ಡೈಮಂಡ್ ಕಿಂಗ್ ನೀರವ್ ಮೋದಿಗೆ ಸೇರಿದ ಮುಂಬೈನ ಅಪಾರ್ಟ್‍ಮೆಂಟ್ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ(ಇಡಿ):

ಮುಂಬೈ/ನವದೆಹಲಿ, ಮಾ.24-ದೇಶದ ಬ್ಯಾಂಕಿಂಗ್ ವಲಯವನ್ನೇ ತಲ್ಲಣಗೊಳಿಸಿದ 12,723 ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣದ ಪ್ರಮುಖ ಸೂತ್ರಧಾರ ಡೈಮಂಡ್ ಕಿಂಗ್ ನೀರವ್ ಮೋದಿಗೆ ಸೇರಿದ ಮುಂಬೈನ ಅಪಾರ್ಟ್‍ಮೆಂಟ್ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ(ಇಡಿ) ಮತ್ತು ಸಿಬಿಐ ಅಧಿಕಾರಿಗಳು ಮತ್ತೆ 26 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮುಂಬೈನ ಡಯಾವಂಟೈರ್ ಅಪಾರ್ಟ್‍ಮೆಂಟ್‍ನಿಂದ 26 ಕೋಟಿ ರೂ. ಮೌಲ್ಯದ ಕಲಾತ್ಮಕ ಆಭರಣ, ದುಬಾರಿ ವಾಚುಗಳು, ಅಮೃತ್ ಶೇರ್-ಗಿಲ್, ಕೆ.ಕೆ.ಹೆಬ್ಬಾರ್ ಮತ್ತು ಎಂ.ಎಫ್.ಹುಸೇನ್ ಅವರ ಬೆಲೆಬಾಳುವ ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮುಂಬೈನ ವೊರ್ಲಿ ಪ್ರದೇಶದಲ್ಲಿನ ಮೋದಿಯ ಸಮುದ್ರ ಮಹಲ್ ಲಕ್ಷುರಿ ವಸತಿಸ್ತೋಮದ ಮೇಲೆ ಮಾರ್ಚ್ 22ರಂದು ಇಡಿ ಮತ್ತು ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಭಾರೀ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
15 ಕೋಟಿ ರೂ. ಮೌಲ್ಯ ಕಲಾತ್ಮಕ ಆಭರಣಗಳು, 1.4 ಕೋಟಿ ರೂ. ಬೆಲಬಾಳುವ ದುಬಾರಿ ಕೈಗಡಿಯಾರಗಳು, ಹಾಗೂ 10 ಕೋಟಿ ರೂ. ಮೌಲ್ಯದ ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ವಸ್ತುಗಳಲ್ಲಿ ವಜ್ರದ ಉಂಗುರವೊಂದರ ಬೆಲೆಯೇ 10 ಕೋಟಿ ರೂ.ಗಳು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ