ಏಳು ಮಂದಿ ಬಂಡಾಯ ಶಾಸಕರ ರಾಜಕೀಯ ಜೀವನವನ್ನು ಮುಗಿಸಲು ಜೆಡಿಎಸ್ ನಾಯಕರಿಂದ ಷಡ್ಯಂತ್ರ: ಚಲುವರಾಯ ಸ್ವಾಮಿ ಆರೋಪ

ಬೆಂಗಳೂರು, ಮಾ.24-ಏಳು ಮಂದಿ ಬಂಡಾಯ ಶಾಸಕರ ರಾಜಕೀಯ ಜೀವನವನ್ನು ಮುಗಿಸಲು ಜೆಡಿಎಸ್ ನಾಯಕರು ಷಡ್ಯಂತ್ರ ರೂಪಿಸಿದ್ದು, ನಮಗೆ ಜನರ ಆಶೀರ್ವಾದ ಬೇಕು ಎಂದು ಚಲುವರಾಯ ಸ್ವಾಮಿ ತಿಳಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಂಡಾಯವೆದ್ದಿದ್ದ ಏಳು ಮಂದಿ ಬಂಡಾಯ ಶಾಸಕರನ್ನು ಅನರ್ಹಗೊಳಿಸಬೇಕೆಂದು ಜೆಡಿಎಸ್ ವರಿಷ್ಠರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಮ್ಮ ಕ್ಷೇತ್ರಗಳಲ್ಲೂ ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ ಎಂದರು.
ಈ ಹಿಂದೆ ಕುಮಾರಸ್ವಾಮಿ ಯವರನ್ನು ಮುಖ್ಯಮಂತ್ರಿ ಮಾಡುವಾಗ ನಾವೆಲ್ಲ ಜೊತೆಯಲ್ಲಿದ್ದೆವು. ನಮ್ಮ ವಿರುದ್ಧವೂ ಆಗ ಪಕ್ಷದ್ರೋಹದ ಆರೋಪ ಕೇಳಿ ಬಂದಿತ್ತು. ಇದೇ ದೇವೇಗೌಡರು ಆ ಸಂದರ್ಭದಲ್ಲಿ ನಮ್ಮನ್ನು ಅನರ್ಹಗೊಳಿಸಲು ಈಗಿನಂತೆ ಏಕೆ ಒತ್ತಡ ಹೇರಲಿಲ್ಲ ಎಂದು ಪ್ರಶ್ನಿಸಿದರು.

ಜೆಡಿಎಸ್‍ನವರೇ ಆದ ಕೃಷ್ಣ ಅವರು ಸ್ಪೀಕರ್ ಆಗಿದ್ದರು. ಅವರು ಯಾವುದೇ ನಿರ್ಣಯ ತೆಗೆದುಕೊಳ್ಳಲಿಲ್ಲ. ಆದರೆ ಈಗ ನಮ್ಮ ವಿರುದ್ಧ ನ್ಯಾಯಾಲಯಗಳಲ್ಲಿ ಒಂದರ ಮೇಲೆ ಒಂದರಂತೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅನರ್ಹಗೊಳಿಸಬೇಕೆಂದು ಒತ್ತಡ ಹೇರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಚ್.ಡಿ.ಕುಮಾರಸ್ವಾಮಿಯವರು ನಾನು ಜೆಡಿಎಸ್ ಪಕ್ಷದಲ್ಲಿ ನಿಂತು ಕೆಮ್ಮಿದರೆ ಕಾಂಗ್ರೆಸ್ ಕೊಚ್ಚಿಹೋಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ಇದರ ಅರ್ಥವೇನು? ಈ ವರೆಗೂ ಅವರು ಬಿಜೆಪಿ ಜೊತೆ ಕೈ ಜೋಡಿಸಿದ್ದನ್ನು ಮರೆತಿದ್ದಾರಾ ಅಥವಾ ಮುಂದೆ ಕೈ ಜೋಡಿಸುತ್ತೇನೆ ಎಂದು ಸೂಚನೆ ನೀಡುತ್ತಿದ್ದಾರಾ ಅರ್ಥವಾಗುತ್ತಿಲ್ಲ. 1994 ರಿಂದಲೂ ಜೆಡಿಎಸ್‍ನಲ್ಲಿದ್ದು, ನಾವು ಸಾಕಷ್ಟು ನೋವು ಅನುಭವಿಸಿದ್ದೇವೆ. ನಾವು ಅಲ್ಲಿಂದ ಹೊರ ಬಂದ ಬಳಿಕ ನಮ್ಮನ್ನು ದರಿದ್ರದವರು ಎಂದು ಕುಮಾರಸ್ವಾಮಿ ಟೀಕಿಸಿದ್ದರು. ಇನ್ನು ಮುಂದೆ ಆ ಪಕ್ಷದ ಭವಿಷ್ಯ ಉಜ್ವಲವಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

ಒಂದು ವರ್ಷದಲ್ಲಿ ಎಷ್ಟರ ಮಟ್ಟಿಗೆ ಉಜ್ವಲವಾಗಿದೆ ಎಂದು ಜನತೆ ನೋಡುತ್ತಿದ್ದಾರೆ. ಕಾಂಗ್ರೆಸ್‍ನ ಎ.ಎಸ್.ಪಾಟೀಲ್ ನಡಹಳ್ಳಿ ಜೆಡಿಎಸ್ ಸೇರಿ ಮೂರು ತಿಂಗಳ ಕಾಲವೂ ಉಳಿಯಲಿಲ್ಲ. ಇನ್ನು ಮಾನಪ್ಪ ವಜ್ಜಲ್, ರಾಜಶೇಖರ ಪಾಟೀಲ್, ಶಿವರಾಜ್ ಪಾಟೀಲ್ ಮತ್ತು ಕೂಬಾ ಅವರುಗಳು ಈಗಾಗಲೇ ಜೆಡಿಎಸ್ ತೊರೆದಿದ್ದಾರೆ. ನಾವು ಹೊರಬಂದಂತೆ ಬಹಳಷ್ಟು ಜನ ಹೊರಬರುತ್ತಿದ್ದಾರೆ. ಇದಕ್ಕೆ ಕಾರಣ ಅಲ್ಲಿ ಉಸಿರುಕಟ್ಟಿಸುವ ವಾತಾವರಣವಿರುವುದೇ ಸಾಕ್ಷಿ ಎಂದು ಹೇಳಿದರು.

ನಾಳೆ ಏಳು ಮಂದಿ ಶಾಸಕರೂ ಮೈಸೂರಿನ ಸಮಾವೇಶದಲ್ಲಿ ರಾಹುಲ್‍ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಸೇರುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ