ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಚಂದ್ರಯಾನ್-2 ಮಹತ್ವಾಕಾಂಕ್ಷಿ ಯೋಜನೆಗೆ ಈ ವರ್ಷ ಅಕ್ಟೋಬರ್ ಮೊದಲ ವಾರ ಚಾಲನೆ :

ನವದೆಹಲಿ, ಮಾ.25-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಚಂದ್ರಯಾನ್-2 ಮಹತ್ವಾಕಾಂಕ್ಷಿ ಯೋಜನೆಗೆ ಈ ವರ್ಷ ಅಕ್ಟೋಬರ್ ಮೊದಲ ವಾರ ಚಾಲನೆ ಲಭಿಸಲಿದೆ. ವಾಸ್ತವವಾಗಿ ಏಪ್ರಿಲ್ 23ರಂದು ಈ ಯೋಜನೆ ಸಾಕಾರಗೊಳ್ಳಬೇಕಿತ್ತು. ಆದರೆ ಪರೀಕ್ಷೆಗಳು ಪ್ರಗತಿಯಲ್ಲಿರುವುದರಿಂದ ಇದು ಮುಂದೂಡಲ್ಪಟ್ಟಿದೆ.
ಚಂದ್ರಯಾನ ಯೋಜನೆ ಮುಂದೂಡಿಕೆಗೆ ಕಾರಣಗಳನ್ನು ವಿವರಿಸಿರುವ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್, 800 ಕೋಟಿ ರೂ.ಗಳ ಈ ಮಹತ್ವದ ಉಪಕ್ರಮವನ್ನು ಪರಿಪೂರ್ಣ ಪ್ರಯೋಗ ಮತ್ತು ಪರೀಕ್ಷೆಗಳ ನಂತರ ಅಕ್ಟೋಬರ್ ಮೊದಲ ವಾರದಲ್ಲಿ ಅನುಷ್ಠಾನಗೊಳಿಸಲಾಗುವುದು. ಇದೊಂದು ಸಂಪೂರ್ಣ ದೇಶೀಯ ಯೋಜನೆಯಾಗಿದೆ. ಇದರಲ್ಲಿನ ಸಂಕೀರ್ಣಗಳು ಮತ್ತು ಜಟಿಲತೆಗಳನ್ನು ನಿವಾರಿಸಲು ಸ್ಪಲ್ಪ ಸಮಯಾವಕಾಶ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪರಿಣಿತ ವಿಜ್ಞಾನಿಗಳು ಕಾರ್ಯೋನ್ಮುಖರಾಗಿದ್ದಾರೆ ಎಂದರು.
ಆರ್ಬಿಟರ್, ರೋವರ್ ಮತ್ತು ಲ್ಯಾಂಡರ್‍ನೊಂದಿಗೆ ಇದೇ ಮೊದಲ ಬಾರಿ ಇಸ್ರೋ ಪ್ರಯೋಗ ನಡೆಸುತ್ತಿದೆ. ಹೀಗಾಗಿ ಎಲ್ಲ ಪ್ರಯೋಗಗಳನ್ನು ಪೂರ್ಣಗೊಳಿಸಿ ಯೋಜನೆ ಬಗ್ಗೆ ಸದೃಢ ವಿಶ್ವಾಸದ ನಂತರ ಚಂದ್ರಯಾನ್-2 ಕಾರ್ಯಗತಗೊಳ್ಳಲಿದೆ ಎಂದು ಅವರು ವಿವರಿಸಿದರು.
ಈ ಯೋಜನೆಯ ಘಟಕದಲ್ಲಿ ಇಸ್ರೋ ಮಾಜಿ ಅಧ್ಯಕ್ಷರು, ಬಾಹ್ಯಾಕಾಶ ಪರಿಣಿತರು ಮತ್ತು ಐಐಟಿ ಪೆÇ್ರಫೆಸರ್‍ಗಳು ಇದ್ದಾರೆ ಅವರ ಸಲಹೆ-ಶಿಫಾರಸುಗಳ ಮೇಲೆ ಈ ಯೋಜನೆಯನ್ನು ಮುಂದೂಡಲಾಗಿದೆ ಎಂದು ಡಾ. ಶಿವನ್ ಹೇಳಿದರು.
ಮಾರ್ಚ್ 29ರಂದು ಜಿಎಸ್‍ಎಲ್‍ವಿಎಫ್-08 ರಾಕೆಟ್ ಮೂಲಕ ಜಿಸ್ಯಾಟ್-6ಎ ಉಪಗ್ರಹ ಉಡಾವಣೆಯತ್ತ ಇಸ್ರೋ ಈಗ ಗಮನ ಕೇಂದ್ರೀಕರಿಸಿದೆ ಎಂದು ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ