ಜೆಡಿಎಸ್‍ನ ಶಾಸಕರು ನಮ್ಮ ಪಕ್ಷಕ್ಕೆ ಸೇರುವುದರಿಂದ ಕಾಂಗ್ರೆಸ್‍ನ ಬಲ ಇನ್ನೂ ಹೆಚ್ಚಾಗಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಮಾ.25- ಜೆಡಿಎಸ್‍ನ ಶಾಸಕರು ನಮ್ಮ ಪಕ್ಷಕ್ಕೆ ಸೇರುವುದರಿಂದ ಕಾಂಗ್ರೆಸ್‍ನ ಬಲ ಇನ್ನೂ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಮೈಸೂರು ಜಿಲ್ಲೆ ಪ್ರವಾಸದಲ್ಲಿದ್ದು, ಅವರು ತಂಗಿರುವ ಅತಿಥಿ ಗೃಹದ ಬಳಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಸಿಎಂ ಮಾತನಾಡಿದರು.

ಜೆಡಿಎಸ್‍ನ ಬಂಡಾಯ ಶಾಸಕರು ಇಂದು ಸಂಜೆ ರಾಹುಲ್‍ಗಾಂಧಿ ಅವರ ಸಮ್ಮುಖದಲ್ಲಿ ನಮ್ಮ ಪಕ್ಷ ಸೇರಲಿದ್ದಾರೆ. ಜೆಡಿಎಸ್ ಮುಖಂಡ, ಮಾಜಿ ಸಚಿವ ಎಂ.ಸಿ.ನಾಣಯ್ಯ ಕೂಡ ಇಂದು ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.

ಎಂ.ಸಿ.ನಾಣಯ್ಯ ಅತ್ಯುತ್ತಮ ಸಂಸದೀಯ ಪಟು. ಅವರು ನಮ್ಮ ಪಕ್ಷ ಸೇರುತ್ತಿರುವುದರಿಂದ ನಮ್ಮ ಬಲ ಇನ್ನೂ ವೃದ್ಧಿಯಾಗಲಿದೆ ಎಂದರು.
ನಿನ್ನೆ ಚಾಮರಾಜನಗರದಲ್ಲಿ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಬಿಜೆಪಿ ತೊರೆದು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅಮಿತ್ ಷಾ ಹಾಗೂ ನರೇಂದ್ರ ಮೋದಿ ಅವರು ಒಂದಲ್ಲ ನೂರು ಬಾರಿ ರಾಜ್ಯಕ್ಕೆ ಬಂದರೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ರಾಹುಲ್‍ಗಾಂಧಿ ಅವರ ಪ್ರವಾಸಕ್ಕೆ ಅದ್ಧೂರಿ ಪ್ರತಿಕ್ರಿಯೆ ಸಿಕ್ಕಿದೆ.

ಅಥಣಿಯಿಂದ ಹಿಡಿದು ಚಾಮರಾಜನಗರ, ಮಂಡ್ಯದವರೆಗೂ ನಮಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ರಾಜ್ಯದ ಜನ ನಮ್ಮ ಪರವಾಗಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂಬುದು ಗುಪ್ತಚರ ಮಾಹಿತಿಯಿಂದ ಗೊತ್ತಾಗಿದೆ. ಕೆಲಸ ಮಾಡುವವರಿಗೆ ಜನ ಬೆಂಬಲವಿದ್ದೇ ಇರುತ್ತದೆ ಎಂದು ಹೇಳಿದರು.

ಕರಾವಳಿ ಕೋಮುವಾದ ಕೇಂದ್ರ: ಕರಾವಳಿಯನ್ನು ಕೋಮುವಾದದ ಕೇಂದ್ರವನ್ನಾಗಿ ಮಾಡಲು ಬಿಜೆಪಿಯವರು ಹೊರಟಿದ್ದರು. ಅಲ್ಲೂ ಕೂಡ ನಮ್ಮ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗಿ ನಡೆಯಿತು ಎಂದು ಸಿಎಂ ಹೇಳಿದರು.
ಕಳಂಕಿತರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದರೆ, ಜನರಿಗೆ ಅರ್ಥವಾಗುವುದಿಲ್ಲವೆ ಎಂದು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾರ್ಮಿಕವಾಗಿ ಟಾಂಗ್ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ನಾಳೆ ಕೆಪಿಸಿಸಿ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದೆ. ನಮ್ಮಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಶಿಸ್ತು, ಸಂಪ್ರದಾಯ ಇದೆ. ಅದರಂತೆ ನಾಳಿನ ಸಭೆಯಲ್ಲಿ ಚರ್ಚೆ ನಡೆದು ನಂತರ ಆಯ್ಕೆ ಪಟ್ಟಿ ಸಿದ್ಧವಾಗಲಿದ್ದು, ಆ ಪಟ್ಟಿಯನ್ನು ಇನ್ನೊಂದು ತಂಡ ಪರಿಶೀಲಿಸಿ ತದನಂತರ ಅದನ್ನು ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಆ ನಂತರವಷ್ಟೇ ಅಭ್ಯರ್ಥಿಗಳ ಹೆಸರು ಆಖೈರಾಗಲಿದೆ ಎಂದು ತಿಳಿಸಿದರು.

ವೇಣುಗೋಪಾಲ್ ಹಾಗೂ ಪರಮೇಶ್ವರ್ ಮೈಸೂರಿನಲ್ಲೇ ಇದ್ದಾರೆ. ಅವರು ಬೆಂಗಳೂರಿಗೆ ಹೋಗಿಯೂ ಇಲ್ಲ. ಪ್ರತ್ಯೇಕವಾಗಿ ಸಭೆಯನ್ನೂ ನಡೆಸಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಇಂದು ರಾಹುಲ್‍ಗಾಂಧಿ ಅವರ ಸಮ್ಮುಖದಲ್ಲಿ ಅನೌಪಚಾರಿಕವಾಗಿ ಅಭ್ಯರ್ಥಿಗಳ ಆಯ್ಕೆ ಕುರಿತು ಪರಮೇಶ್ವರ್ ಹಾಗೂ ವೇಣುಗೋಪಾಲ್ ಮಾತುಕತೆ ನಡೆಸಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಪ್ರತ್ಯೇಕವಾದ ವೃಂದ ಮತ್ತು ನೇಮಕಾತಿ ನಿಯಮಗಳು ರಚನೆಯಾಗಬೇಕು: ಈಶಾನ್ಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾ.ರಾ.ಪ್ರತಾಪ್ ರೆಡ್ಡಿ ಒತ್ತಾಯ
ಬಳ್ಳಾರಿ,ಮಾ.25- ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಪ್ರತ್ಯೇಕವಾದ ವೃಂದ ಮತ್ತು ನೇಮಕಾತಿ ನಿಯಮಗಳು ರಚನೆಯಾಗಬೇಕು ಎಂದು ಈಶಾನ್ಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾ.ರಾ.ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೆಚ್ಚು ಅನುಭವವಿರುವ ಹಿರಿಯ ಸಚಿವರು, ಚುನಾಯಿತ ಪ್ರತಿನಿಧಿಗಳು, ಸಾಹಿತಿಗಳು ಹಾಗೂ ಪತ್ರಕರ್ತರನ್ನೊಳಗೊಂಡ ಅನುಷ್ಠಾನ ಸಮಿತಿಯನ್ನು ರಚಿಸಿ ಆ ಸಮಿತಿಗೆ ಪರಮಾಧಿಕಾರವನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಿಗೆ ವಾರ್ಷಿಕ 1500 ಕೋಟಿ ರೂ. ಅನುದಾನ ನೀಡುವುದಾಗಿ ಸರ್ಕಾರ ಆಶ್ವಾಸನೇ ನೀಡಿದ್ದರೂ 500 ಕೋಟಿಗಿಂತ ಹೆಚ್ಚು ಅನುದಾನ ಒದಗಿಸಿಲ್ಲ.
ಐದು ವರ್ಷದಲ್ಲಿ ಏಳೂವರೆ ಸಾವಿರ ಕೋಟಿ ಅನುದಾನದ ಬದಲಿಗೆ ಕೇವಲ ಎರಡೂವರೆ ಸಾವಿರ ಕೋಟಿ ಅನುದಾನ ಮಾತ್ರ ನೀಡಲಾಗಿದೆ. ಸರ್ಕಾರಕ್ಕೂ ಈ ಭಾಗದ ಅಭಿವೃದ್ದಿಯ ಆಸಕ್ತಿ ಇಲ್ಲ. ಜನಪ್ರತಿನಿಧಿಗಳಿಗೂ ಬೇಕಾಗಿಲ್ಲ ಎಂಬಂತಾಗಿದೆ ಎಂದು ಟೀಕಿಸಿದರು.
ಎಚ್‍ಕೆಡಿಬಿ ಅನುದಾನದಲ್ಲಿ 500 ಕೋಟಿ ರೂ.ಗಳನ್ನು ಆರು ಜಿಲ್ಲೆಯ ಗ್ರಾಮೀಣಾ ಭಾಗದ ಶಾಲಾ ಕಾಲೇಜುಗಳಿಗೆ ನೀಡಿದಾಗ ಮಾತ್ರ ಮೂಲ ಸೌಕರ್ಯ ಕಲ್ಪಿಸಲು ಅನುಕೂಲವಾಗಲಿದೆ.

ವಿದ್ಯಾರ್ಥಿಗಳಿಂದ ಪಡೆಯುವ ಟ್ಯೂಶನ್ ಶುಲ್ಕದ ಶೇ.50ರಷ್ಟನ್ನು ಆಡಳಿತ ಮಂಡಳಿಗೆ ನೀಡಬೇಕು, ಬೆಂಗಳೂರಿನಲ್ಲಿರುವಂತೆ ಕಲ್ಬುರ್ಗಿಯಲ್ಲೂ ಕೆಇಟಿ ಶಾಖೆಯನ್ನು ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.

ಸ್ವಾತಂತ್ರ್ಯ ಬಂದಾಗಿನಿಂದಲೂ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಬಳ್ಳಾರಿಯಿಂದ ಅಭ್ಯರ್ಥಿ ಸ್ಪರ್ಧಿಸಿರಲಿಲ್ಲ. ಜಿಲ್ಲೆಗಳ ಸಂಘಸಂಸ್ಥೆಗಳ ಒತ್ತಾಯದ ಮೇರೆಗೆ ಜೆಡಿಎಸ್‍ನಿಂದ ಸ್ಪರ್ಧಿಸಿದ್ದು , ಈ ಬಾರಿ 20 ಸಾವಿರಕ್ಕೂ ಪದವೀಧರರು ನೋಂದಣಿಯಾಗಿರುವುದು ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಇಲ್ಲಿಯವರೆಗೆ ಸುಮಾರು 28 ಸಾವಿರ ಪದವೀಧರರು ನೋಂದಾಣಿ ಮಾಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ