ಕ್ಯಾಷ್‍ಲೆಸ್ ಭಾರತದಂತೆ ಕ್ಯಾಷ್‍ಲೆಸ್ ರಾಜಕೀಯ ಪಕ್ಷ ನಿರ್ಮಾಣ ಮಾಡಬೇಕು: ಹಿರಿಯ ವಕೀಲ ಪ್ರಶಾಂತ್‍ಭೂಷಣ್

ಬೆಂಗಳೂರು, ಮಾ.25-ಭಾರತದಲ್ಲಿ ನೋಟು ಅಮಾನೀಕರಣ ಆದ ನಂತರ ದೇಶವನ್ನು ಕ್ಯಾಷ್‍ಲೆಸ್ ಭಾರತವನ್ನಾಗಿ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಇದರಂತೆಯೇ ಕ್ಯಾಷ್‍ಲೆಸ್ ರಾಜಕೀಯ ಪಕ್ಷ ನಿರ್ಮಾಣ ಮಾಡಬೇಕೆಂದು ಹಿರಿಯ ವಕೀಲ ಪ್ರಶಾಂತ್‍ಭೂಷಣ್ ಹೇಳಿದರು.

ಕೃಷಿ ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ರಜಾಜಾಗೃತಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಚುನಾವಣೆಯ ಶುದ್ಧತೆ, ಕುಸಿತ ಮತ್ತು ಚಿಕಿತ್ಸೆ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ರಾಜಕಾರಣಿಗಳು, ಪಕ್ಷಗಳು ಜಾಹೀರಾತುಗಳಲ್ಲೇ ಮುಳುಗಿ ಹೋಗಿವೆ. ರ್ಯಾಲಿ ಸಮಾರೋಪ ಸಮಾರಂಭ, ಯಾತ್ರೆಗಳು ಮಾಡುವುದರ ಮೂಲಕ ದುಂದುವೆಚ್ಚ ಮಾಡುತ್ತಿದ್ದಾರೆ. ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.

ಬಿಜೆಪಿ ಕೋಮುವಾದಿ ಪಕ್ಷ, ಕಾಂಗ್ರೆಸ್ ಭ್ರಷ್ಟಾಚಾರ ಪಕ್ಷ ಎಂಬ ಆರೋಪಗಳು ಕೇಳಿ ಬರುತ್ತಿವೆ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳೆಲ್ಲಾ ವ್ಯವಸ್ಥೆ ಮಾಡಿಕೊಂಡು ಪ್ರಾಬಲ್ಯದಿಂದ ಮುನ್ನುಗ್ಗುತ್ತಿವೆÉ ಎಂದರು.

ಭ್ರಷ್ಟಾಚಾರದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಕುಂಠಿತವಾಗಿದೆ. ಹಣದ ಪ್ರಾಬಲ್ಯ ಹೆಚ್ಚಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿಗಳು ಶೇ.25ರಷ್ಟು ಉತ್ತಮವಾಗಿದ್ದರೆ, ಇನ್ನುಳಿದ ಅಭ್ಯರ್ಥಿಗಳು ಭ್ರಷ್ಟಾಚಾರದಿಂದಲೇ ಕೂಡಿರುತ್ತಾರೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ವಿಶ್ಲೇಷಕ ಮಹದೇವ್ ಪ್ರಸಾದ್ ಮಾತನಾಡಿ, ನಮ್ಮಲ್ಲಿ ಐದು ಬಗೆಯ ಮತದಾರರು ಇದ್ದಾರೆ. ಮೊದಲನೆಯವರು ಜಾತಿ ನೋಡಿ ಮತ ಹಾಕಿದರೆ, ಎರಡನೆಯವರು ಪಕ್ಷ ನೋಡುತ್ತಾರೆ. ಮೂರನೆಯವರು ದುಡ್ಡು ತೆಗೆದುಕೊಂಡು ಮತ ನೀಡುತ್ತಾರೆ, ನಾಲ್ಕನೆಯವರು ಮತವನ್ನೇ ಹಾಕುವುದಿಲ್ಲ, ಬದಲಾವಣೆ ಬಯಸಿ ಮತ ಚಲಾಯಿಸುವವರು ಐದನೆಯವರಾಗಿದ್ದು, ಕೇವಲ ಶೇ.20ರಷ್ಟು ಮಂದಿ ಮಾತ್ರ ಇದ್ದಾರೆ ಎಂದು ಹೇಳಿದರು.

ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೂ ನೋಡಿದರೆ ನಮಗೆ ಕಾಣುವುದು ಕುಟುಂಬ ರಾಜಕಾರಣ ಮಾತ್ರ. ಚುನಾವಣೆಯಲ್ಲಿ ಸುಧಾರಣೆಗಳಾಗಬೇಕಾದರೆ ಚುನಾವಣಾ ನೀತಿ ಸಂಹಿತೆ ಘೋಷಣೆ ನಂತರ ಯಾವುದೇ ರಾಜಕೀಯ ಪಕ್ಷದ ಅಭ್ಯರ್ಥಿಗಳು, ಮುಖಂಡರು ಚುನಾವಣಾ ಪ್ರಚಾರದ ಅಖಾಡಕ್ಕಿಳಿಯಬಾರದು. ಐದು ವರ್ಷ ಆಡಳಿತ ನಡೆಸಿರುವ ಸರ್ಕಾರದ ಬಗ್ಗೆ ನಮಗೆ ತಿಳಿದಿದೆ. ಅವರ ಸಾಧನೆ ನೋಡಿ ಜನರೇ ನಿರ್ಧರಿಸಬೇಕೇ ಹೊರತು ಜಾಹೀರಾತು ಪ್ರಚಾರವನ್ನು ನೋಡಿ ಮತ ಚಲಾಯಿಸಬಾರದು ಎಂದರು.

ಒಂದು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯಸರ್ಕಾರದಿಂದ ಐದು ವರ್ಷಗಳ ಅವಧಿಗೆ ನಾಲ್ಕೂವರೆ ಸಾವಿರ ಕೋಟಿ ಅನುದಾನ ಬರುತ್ತದೆ. ಇಷ್ಟು ಬಂದರೂ ಸಹ ನಮ್ಮ ರಸ್ತೆಗಳ ಸ್ಥಿತಿ ಹೇಳತೀರದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಿಗರ ಉದ್ಯೋಗ ವೇದಿಕೆ ಅಧ್ಯಕ್ಷೆ ವಿನುತಾ ಮೂಲ ಮಾತನಾಡಿ, ಚುನಾವಣೆ ಸುಧಾರಣೆಯಾಗಬೇಕಾದರೆ ಮೊದಲಿಗೆ ಕಾಗದದ ಮತದಾನವೇ ಸೂಕ್ತ. ಇದು ಜಾರಿಗೊಳ್ಳಬೇಕು. ಚುನಾವಣೆ ಎಂಬ ಆಟದಲ್ಲಿ ಚುನಾವಣಾ ಆಯೋಗ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು. 224 ವಿಧಾನಸಭಾ ಕ್ಷೇತ್ರದಲ್ಲೂ ಪರಿವೀಕ್ಷಣಾಧಿಕಾರಿಗಳು ಇರುತ್ತಾರೆ. ಇಲ್ಲಿ ಕಾವಲುಗಾರನೇ ಕಳ್ಳನಾಗಿರುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಕೀಲ ಶಂಕರಪ್ಪ ಅವರ ಶತ್ರುಪ್ರಿಯ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ನಿವೃತ್ತ ನ್ಯಾ.ಎಂ.ಎನ್.ವೆಂಕಟಾಚಲಯ್ಯ, ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ, ಪತ್ರಕರ್ತೆ ಶಶಿಕಲಾ ಸೇರಿದಂತೆ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ