ಬೆಂಗಳೂರು, ಮಾ.25- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷಕ್ಕೆ ದಲಿತ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಮೂಲ ಅನುಸೂಚಿತ ಜಾತಿಗಳ ಐಕ್ಯತೆ ಸಮಿತಿ ಅಧ್ಯಕ್ಷ ಪಟ್ಟಂದೂರು ಕೃಷ್ಣಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದೇವಪುರ ವಿಧಾನಸಭಾ ಕ್ಷೇತ್ರ ಪ್ರತಿಷ್ಠಿತ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ದಲಿತ ಸಮುದಾಯದ ಮತದಾರರಿದ್ದಾರೆ. 2008ರಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ವಲಸಿಗರನ್ನು ಚುನಾವಣಾ ಕಣಕ್ಕೆ ಇಳಿಸಲಾಗಿದ್ದು, 2013ರಲ್ಲಿ ಬ್ಯಾಟರಾಯನಪುರ ಕ್ಷೇತ್ರದ ನಿವಾಸಿ ಎ.ಸಿ.ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಮುಂಬರುವ ಚುನಾವಣೆಯಲ್ಲೂ ಸಹ ಹೊರಗಿನಿಂದ ಬಂದ ವಲಸಿಗರಿಗೆ ಪುನಃ ಟಿಕೆಟ್ ನೀಡಲು ಕಾಂಗ್ರೆಸ್ ಪಕ್ಷ ಸಿದ್ಧತೆ ನಡೆಸಿದೆ. ಇದಕ್ಕೆ ಸ್ಥಳೀಯರಾದ ನಾಯಕರು ಮತ್ತು ಮತದಾರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಮತದಾರರ ಅಸಮಾಧಾನವನ್ನು ಕಾಂಗ್ರೆಸ್ ನಾಯಕರು ಪರಿಗಣನೆಗೆ ತೆಗೆದುಕೊಂಡು ಸ್ಥಳೀಯ ಅರ್ಹ ನಿಷ್ಠಾವಂತ ದಲಿತ ಮುಖಂಡರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಚುನಾವಣೆ ಪ್ರಕ್ರಿಯೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿದರು.
ಉಪಾಧ್ಯಕ್ಷ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಮತ್ತು ಖಜಾಂಚಿ ಶಾಂತರಾಮು ಮತ್ತಿತರರಿದ್ದರು.