ನರೇಂದ್ರ ಮೋದಿ ಅವರು ಈ ದೇಶ ಕಂಡ ಮಹಾನ್ ಸುಳ್ಳುಗಾರ ಪ್ರಧಾನಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ

ಮಳವಳ್ಳಿ, ಮಾ.25- ಕೋಮುವಾದಿ ಬಿಜೆಪಿ ಸರ್ಕಾರದ ನರೇಂದ್ರ ಮೋದಿ ಅವರು ಈ ದೇಶ ಕಂಡ ಮಹಾನ್ ಸುಳ್ಳುಗಾರ ಪ್ರಧಾನಿಯಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.
ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಕೇಂದ್ರದ ಎನ್‍ಡಿಎ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಡೆಯನ್ನು ಖಂಡಿಸಿದರು.

ಇನ್ನು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಪ್ರಧಾನಿ ಮೋದಿ ಒಬ್ಬ ಮಹಾನ್ ಸುಳ್ಳುಗಾರರಾಗಿದ್ದು, ಅಧಿಕಾರಕ್ಕೆ ಬಂದ ಕೂಡಲೇ ಕಪ್ಪು ಹಣ ಹೊರತಂದು ಪ್ರತಿಯೊಬ್ಬ ಬಡವರ ಖಾತೆಗೆ ತಲಾ 15ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಆದರೆ, 15ರೂ.ಗಳನ್ನೂ ಸಹ ಯಾರ ಖಾತೆಗೂ ಹಾಕಿಲ್ಲ ಎಂದು ದೂರಿದರು.

ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ, 2 ಸಾವಿರ ಉದ್ಯೋಗವನ್ನೂ ನೀಡಿಲ್ಲ ಎಂದ ರಾಹುಲ್‍ಗಾಂಧಿ ಅಧಿಕಾರಕ್ಕೆ ಬರುವ ಮುನ್ನ ದೇಶದ ರೈತರ ಬದುಕು ಹಸನು ಮಾಡುವ ಘೋಷಣೆ ಮಾಡಿದ್ದ ಪ್ರಧಾನಿ ಅವರನ್ನು ಭೇಟಿ ಮಾಡಿ ದೇಶದ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಆಗ್ರಹಿಸಿದ್ದೆ. ಈ ಬಗ್ಗೆ ಚಕಾರ ಎತ್ತದ ಮೋದಿ ಅವರು ಕೇವಲ ಹತ್ತು ಮಂದಿ ದೊಡ್ಡ ಉದ್ಯಮಿಗಳ 2.50 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ ಎಂದು ಟೀಕಿಸಿದರು.

ತಮ್ಮದು ಗುಜರಾತ್ ಮಾದರಿ ಸರ್ಕಾರ ಎಂದು ಹೇಳುವ ನರೇಂದ್ರಮೋದಿ ಅವರು ಗುಜರಾತ್‍ನ ಇಡೀ ಶಿಕ್ಷಣ ವ್ಯವಸ್ಥೆಯನ್ನು 10 ಮಂದಿ ಉದ್ಯಮಿಗಳಿಗೆ ಒತ್ತೆ ಇಟ್ಟಿರುವ ಪರಿಣಾಮವಾಗಿ ಉನ್ನತ ಶಿಕ್ಷಣ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿ ವರ್ಷಕ್ಕೆ 15 ರಿಂದ 20 ಲಕ್ಷ ರೂ.ಗಳನ್ನು ಖರ್ಚು ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ಜತೆಗೆ ಇಡೀ ಗುಜರಾತ್ ಆಸ್ಪತ್ರೆಗಳನ್ನು ಉದ್ಯಮಿಗಳಿಗೆ ವಹಿಸಿದ್ದು, ಇದರಿಂದ ಅಲ್ಲಿನ ಜನ ಸಣ್ಣಪುಟ್ಟ ಚಿಕಿತ್ಸೆಗೂ ದುಬಾರಿ ಬೆಲೆ ತೆರುವ ಸ್ಥಿತಿ ನಿರ್ಮಾಣವಾಗಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದನೆ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ಹೆಣ್ಣು ಮಕ್ಕಳಿಗೂ ಉಚಿತ ಶಿಕ್ಷಣ ನೀಡುವುದರ ಜತೆಗೆ ರಾಜೀವ್‍ಗಾಂಧಿ ಆರೋಗ್ಯ ಕಾರ್ಯಕ್ರಮದ ಮೂಲಕ ಎಲ್ಲ ಬಡವರಿಗೂ 1ರಿಂದ 2ಲಕ್ಷದ ವರೆಗೆ ಉಚಿತ ಚಿಕಿತ್ಸೆ ನೀಡಲು ಹೊರಟಿರುವುದು ನಮ್ಮ ಸರ್ಕಾರದ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.

ಈವರೆಗೆ ಜನತಾದಳ ಎಸ್ ಎಂದರೆ ಜಾತ್ಯಾತೀತ ಎನ್ನಲಾಗುತ್ತಿದ್ದ ಜೆಡಿಎಸ್‍ನಲ್ಲಿ ಇದೀಗ ಎಸ್ ಎಂದರೆ ಸಂಘ ಪರಿವಾರ ಎಂದು ಬದಲಾಗಿದೆ. ಜೆಡಿಎಸ್, ಬಿಜೆಪಿಯ ಬಿ ಟೀಮ್ ಆಗಿ ಬದಲಾಗಿದೆ ಎಂದರು.

ಜಾತ್ಯತೀತ ಎನ್ನುವ ಜೆಡಿಎಸ್ ಅಧಿಕಾರಕ್ಕಾಗಿ ಈಗಾಗಲೇ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದು, ಅದರ ನುಡಿ ಹಾಗೂ ನಡೆ ಬೇರೆ ಬೇರೆಯಾಗಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್, ಮಾಜಿ ಸಂಸದ ರೆಹಮಾನ್ ಖಾನ್, ಜಿ.ಮಾದೇಗೌಡ, ಸಚಿವ ಡಿ.ಕೆ.ಶಿವಕುಮಾರ್, ಶಾಸಕ ನರೇಂದ್ರಸ್ವಾಮಿ, ಸತೀಶ್ ಜಾರಕಿಹೋಳಿ ಸೇರಿದಂತೆ ಇತರೆ ಮುಖಂಡರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ