ನ್ಯೂಲ್ಯಾಂಡ್ಸ್ , ಮಾ.25- ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಚೆಂಡು ವಿರೂಪ ಗೊಳಿಸಿರುವ ಸಂಬಂಧ ಆಸ್ಟ್ರೇಲಿಯಾ ಸರ್ಕಾರ ನಾಯಕ ಸ್ಟೀವ್ ಸ್ಮಿತ್ ಹಾಗೂ ಇತರರ ಆಟಗಾರರನ್ನು ವಜಾಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮುಂದಾಗಿದೆ.
ಆಸ್ಟ್ರೇಲಿಯಾದ ಪ್ರಧಾನಿ ಮಲ್ಕೋಮ್ ಟರ್ನ್ಬುಲ್ ಅವರು ಚೆಂಡು ವಿರೂಪ ಪ್ರಕರಣ ತೀವ್ರ ಶಾಕ್ ನೀಡಿದೆ, ಈ ಸಂಬಂಧವಾಗಿ ತೀವ್ರ ಕ್ರಮಕೈಗೊಳ್ಳಬೇಕೆಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಡೇವಿಡ್ ಪೇವಿರ್ಗೆ ತಿಳಿಸಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ನಾಯಕ ಸ್ಟೀವ್ಸ್ಮಿತ್ರನ್ನು ತಕ್ಷಣದಿಂದಲೇ ನಾಯಕತ್ವದಿಂದ ಕೆಳಗಿಳಿಸಲು ತೀರ್ಮಾನಿಸಿರುವುದೇ ಅಲ್ಲದೆ, ಚೆಂಡು ವಿರೂಪಗೊಳಿಸಿದ ಆರಂಭಿಕ ಆಟಗಾರ ಬ್ಯಾಂಕ್ರಾಫ್ಟ್ ವಿರುದ್ಧ ಶಿಸ್ತು ಕ್ರಮಕೈಗೊಂಡಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ತಂಡದ ಮುಖ್ಯಸ್ಥ ಜೇಮ್ಸ್ ಸೌಂಥರ್ಲ್ಯಾಂಡ್ ಅವರು ಚೆಂಡು ವಿರೂಪ ವಿವಾದದಿಂದ ನನಗೂ ಆಘಾತ ಉಂಟಾಗಿದೆ, ಆದರೆ ತಕ್ಷಣವೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ, ಪ್ರಕರಣದ ಸಂಬಂಧ ಸ್ಪಷ್ಟ ಚಿತ್ರಣವನ್ನು ಆಧರಿಸಿ ತನಿಖೆ ನಡೆಸಲಾಗುವುದು, ಈ ಪ್ರಕರಣದಲ್ಲಿ ಸ್ಮಿತ್ ಕೂಡ ತಪ್ಪಿತಸ್ಥರೆಂದಾದರೆ ಅವರನ್ನು ನಾಯಕತ್ವದಿಂದ ಇಳಿಸಲಾಗುವುದು ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಜಾನ್ ವೆಲ್ಲಿ , ಕೇಟ್ ಪಾಲ್ಮೇರ್ ಕೂಡ ವಿವಾದದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ನ್ಯೂಲ್ಯಾಂಡ್ಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ನ 3ನೆ ಪಂದ್ಯದ ವೇಳೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿದ್ದರು. ಇದು ಐಸಿಸಿ ಪ್ರಕಾರ ನಿಯಮ ಬಾಹಿರವಾಗಿದ್ದು ತಂಡದ ನಾಯಕ ಸ್ಟೀವ್ ಸ್ಮಿತ್ ಕೂಡ ಆರೋಪಿಯಾಗಿದ್ದಾನೆ.
ಆದರೆ ಪ್ರಕರಣವನ್ನು ಸಮರ್ಥಿಸಿಕೊಂಡಿರುವ ಸ್ಮಿತ್ , ಬಾಲ್ ವಿರೂಪ ಪ್ರಕರಣದಿಂದ ನಾನು ನಾಯಕತ್ವ ತ್ಯಜಿಸುವ ಅಗತ್ಯವಿಲ್ಲ , ಆಸ್ಟ್ರೇಲಿಯಾ ನಾಯಕತ್ವವನ್ನು ವಹಿಸಿಕೊಳ್ಳಲು ಇಂದಿಗೂ ನಾನೇ ಸರಿಯಾದ ವ್ಯಕ್ತಿ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ದಕ್ಷಿಣಆಫ್ರಿಕಾ ಪಂದ್ಯದ ವೇಳೆ ಬಾಲ್ ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಮಾಜಿ ನಾಯಕರಾದ ಶೇನ್ವಾರ್ನ್, ಮೈಕಲ್ ಕ್ಲಾರ್ಕ್, ಮಿಚಲ್ ಜಾನ್ಸನ್ ಆತಂಕ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಮೇಲೂ ಪರಿಣಾಮ:
2013ರಲ್ಲಿ ಸ್ಪಾಟ್ ಹಾಗೂ ಮ್ಯಾಚ್ ಫಿಕ್ಸಿಂಗ್ನಿಂದ ಕಳೆದ ಎರಡು ವರ್ಷಗಳಿಂದ ಐಪಿಎಲ್ನಿಂದ ವಜಾಗೊಂಡಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿರುವ ಸ್ಟೀವನ್ ಸ್ಮಿತ್ ಈಗ ಆ ತಂಡದ ನಾಯಕತ್ವವನ್ನು ಮುಂದುವರೆಸುತ್ತಾರೆಯೇ ಎಂಬ ಅನುಮಾನವೂ ಮೂಡಿದೆ.