್ರವಾಸ

ಬೆಂಗಳೂರು, ಮಾ.25-ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಸಾರ್ವಜನಿಕರಿಗೆ ಬೇಸಿಗೆ ರಜೆಯ ದೇಶಿ ಹಾಗೂ ವಿದೇಶಿ ಪ್ರವಾಸವನ್ನು ಕೈಗೆಟುಕುವ ದರದಲ್ಲಿ ಆಯೋಜಿಸಿದೆ.

ಬರುವ ಏ.1 ರಿಂದ ಈ ಹೊಸ ಯೋಜನೆ ಕಲ್ಪಿಸಲಾಗುತ್ತಿದೆ. ಬೆಂಗಳೂರು-ದೇವನಹಳ್ಳಿ, ನಂದಿಬೆಟ್ಟದ ಒಂದು ದಿನ ಪ್ರವಾಸ ಪ್ರತಿ ಶನಿವಾರ ಮತ್ತು ಭಾನುವಾರ ಆಯೋಜಿಸಲಾಗುತ್ತಿದೆ.

ಬೆಳಗ್ಗೆ 8 ಗಂಟೆಗೆ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಿಂದ ಹೊರಟು ದೇವನಹಳ್ಳಿ ಕೋಟೆ, ಮುದ್ದೇನಹಳ್ಳಿ ವಿಶ್ವೇಶ್ವರಯ್ಯ ಜನ್ಮಸ್ಥಳ, ನಂದಿ ಗ್ರಾಮ ದೇವಸ್ಥಾನ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಸಂಜೆ 5 ಗಂಟೆಗೆ ನಂದಿಬೆಟ್ಟದ ಸೂರ್ಯಾಸ್ತ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

ಮಧ್ಯಾಹ್ನದ ಊಟ ವ್ಯವಸ್ಥೆಯನ್ನೂ ಕೂಡ ಕಲ್ಪಿಸಲಾಗಿದ್ದು, ಪ್ರತಿಯೊಬ್ಬರಿಗೂ 700 ರೂ. ದರ ನಿಗದಿಪಡಿಸಲಾಗಿದೆ.

ಇದಲ್ಲದೆ, ಬೆಂಗಳೂರು, ಮೈಸೂರು, ಶ್ರವಣಬೆಳಗೊಳ, ಬೇಲೂರು-ಹಳೇಬೀಡು, ಬೆಳವಾಡಿಗೆ ಎರಡು ದಿನಗಳ ಪ್ರವಾಸ ಆಯೋಜಿಸಲಾಗಿದ್ದು, ಮೊದಲ ದಿನ ಬೆಳಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು ಶ್ರೀರಂಗಪಟ್ಟಣ, ಮೈಸೂರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ಕೆಆರ್‍ಎಸ್ ನಂತರ ಎರಡನೇ ದಿನ ಶ್ರವಣಬೆಳಗೊಳ, ಬೇಲೂರು-ಹಳೇಬೀಡು, ಬೆಳವಾಡಿ ವೀರನಾರಾಯಣಸ್ವಾಮಿ ದೇವಸ್ಥಾನಕ್ಕೆ ತೆರಳಿ ನಂತರ ವಾಪಸ್ ಕರೆತರಲಾಗುವುದು. ಇದಕ್ಕೆ ಒಬ್ಬರಿ ರೂ.1920 (ವಸತಿ ಸೇರಿ) ನಿಗದಿಪಡಿಸಲಾಗಿದೆ.

ಬೇಸಿಗೆಯಲ್ಲಿ ಹೊರರಾಜ್ಯಗಳ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳುವವರಿಗೂ ಊಟಿ, ಕೊಡೈಕೆನಾಲ್ ಪ್ರವಾಸವನ್ನು ಆಯೋಜಿಸಲಾಗಿದ್ದು, ಬೇಡಿಕೆಗನುಗುಣವಾಗಿ ಇದು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಬುಕ್ಕಿಂಗ್‍ಗಾಗಿ ಕೆಎಸ್‍ಟಿಡಿಸಿ ವೆಬ್‍ಸೈಟ್ ಹಾಗೂ ದೂ.ಸಂ.8970650070 ಸಂಪರ್ಕಿಸಲು ಕೋರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ