ವಿವಾದ ಸೃಷ್ಟಿಸಿರುವ ಫೇಸ್‍ಬುಕ್: ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ನೋಟಿಸ್

ನವದೆಹಲಿ, ಮಾ.24-ತೀವ್ರ ವಿವಾದ ಸೃಷ್ಟಿಸಿರುವ ಫೇಸ್‍ಬುಕ್ ಬಳಕೆದಾರರ ದತ್ತಾಂಶ ಸೋರಿಕೆ ಮತ್ತು ದುರ್ಬಳಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಬ್ರಿಟಿಷ್ ಮೂಲದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದೆ.
ಕಕ್ಷಿದಾರರ ಪಟ್ಟಿ ಹಾಗೂ ದತ್ತಾಂಶ ಸಂಗ್ರಹ ಮೂಲದ ಮಾಹಿತಿಯನ್ನು ತನಗೆ ನೀಡುವಂತೆ ಕೇಂದ್ರವು ಸ್ಪಷ್ಟ ಸೂಚನೆ ನೀಡಿದೆ.
ಚುನಾವಣೆಗಳ ವೇಳೆ ದತ್ತಾಂಶ ವಿಶ್ಲೇಷಣೆ ಸಂಸ್ಥೆಯನ್ನು ರಾಜಕೀಯ ಪಕ್ಷಗಳು ಬಳಸಿಕೊಂಡಿವೆ ಎಂಬ ವ್ಯಾಪಕ ವರದಿಗಳ ಹಿನ್ನೆಲೆಯಲ್ಲಿ ಈ ನೋಟಿಸ್ ಜಾರಿಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ನೋಟಿಸ್ ನೀಡಿ, ತಾನು ಕೇಳಿರುವ ಐದು ಪ್ರಶ್ನೆಗಳಿಗೆ ಮಾರ್ಚ್ 31ರೊಳಗೆ ಉತ್ತರ ನೀಡುವಂತೆ ಸೂಚಿಸಿದೆ. ಕಂಪನಿಯು ಹೇಗೆ ಬಳಕೆದಾರರ ದತ್ತಾಂಶ ಮಾಹಿತಿ ಸಂಗ್ರಹಿಸಿದೆ. ಈ ಮಾಹಿತಿ ಸಂಗ್ರಹಿಸಲು ವ್ಯಕ್ತಿಗಳಿಂದ ಸಮ್ಮತಿ ಪಡೆಯಲಾಗಿತ್ತೆ, ಡೇಟಾವನ್ನು ಹೇಗೆ ಬಳಸಲಾಗಿದೆ ಎಂಬ ಪ್ರಶ್ನೆಗಳೂ ಇದರಲ್ಲಿವೆ.
ಕಾಂಗ್ರೆಸ್ ಮತ್ತು ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ನಡುವೆ ಸಂಪರ್ಕ ಇದೆ ಎಂದು ಬಿಜೆಪಿ ಗಂಭೀರ ಆರೋಪಗಳನ್ನು ಮಾಡಿರುವ ಸಂದರ್ಭದಲ್ಲೇ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ