ಮೈಸೂರು, ಮಾ.24- ಸಾಂಸ್ಕøತಿಕ ನಗರಿ ಮೈಸೂರಿನಲ್ಲಿಂದು ರಾಹುಲ್ ಮೇನಿಯಾ… ಹೈದರಾಬಾದ್-ಕರ್ನಾಟಕ, ಮುಂಬೈ-ಕರ್ನಾಟಕ, ಕರಾವಳಿ ಪ್ರದೇಶದಲ್ಲಿ ಯಶಸ್ವಿ ಜನಾಶೀರ್ವಾದ ಯಾತ್ರೆ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರು ಇಂದಿನಿಂದ ಎರಡು ದಿನಗಳ ಕಾಲ ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ಕೈಗೊಂಡಿರುವ ನಾಲ್ಕನೆ ಹಂತದ ಜನಾಶೀರ್ವಾದ ಯಾತ್ರೆಗೆ ಅದ್ಧೂರಿ ಚಾಲನೆ ದೊರೆತಿದೆ.
ನವದೆಹಲಿಯಿಂದ ನೇರವಾಗಿ ಚಾಮುಂಡೇಶ್ವರಿ ಬೆಟ್ಟಕ್ಕೆ ಆಗಮಿಸಿದ ಅವರು, ನಾಡತಾಯಿ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ನಂತರ ರಾಹುಲ್ಗಾಂಧಿ ಅವರು ಮಹಾರಾಣಿ ವಾಣಿಜ್ಯ ಕಲಾ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.
ದೇಶದ ಆರ್ಥಿಕತೆ, ಜಿಎಸ್ಟಿ, ನೋಟ್ಬ್ಯಾನ್, ಬ್ಯಾಂಕ್ ಅವ್ಯವಸ್ಥೆ, ಕುರಿತಂತೆ ವಿದ್ಯಾರ್ಥಿಗಳು ರಾಹುಲ್ ಅವರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿದರು.
ಈ ಸಂದರ್ಭ ಬಳಸಿಕೊಂಡ ರಾಹುಲ್ಗಾಂಧಿ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಲಲಿತ್ ಮೋದಿ, ನೀರವ್ ಮೋದಿ, ವಿಜಯ್ ಮಲ್ಯ ಅವರಂತಹವರು ಸಾವಿರಾರು ಕೋಟಿ ವಂಚಿಸಿ ದೇಶ ತೊರೆದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ನೋಟು ಅಮಾನೀಕರಣದಿಂದ ಆದಂತಹ ನಷ್ಟ, ಬಡಜನ ಅನುಭವಿಸಿದ ನೋವು ಮುಂತಾದವುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಲಲಿತ್ ಮೋದಿ, ನೀರವ್ ಮೋದಿ, ವಿಜಯ್ ಮಲ್ಯರಂತಹವರು ದೇಶದ ಆಸ್ತಿಯನ್ನು ಲೂಟಿ ಹೊಡೆದು ವಿದೇಶಕ್ಕೆ ಹಾರಿದ್ದಾರೆ. ಇಂತಹ ಸಾಕಷ್ಟು ಮಂದಿ ದೇಶದಲ್ಲಿದ್ದಾರೆ ಎಂದು ಹೇಳಿದರು.
ಶ್ವೇತಾ ಎಂಬ ವಿದ್ಯಾರ್ಥಿನಿ ನೋಟ್ಬ್ಯಾನ್ನಿಂದ ದೇಶದಲ್ಲಿನ ಕಪ್ಪು ಹಣದ ಸಮಸ್ಯೆ ನಿವಾರಣೆಯಾಗಿದೆಯೇ? ಕಪ್ಪುಹಣ ಹಿಂದಿರುಗಿದೆಯೇ ಎಂದು ಪ್ರಶ್ನೆ ಕೇಳಿದಾಗ ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ರಾಹುಲ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನೋಟು ಅಮಾನೀಕರಣದಿಂದ ದೇಶದ ಆರ್ಥಿಕತೆಯಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಶೇ.90ರಷ್ಟು ಹಣ ರಿಯಲ್ ಎಸ್ಟೇಟ್ ಮತ್ತು ಚಿನ್ನದ ರೂಪದಲ್ಲಿದೆ. ಶೇ.5ರಷ್ಟು ಮಾತ್ರ ನಗದು ರೂಪದಲ್ಲಿದೆ. ನೋಟು ಅಮಾನೀಕರಣದಿಂದ ಅಲ್ಪ ಪ್ರಮಾಣದ ಕಪ್ಪು ಹಣ ಮಾತ್ರ ಬಿಳಿಯಾಗಲು ಸಾಧ್ಯವಾಯಿತು ಎಂದು ಹೇಳಿದರು.
ಬೆಳವಣಿಗೆಯ ಹಂತದಲ್ಲಿರುವ ದೇಶದಲ್ಲಿ ಉದ್ಯೋಗ ಸೃಷ್ಟಿಯ ಅಗತ್ಯವಿದೆ. ಆದರೆ, ಉದ್ಯೋಗ ಸೃಷ್ಟಿಯಲ್ಲಿ ಯಾವುದೇ ರೀತಿಯ ಉತ್ತಮ ಪರಿಣಾಮ ಉಂಟಾಗಿಲ್ಲ. ನೋಟ್ಬ್ಯಾನ್ ಆದಾಗ ನಾನು ಸ್ವತಃ ವಿತ್ತ ಸಚಿವರನ್ನು ಬ್ಯಾನ್ ಮಾಡಿದ ಬಗ್ಗೆ ಕೇಳಿದಾಗ, ಅವರು ಕೇವಲ ನಕ್ಕರೆ ಹೊರತು ನನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ ಎಂದರು.
ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುವಂತಹ ಪ್ರಯೋಗಗಳನ್ನು ಮಾಡುವ ಸಂದರ್ಭದಲ್ಲಿ ಯೋಚಿಸಿ ನಿರ್ಧಾರ ಮಾಡಬೇಕಿತ್ತು. ಆದರೆ, ಆ ದಿಸೆಯಲ್ಲಿ ಆಲೋಚಿಸದ ಕೇಂದ್ರ ಸರ್ಕಾರದಿಂದ ಜನರಿಗೆ ತೊಂದರೆ ಎದುರಾಗಿದೆ ಎಂದು ಅಭಿಪ್ರಾಯಪಟ್ಟರು.
ಎಂಬಿಎ ವಿದ್ಯಾರ್ಥಿನಿ ಅನುಷ್ಕಾ, ಸಂಸ್ಕøತಿ ಕುರಿತಂತೆ ಕೇಳಿದ ಪ್ರಶ್ನೆಗೆ ಸಂಸ್ಕøತಿ ಸರಿ ಅಥವಾ ತಪ್ಪು ಎಂದು ಹೇಳುವುದಿಲ್ಲ. ಆದರೆ, ಅಲ್ಲಿನ ಸ್ಥಳೀಯ ವ್ಯವಸ್ಥೆ ಹಾಗೂ ಸಂಪ್ರದಾಯಗಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದ ರೀತಿಯಲ್ಲಿ ನಾವು ನಡೆಯಬೇಕು ಎಂದು ಉತ್ತರಿಸಿದರು.
ಎಂಎ ವಿದ್ಯಾರ್ಥಿನಿ ಮಹದೇವಮ್ಮ ಕನ್ನಡದಲ್ಲೇ ರಾಹುಲ್ಗೆ ಪ್ರಶ್ನೆ ಕೇಳಿದಾಗ, ವಿಚಲಿತರಾದ ರಾಹುಲ್ ಕೂಡಲೇ ಸಾವರಿಸಿಕೊಂಡು ಆಯ್ತು ಕನ್ನಡದಲ್ಲೇ ಕೇಳಿ ಎಂದು ಹೇಳುತ್ತ ಪರಮೇಶ್ವರ್ ಅವರನ್ನು ಕರೆದು ತರ್ಜುಮೆ ಮಾಡುವಂತೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಸವಲತ್ತು ನೀಡುವಾಗ ಜಾತಿ ಆಧಾರದ ತಾರತಮ್ಯ ಏಕೆ ಮಾಡುತ್ತೀರ ಎಂದು ಪ್ರಶ್ನಿಸಿದರು.
ಆಗ ರಾಹುಲ್ಗಾಂಧಿ ರಾಷ್ಟ್ರಕ್ಕೆ ಸಂಬಂಧಿಸಿದ್ದ, ರಾಜ್ಯಕ್ಕೆ ಸಂಬಂಧಿಸಿದ್ದ ಎಂದು ಪ್ರಶ್ನಿಸಿದರು. ಇದು ಕರ್ನಾಟಕಕ್ಕೆ ಸಂಬಂಧಿಸಿದ್ದು ಎಂದು ವಿದ್ಯಾರ್ಥಿನಿ ಹೇಳಿದಳು.
ಇದಕ್ಕೆ ಸಿಎಂ ಇಲ್ಲೇ ಇದ್ದಾರೆ. ಅವರೇ ಉತ್ತರ ಕೊಡುತ್ತಾರೆ ಎಂದು ಸಿದ್ದರಾಮಯ್ಯ ಅವರನ್ನು ರಾಹುಲ್ ಕರೆದರು.
ಆಗ ಸಿದ್ದರಾಮಯ್ಯ ತಮ್ಮ ಎಂದಿನ ಧಾಟಿಯಲ್ಲಿ ಏನಮ್ಮಾ ನಿನ್ನ ಪ್ರಶ್ನೆ ಎಂದು ಕೇಳಿದರು. ಮತ್ತೆ ವಿದ್ಯಾರ್ಥಿನಿ ಪ್ರಶ್ನೆಯನ್ನು ಪುನರುಚ್ಚರಿಸಿದಳು.
ತಾರತಮ್ಯ ಅನ್ನೋದು ಹಿಂದಿನಿಂದ ಬಂದ ವ್ಯವಸ್ಥೆ. ಲಿಂಗ ತಾರತಮ್ಯ ಬಡವ-ಶ್ರೀಮಂತ, ಪುರುಷ-ಸ್ತ್ರೀ ಎಂಬ ತಾರತಮ್ಯ ಬಂದಿದೆ. ಇದನ್ನು ನಾನಾಗಲಿ, ನೀವಾಗಲಿ ಮಾಡಿದ್ದಲ್ಲ. ಐತಿಹಾಸಿಕ ಘಟನೆ ಇದಾಗಿದೆ. ಇದನ್ನು ಹೋಗಲಾಡಿಸಲು ಏನು ಮಾಡಬೇಕು ಹೇಳಿ ಎನ್ನುತ್ತಾ ಉದಾಹರಣೆ ಕೊಟ್ಟರು.
ಒಂದು ಮನೆಯಲ್ಲಿ ಇಬ್ಬರು ಮಕ್ಕಳಿರುತ್ತಾರೆ. ಒಂದು ಮಗು ಚೆನ್ನಾಗಿದ್ದರೆ, ಮತ್ತೊಂದು ವೀಕ್ ಆಗಿರುತ್ತದೆ. ವೀಕ್ ಆದ ಮಗುವಿಗೆ ಚೆನ್ನಾಗಿ ಆರೈಕೆ ಮಾಡಿದರೆ ಅದೂ ಕೂಡ ಚೆನ್ನಾಗಿ ಆಗುತ್ತದೆ. ಅದೇ ರೀತಿ ನಮ್ಮ ಸಮಾಜದಲ್ಲಿ ದುರ್ಬಲರು, ವಂಚಿತರು ಸಮಾನತೆ ಇಲ್ಲದವರೂ ಇದ್ದಾರೆ. ಇವರನ್ನೆಲ್ಲ ಮುಖ್ಯವಾಹಿನಿಗೆ ತರಲು ಅವರಿಗೆ ವಿಶೇಷ ಆದ್ಯತೆ ಕೊಡಬೇಕಾಗುತ್ತದೆ ಎಂದು ಉತ್ತರಿಸಿದರು.
ಆಗ ವಿದ್ಯಾರ್ಥಿನಿ ಲ್ಯಾಪ್ಟಾಪ್ಅನ್ನು ಎಲ್ಲರಿಗೂ ಏಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದಳು. ಇದಕ್ಕೆ ನಾವು ಪಿಯುಸಿ ಪಾಸಾಗಿ ಡಿಗ್ರಿಗೆ ಬರುವ ಎಲ್ಲ ವಿದ್ಯಾರ್ಥಿಗಳಿಗೂ ಒಂದೆರಡು ತಿಂಗಳಿನಲ್ಲಿ ಲ್ಯಾಪ್ಟಾಪ್ ಕೊಡುವುದಾಗಿ ಸಿದ್ದು ಹೇಳಿದರು. ಆಗ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದರು.
ಈ ಸಂದರ್ಭದಲ್ಲಿ ರಾಹುಲ್, ನಾನು ಓದುವಾಗ ಲ್ಯಾಪ್ಟಾಪ್ ಇರಲೇ ಇಲ್ಲ. ನಾವು ಓದಿದ್ದೀವಲ್ಲ ಎಂದರು. ಆಗ ವಿದ್ಯಾರ್ಥಿನಿಯರು ನಕ್ಕರು.
ಅಫ್ರೀನ್ 3ನೆ ವರ್ಷದ ಬಿಎ ವಿದ್ಯಾರ್ಥಿನಿ ಪ್ರಶ್ನೆ ಮಾಡಿ ಸಿಂಗಾಪುರದಲ್ಲಿ ಜಿಎಸ್ಟಿ ಅಡಿ ಒಂದೇ ತೆರಿಗೆ ಪದ್ಧತಿ ಇದೆ. ನಮ್ಮ ಭಾರತದಲ್ಲಿ ಜಿಎಸ್ಟಿನಲ್ಲಿ ಮೂರ್ನಾಲ್ಕು ರೀತಿಯ ಸ್ಲ್ಯಾಬ್ಗಳು ಏಕಿವೆ ಎಂದು ಪ್ರಶ್ನಿಸಿದರು.
ಇದೇ ಪ್ರಶ್ನೆಯನ್ನು ರಾಹುಲ್ ಕೇಂದ್ರದ ವಿರುದ್ಧ ಬಳಸಿಕೊಂಡು ಈ ರೀತಿಯ ಸ್ಲ್ಯಾಬ್ಗಳು ಸರಿಯಲ್ಲ. ಇದನ್ನು ಮೋದಿ ಸರ್ಕಾರಕ್ಕೆ ಕೇಳಿ ಎಂದು ಹೇಳಿದರು.
ಆಗ ವಿದ್ಯಾರ್ಥಿ ನೀವು ಮುಂದಿನ ಪ್ರಧಾನಿ ಆಗ್ತೀರಾ ಎಂದು ಹೇಳುತ್ತಿರೋದ್ರಿಂದ ನಿಮಗೇ ಈ ಪ್ರಶ್ನೆ ಕೇಳುತ್ತಿದ್ದೇನೆ ಎಂದಳು.
ಜಿಎಸ್ಟಿಯನ್ನು ಕಾಂಗ್ರೆಸ್ ಪ್ರಪೆÇೀಸ್ ಮಾಡಿದ್ದು, ನಾನು ಪ್ರಧಾನಿಯಾದರೆ ದೇಶಾದ್ಯಂತ ಜಿಎಸ್ಟಿಯನ್ನು ಒಂದೇ ಸ್ಲ್ಯಾಬ್ನ ತೆರಿಗೆ ಪದ್ಧತಿ ಜಾರಿಗೆ ತರುವುದಾಗಿ ತಿಳಿಸಿದರು.
ಸ್ಲ್ಯಾಬ್ಗಳು ಜಾಸ್ತಿ ಇದ್ದಷ್ಟೂ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ. ಹಾಗಾಗಿ ಒಂದೇ ಸ್ಲ್ಯಾಬ್ನಲ್ಲಿ ತೆರಿಗೆ ಪಡೆಯುವ ಪದ್ಧತಿ ಜಾರಿಗೆ ಬರಬೇಕು ಎಂದರು.
ನಮ್ಮ ದೇಶದಲ್ಲಿ ಐದು ಸ್ಲ್ಯಾಬ್ಗಳಲ್ಲಿ ತೆರಿಗೆ ಸಂಗ್ರಹಿಸಲಾಗುತ್ತಿದೆ. (5%, 10%, 8% ಹೀಗೆ 28% ವರೆಗೂ ಇದೆ) ಇದು ಸರಿಯಲ್ಲ ಎಂದು ರಾಹುಲ್ ತಿಳಿಸಿದರು.
ವಿದ್ಯಾರ್ಥಿನಿಯರು ರಾಹುಲ್ ಜತೆ ಸೆಲ್ಫಿ ತೆಗೆಸಿಕೊಂಡರು. ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಕೆ.ಸಿ.ವೇಣುಗೋಪಾಲ್ ಮತ್ತಿತರರು ಹಾಜರಿದ್ದರು.