ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಮಾರ್ಚ್ 26 ಮತ್ತು 27 ರಂದು ರಾಜ್ಯಕ್ಕೆ ಆಗಮಿಸಲಿದ್ದು ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಮಾರ್ಚ್ 26 ಮತ್ತು 27 ರಂದು ರಾಜ್ಯಕ್ಕೆ ಆಗಮಿಸಲಿದ್ದು ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಮಾ.26ರ ಸೋಮವಾರ ಬೆಳಗ್ಗೆ 9.30ಕ್ಕೆ ತುಮಕೂರು ವಿವಿ ಹೆಲಿಪ್ಯಾಡ್ನಲ್ಲಿ ಬಂದಿಳಿಯಲಿರುವ ಅಮಿತ್ ಶಾ, ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಭೇಟಿಯ ಮೂಲಕ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ವಾಮೀಜಿಯೊಂದಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಕುರಿತ ವಿಚಾರವನ್ನೂ ಷಾ ಚರ್ಚಿಸಲಿದ್ದಾರೆ ಎನ್ನಲಾಗಿದೆ. ನಂತರ ಅಲ್ಲಿಂದ ತಿಪಟೂರಿಗೆ ತೆರಳಿ ತೆಂಗು ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಲ್ಲಿಂದ ಮಧ್ಯಾಹ್ನ 1.20ಕ್ಕೆ ಶಿವಮೊಗ್ಗದ ಕುಪ್ಪಳ್ಳಿಯ ಕವಿಶೈಲದಲ್ಲಿ ಕುವೆಂಪು ಸ್ಮಾರಕ ವೀಕ್ಷಿಸಲಿದ್ದಾರೆ. ನಂತರ ತೀರ್ಥಹಳ್ಳಿಯಲ್ಲಿ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಬಾಳೆಬೈಲಿನ ದಿವಂಗತ ನಂದಿತಾ ಕುಟುಂಬದವರನ್ನು ಭೇಟಿ ಮಾಡಲಿದ್ದಾರೆ. ಸಂಜೆ ಶಿವಮೊಗ್ಗದಲ್ಲಿ ರೋಡ್ ಶೋ, ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಉದ್ಯಮಿಗಳ ಜತೆ ಸಂವಾದ ನಡೆಸಿ, 7.30ಕ್ಕೆ ಬೆಕ್ಕಿನ ಕಲ್ಮಠದಲ್ಲಿ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಹಾಗೂ ಇತರ ಸ್ವಾಮೀಜಿ ಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಅಂದು ರಾತ್ರಿ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಿವಾಸದಲ್ಲಿ ಭೋಜನ ಸವಿದು, ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮಾ.27ರಂದು ಚಿತ್ರದುರ್ಗದ ಸಿರಿಗೆರೆ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಭೇಟಿ ಮಾಡಲಿದ್ದಾರೆ. ನಂತರ ಮಾದಾರ ಚೆನ್ನಯ್ಯ ಮಠಕ್ಕೆ ಭೇಟಿ ನೀಡಿ, 10 ಹಿಂದುಳಿದ ವರ್ಗಗಳ ಸ್ವಾಮೀಜಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.