ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷವೇ ಎಂಬುದನ್ನು ರಾಹುಲ ಗಾಂಧಿ ಹೇಳಲಿ: ಎಚ್.ಡಿ.ಕುಮಾರಸ್ವಾಮಿ ಆಗ್ರಹ

ಬೆಂಗಳೂರು,ಮಾ.25-ಜೆಡಿಎಸ್ ಜ್ಯಾತ್ಯತೀತ ಪಕ್ಷವಲ್ಲ ಎನ್ನುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷವೇ ಎಂಬುದನ್ನು ಹೇಳಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಮಂಡ್ಯ ಜಿಲ್ಲೆ ಕಾವೇರಮ್ಮನ ಮಡಿಲಲ್ಲಿ ನಿಂತು ರಾಹುಲ್ ಗಾಂಧಿ ಜೆಡಿಎಸ್‍ನ್ನು ಟೀಕಿಸುವಾಗ ಭಯದ ಭಾವ ಸ್ಪಷ್ಟವಾಗಿ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಜನ ಧೂಳಿಪಟ ಮಾಡಲಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯ ದುಸ್ವಪ್ನ ಅವರ ಬಾಯಲ್ಲಿ ಅಂತಹ ಮಾತುಗಳನ್ನಾಡಿಸಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ದೇಶದಲ್ಲಿ ನಿಮ್ಮನ್ನು ಜನ ಮುಳುಗಿಸುತ್ತಿದ್ದಾರೆ. ಮುಂದೆ ರಾಜ್ಯದಲ್ಲಿಯೂ ಮುಳುಗಿ ಅಸ್ತಂಗತರಾಗುತ್ತೀರಿ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮುಂದಾಗಿರುವ ಬಿಜೆಪಿಗೆ ನಿಮ್ಮಂಥವರು ಸುಲಭ ತುತ್ತಾಗುವುದರಲ್ಲಿ ಅನುಮಾನವಿಲ್ಲ. ಮುಂದಿನ ಚುನಾವಣೆಯಲ್ಲಿ ನಿಮಗೆ ಜನರು ತಕ್ಕ ಉತ್ತರ ಕೊಡಲಿದ್ದಾರೆ.

ಜೆಡಿಎಸ್ ಎಂದರೆ ಜನತಾದಳ ಸಂಘ ಎಂದು ರಾಹುಲ್ ಗಾಂಧಿ ಟೀಕಿಸಿರುವುದು ಬೌದ್ಧಿಕ ದಿವಾಳಿತನವನ್ನು ತೋರುತ್ತದೆ. ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷವಾಗಿ ಉಳಿದಿದೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಧರ್ಮ, ದೈವದ ಮೇಲೆ ಆಳವಾದ ನಂಬಿಕೆ, ಅಪಾರವಾದ ಗೌರವ ಹೊಂದಿದ್ದು, ಎಲ್ಲ ಜಾತಿಗಳನ್ನು ಸಮಾನವಾಗಿ ಕಾಣುವುದು ನಾನು ನಂಬಿರುವ ಜಾತ್ಯತಿತತೆ. ಆದರೆ ಕಾಂಗ್ರೆಸ್ ಮತಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸುತ್ತಾ ಬಹುಸಂಖ್ಯಾತರು ಕಿಸೆಯಲ್ಲಿದ್ದಾರೆ ಎಂದು ಭಾವಿಸಿ ಶತಮಾನಗಳಿಂದಲೂ ಅವರನ್ನು ಕಡೆಗಣಿಸಿಕೊಂಡು ಬಂದಿರುವುದು ಇದುವರೆಗಿನ ಜಾತ್ಯತೀತೆಯಾಗಿದೆ ಎಂದು ಟೀಕಿಸಿದ್ದಾರೆ.

ಬಹುಸಂಖ್ಯಾತರನ್ನು ಕಡೆಗಣಿಸಿರುವುದರಿಂದಲೇ ಕಾಂಗ್ರೆಸ್ ಪಕ್ಷ ಅಳವಿನ ಅಂಚಿಗೆ ಸರಿದಿದೆ. ಅದು ಮುಳುಗುವಾಗ ಪಕ್ಷ ಸಮರ್ಥ ನಾಯಕ, ನಿಜವಾದ ಜಾತ್ಯತೀತ ನಾಯಕನ ಅಗತ್ಯವಿತ್ತು. ಆದರೆ ದೇಶದ ಸಾಮಾಜಿಕ, ರಾಜಕೀಯ ವಾಸ್ತವವನ್ನೇ ಅರಿಯದ ನಿಮ್ಮಂತ ಅಪ್ರಬುದ್ಧರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಜೆಡಿಎಸ್ ಜಾತ್ಯತೀತ ಪಕ್ಷ ಅಲ್ಲವಾದರೆ ನಮ್ಮ ಪಕ್ಷದ ಬೆಂಬಲದಿಂದ ಬಿಬಿಎಂಪಿಯಲ್ಲಿ ಮಾಡಿಕೊಂಡಿರುವ ಮೈತ್ರಿಯ ಬಗ್ಗೆ ರಾಹುಲ್ ಗಾಂಧಿ ತಮ್ಮ ನಿಲುವನ್ನು ಪ್ರಕಟಿಸಬೇಕು. ನೈತಿಕತೆ ಇದ್ದರೆ ಅಧಿಕಾರ ಹಿಡಿದಿರುವವರಿಂದ ರಾಜೀನಾಮೆ ಕೊಡಿಸಬೇಕೆಂದಿದ್ದಾರೆ.
ಗುಂಡ್ಲುಪೇಟೆ-ನಂಜನಗೂಡು ವಿಧಾನಸಭೆ ಉಪಚುನಾವಣೆಯಲ್ಲಿ ನಮ್ಮ ಬೆಂಬಲದಿಂದ ಗೆದ್ದು ಬೀಗಿದ ನೀವು ಅಲ್ಲಿನ ಚುನಾಯಿತ ಪ್ರತಿನಿಧಿಗಳಿಂದ ರಾಜೀನಾಮೆ ಕೊಡಿಸಿ ಎಂದು ಸವಾಲು ಹಾಕಿದರು.

ಭಕ್ತಿ ಭಂಡಾರಿ ಬಸವಣ್ಣನ ವಚನದಂತೆ ನುಡಿದಂತೆ ನಡೆಯಬೇಕು ಎಂದಿದ್ದೀರಿ.ನಾವು ನುಡಿದಂತೆ ನಡೆಯುತ್ತಿದ್ದು , ನಮ್ಮ ಪಕ್ಷದ ಕಾಳಜಿ ನಿಮಗೆ ಬೇಕಿಲ್ಲ. ನೀವು ಹೇಳಿದಂತೆ ನಾವು ನಡೆದರೆ ಅದು ಬಸವಣ್ಣನವರನ್ನು ಪಾಲಿಸಿದಂತಾಗುತ್ತದೆ ಎಂದು ಭಾವಿಸಿದರೆ ಅದು ನಿಮ್ಮ ಮೂರ್ಖತನ ಪರಮಾವಧಿ ಎಂದು ರಾಹುಲ್ ಗಾಂಧಿ ಅವರನ್ನು ಟೀಕಿಸಿದರು.
ವೀರಶೈವ-ಲಿಂಗಾಯಿತರನ್ನು ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಸವಣ್ಣನವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ನಿಮ್ಮಂಥ ಪಕ್ಷದವರಿಂದ ಬುದ್ದಿ ಹೇಳಿಸಿಕೊಳ್ಳುವ ದಾರಿದ್ರ್ಯ ನಮ್ಮ ಪಕ್ಷಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ