ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಬಗ್ಗೆ ಎಚ್.ಡಿ.ರೇವಣ್ಣ ನಿಂದನಾತ್ಮಕ ಹೇಳಿಕೆ: ದಲಿತ ಸಂಘರ್ಷ ಸಮಿತಿ ಖಂಡಿನೆ

ಬೆಂಗಳೂರು,ಮಾ.24-ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿರುವ ಎಚ್.ಡಿ.ರೇವಣ್ಣ ಅವರ ಕ್ರಮವನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯ ಸಂಘಟನಾ ಸಂಚಾಲಕ ಎಚ್.ಸಿ.ಸಿದ್ದಲಿಂಗಯ್ಯಹೇಳಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಊಳಿಗಮಾನ್ಯ ಪದ್ಧತಿಯಲ್ಲಿ ಪಳಗಿರುವ ರೇವಣ್ಣ ಅವರು ಅದೇ ದಾಟಿಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಅವರ ವಿರುದ್ಧ ನಿಂದನಾತ್ಮಕ ಟೀಕೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ರೇವಣ್ಣ ಅವರು ರತ್ನಪ್ರಭಾ ಅವರನ್ನು ಕಾಂಗ್ರೆಸ್ ಸರ್ಕಾರದ ರಬ್ಬರ್ ಸ್ಟಾಂಪ್ ಎಂದು ಹೀಗಳೆದಿದ್ದಾರೆ. ಅಲ್ಲದೆ ಮುಖ್ಯ ಕಾರ್ಯದರ್ಶಿ ಸ್ಥಾನದಲ್ಲಿ ಮುಂದುವರೆದರೆ ರಾಜ್ಯದಲ್ಲಿ ನ್ಯಾಯ ಸಮ್ಮತ ಚುನಾವಣೆ ನಡೆಯುವುದಿಲ್ಲ ಎಂದು ಆರೋಪಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದು ಅವರ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದರು.

ಚುನಾವಣೆಯಲ್ಲಿ ಗೆಲ್ಲಲು ಹೊಳೆನರಸೀಪುರ ಕ್ಷೇತ್ರ ಹಾಗೂ ರಾಜ್ಯದ ಇತರ ಭಾಗಗಳಲ್ಲಿ ಜೆಡಿಎಸ್ ಯಾವ ರೀತಿಯ ವಾಮ ಮಾರ್ಗಗಳನ್ನು ಅನುಸರಿಸುತ್ತಿದೆ ಎಂಬುದನ್ನು ಆಯಾ ಕ್ಷೇತ್ರದ ಜನತೆಗೆ ತಿಳಿದ ವಿಷಯವಾಗಿದೆ ಎಂದು ಹೇಳಿದರು.

ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಮೀಸಲು ಘೋಷಿಸಿದಾಗ, ಬೀಗರನಹಳ್ಳಿಯ ದಲಿತರು ಅಲ್ಲಿನ ದೇಗುಲದ ಮುಕ್ತ ಪ್ರವೇಶಕ್ಕೆ ಹೋರಾಟ ನಡೆಸಿದಾಗ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ರೇವಣ್ಣ ಅವರುಗಳು ಏನೆಲ್ಲ ರಾಜಕೀಯ ಕಸರತ್ತುಗಳನ್ನು ನಡೆಸಿದ್ದರು ಎಂಬುದನ್ನು ಸಾರ್ವಜನಿಕರು ಮರೆತಿಲ್ಲ ಎಂಬುದನ್ನು ತಿಳಿಯಬೇಕಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ