ತುಮಕೂರು, ಮಾ.24-ತುಮಕೂರು ಮಹಾನಗರ ಪಾಲಿಕೆಗೆ ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ 9ನೇ ವಾರ್ಡ್ನ ಕಾಂಗ್ರೆಸ್ ಪಕ್ಷದ ಸುದೀಶ್ವರ್ ಅವರು ಮೇಯರ್ ಆಗಿ ಆಯ್ಕೆಯಾದರೆ, ಉಪಮೇಯರ್ ಆಗಿ 28ನೇ ವಾರ್ಡ್ನ ಜೆಡಿಎಸ್ ಪಕ್ಷದ ಜಯಲಕ್ಷ್ಮಿ ವೆಂಕಟೇಶ್ ಆಯ್ಕೆಯಾಗಿದ್ದಾರೆ.
ಇಂದು ಬೆಳಗ್ಗೆ 10.30ಕ್ಕೆ ಚುನಾವಣಾಧಿಕಾರಿಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಮೇಯರ್ ಸ್ಥಾನಕ್ಕೆ ಸುದೀಶ್ವರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್ನಿಂದ ಜಯಲಕ್ಷ್ಮಿ ವೆಂಕಟೇಶ್ ಅವರು ನಾಮಪತ್ರ ಸಲ್ಲಿಸಿದ್ದರು.
ಬೇರ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಇವರಿಬ್ಬರು ಅವಿರೋಧವಾಗಿ ಆಯ್ಕೆಯಾದರು.
ಜೆಡಿಎಸ್ ಪಕ್ಷದ ಹನುಮಂತರಾಯಪ್ಪ ಮೇಯರ್ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಇಂದು ಬೆಳಗ್ಗೆ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮನೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಹನುಮಂತರಾಯಪ್ಪ ಅವರಿಗೆ ನಾಮಪತ್ರ ಸಲ್ಲಿಸದಂತೆ ಮನವೊಲಿಸಲಾಯಿತು.
ಶಾಸಕ ಶ್ರೀನಿವಾಸ್ ಅವರು ನಮಗೆ ಹೈಕಮಾಂಡ್ ಇದ್ದಂತೆ. ಅವರ ನಿರ್ಧಾರದಿಂದ ತಮಗೆ ಬೇಸರವಾಗಿದೆ ಎಂದು ಹನುಮಂತರಾಯಪ್ಪ ಅಸಮಾಧಾನ ಹೊರಹಾಕಿದರು.
ಈ ಬಾರಿ ಬಿಜೆಪಿ ತಟಸ್ಥವಾಗಿತ್ತು. ಈ ಸಂದರ್ಭದಲ್ಲಿ ಮೇಯರ್ ಆಗಿ ಆಯ್ಕೆಯಾದ ಸುದೀಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಶಾಸಕ ರಫೀಕ್ ಅಹಮದ್, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಚೆನ್ನಿಗಪ್ಪ, ಶಾಸಕ ಎಸ್.ಆರ್.ಶ್ರೀನಿವಾಸ್, ಮಾಜಿ ಮೇಯರ್ ರವಿಕುಮಾರ್ ಅವರ ಸಹಕಾರದೊಂದಿಗೆ ನಾನು ಮೇಯರ್ ಆಗಲು ಅವಕಾಶ ದೊರಕಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಾನು ಅಧಿಕಾರ ಸ್ವೀಕರಿಸಿರುವ ಈ ಸಂದರ್ಭದಲ್ಲಿ ಅನೇಕ ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸಬೇಕಿದೆ. ಏಕೆಂದರೆ ಬೇಸಿಗೆ ಆರಂಭವಾಗಿರುವುದರಿಂದ ಕುಡಿಯುವ ನೀರು, ಕಸ ವಿಲೇವಾರಿ, ರಸ್ತೆ ಗುಂಡಿ ಮುಚ್ಚುವುದು, ಪಾಲಿಕೆಯ 35 ವಾರ್ಡ್ಗಳಲ್ಲೂ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮುಖ್ಯವಾಗಿ ತೆರಿಗೆ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಹೇಳಿದರು.
ಉಪಮೇಯರ್ ಆಗಿ ಆಯ್ಕೆಯಾದ ಜಯಲಕ್ಷ್ಮಿ ವೆಂಕಟೇಶ್ಅವರು ಈ ವೇಳೆ ಎಲ್ಲ ಕಾಪೆರ್Çೀರೇಟರ್ಗಳಿಗೂ ಅಭಿನಂದನೆ ಸಲ್ಲಿಸಿ , ತುಮಕೂರು ನಗರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ ಎಂದು ಅಭಿಪ್ರಾಯ ಹಂಚಿಕೊಂಡರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹಾವು-ಮುಂಗುಸಿಯಂತಾಗಿದ್ದರೆ ತುಮಕೂರಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಆಪ್ತಮಿತ್ರರಾಗಿದ್ದು ಈ ಬೆಳವಣಿಗೆ ಭಾರೀ ಕುತೂಹಲ ಕೆರಳಿಸಿದೆ.