ಏನೇ ಆದರೂ ದೇವೇಗೌಡ ಅವರು ನನ್ನ ರಾಜಕೀಯ ಗುರುಗಳು: ಜಮೀರ್ ಅಹಮ್ಮದ್ ಖಾನ್

ಬೆಂಗಳೂರು, ಮಾ.24-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಂದೆಂದಿಗೂ ನನ್ನ ರಾಜಕೀಯ ಗುರುಗಳು ಎಂದು ಹೇಳಿರುವ ಜಮೀರ್ ಅಹಮ್ಮದ್ ಖಾನ್ ಅದೇ ಸಂದರ್ಭದಲ್ಲಿ ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2005ರಲ್ಲಿ ಉಪಚುನಾವಣೆ ನಡೆದಾಗ ದೇವೇಗೌಡರು ಖುದ್ದಾಗಿ ಬಂದು ಪ್ರಚಾರ ಮಾಡಿ ನನ್ನನ್ನು ಗೆಲ್ಲಿಸಿದರು. ನಂತರ ನಡೆದ ಚುನಾವಣೆಗಳಲ್ಲಿ ನಾನು ಯಾರನ್ನೂ ಕರೆಯಲಿಲ್ಲ. ನನ್ನಷ್ಟಕ್ಕೆ ನಾನೇ ಗೆದ್ದು ಬಂದಿದ್ದೇನೆ. ಏನೇ ಆದರೂ ದೇವೇಗೌಡ ಅವರು ನನ್ನ ರಾಜಕೀಯ ಗುರುಗಳು. ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ನಮ್ಮ ಮೇಲೆ ವಿಶ್ವಾಸ ಇಲ್ಲದೆ ಇದ್ದರೂ, ನಮಗೆ ಅವರ ಮೇಲೆ ಪ್ರೀತಿ ಇದೆ. ರಾಜಕೀಯವಾಗಿ ಪಕ್ಷಾಂತರ ಮಾಡುವುದು ಕಾಲಕಾಲಕ್ಕೆ ನಡೆದುಕೊಂಡು ಬಂದಿದೆ. ದಯವಿಟ್ಟು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ, ಹಗೆ ಸಾಧಿಸಬೇಡಿ ಎಂದು ಮನವಿ ಮಾಡಿದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 30 ಸ್ಥಾನವನ್ನೂ ದಾಟುವುದಿಲ್ಲ. ಒಂದು ವೇಳೆ 113 ಸ್ಥಾನ ಗಳಿಸಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಅಥವಾ ಚಾಮರಾಜಪೇಟೆಯಲ್ಲಿ ನನ್ನನ್ನು ಸೋಲಿಸಿದರೆ ನಾನೇ ನನ್ನ ತಲೆಯನ್ನು ಕಡಿದು ಮಾಧ್ಯಮದವರಿಗೆ ಕೊಡುತ್ತೇನೆ ಎಂದು ಜಮೀರ್ ಸವಾಲು ಹಾಕಿದರು.

2013ರ ವಿಧಾನಸಭೆ ಚುನಾವಣೆಯಲ್ಲಿ ನಾನು 66 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೆ. ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಪ್ರಚಾರಕ್ಕೆ ಕರೆಯದೆ ದೇವೇಗೌಡ ಅವರೇ ಚಾಮರಾಜಪೇಟೆ ಕ್ಷೇತ್ರದಲ್ಲಿ 11 ಸಭೆಗಳನ್ನು ಕುಮಾರಸ್ವಾಮಿ 4 ಸಭೆಗಳನ್ನು ಮಾಡಿದರು. ಚುನಾವಣೆಯ ಎಲ್ಲಾ ಕೆಲಸಗಳನ್ನು ಅವರೇ ನಿರ್ವಹಿಸಿದರು. ಅಂತಿಮವಾಗಿ ಚಾಮರಾಜಪೇಟೆಯಲ್ಲಿ ಜೆಡಿಎಸ್ ಗಳಿಸಿದ ವೋಟ್‍ಗಳು 540. ಇನ್ನು ಬಿಬಿಎಂಪಿ ಚುನಾವಣೆಯಲ್ಲಿ ನನ್ನ ಪರವಾಗಿ 57 ಸಾವಿರ ಮತಗಳು ಬಂದಿದ್ದವು. ಚಾಮರಾಜಪೇಟೆ ಕ್ಷೇತ್ರದ ಜನ ನನ್ನನ್ನು ಮನೆ ಮಗ ಎಂದು ಭಾವಿಸಿದ್ದಾರೆ. ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಕರ್ನಾಟಕದಲ್ಲಿರುವ ಮುಸ್ಲಿಂ ಅಭ್ಯರ್ಥಿಯನ್ನಷ್ಟೇ ಅಲ್ಲ, ದೇವೇಗೌಡರ ಆಪ್ತರಾಗಿರುವ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಕರೆ ತಂದು ನಿಲ್ಲಿಸಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.

ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಗಳಿದ್ದಾಗಲೆಲ್ಲ ಜೆಡಿಎಸ್ ನಾಯಕರು, ವಿಜಯ್ ಮಲ್ಯ, ರಾಮಸ್ವಾಮಿ, ಕುಪೇಂದ್ರರೆಡ್ಡಿಯವರಂತಹ ಉದ್ಯಮಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸೋಲುವ ಸನ್ನಿವೇಶದಲ್ಲಿ ಫಾರೂಕ್‍ನಂತಹ ಮುಸ್ಲಿಂ ಅಭ್ಯರ್ಥಿಯನ್ನು ಬಲಿಪಶು ಮಾಡಲಾಗುತ್ತಿದೆ. ಬಕ್ರೀದ್‍ಗೆ ಕುರಿಯನ್ನು ಒಂದೇ ಬಾರಿ ಬಲಿ ಕೊಡಲಾಗುತ್ತದೆ. ಆದರೆ ಜೆಡಿಎಸ್ ನಾಯಕರು ಫಾರೂಕ್‍ನನ್ನು ರಾಜ್ಯಸಭೆ ಚುನಾವಣೆಯಲ್ಲಿ ಎರಡು ಬಾರಿ ಬಲಿ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಅವರು ರಾಜಕೀಯವಾಗಿ ಯಾರು ಬೆಳೆಯುವುದನ್ನೂ ಸಹಿಸುವುದಿಲ್ಲ. ಖುದ್ದಾಗಿ ಸ್ವಂತ ಅಣ್ಣನ ಮಗ ಪ್ರಜ್ವಲ್ ರೇವಣ್ಣ ಅವರ ಬೆಳವಣಿಗೆಯನ್ನೇ ಸಹಿಸುತ್ತಿಲ್ಲ. ಪ್ರಜ್ವಲ್ ಒಳ್ಳೆಯ ನಾಯಕ ಸರಳ ವ್ಯಕ್ತಿ. ಆತನಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಲು ಕುಮಾರಸ್ವಾಮಿ ಹಿಂದೇಟು ಹಾಕುತ್ತಿದ್ದಾರೆ. ಇನ್ನು ನಮ್ಮಂತಹವರನ್ನು ಸಹಿಸುತ್ತಾರೆಯೇ? ನಾವು ಏಳು ಮಂದಿ ಸ್ವಂತ ಶಕ್ತಿಯನ್ನು ಸಂಪಾದಿಸಿಕೊಂಡಿದ್ದೆವು. ಅದನ್ನು ಸಹಿಸಲಾಗದೆ ದೇವೇಗೌಡರು ವ್ಯವಸ್ಥಿತವಾಗಿ ವ್ಯೂಹ ರಚಿಸಿ ಕುಮಾರಸ್ವಾಮಿಯವರಿಂದ ನಮ್ಮನ್ನು ಬೇರ್ಪಡಿಸಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಸಿದ್ದರಾಮಯ್ಯ, ಎಂ.ಪಿ.ಪ್ರಕಾಶ್,ಎಂ.ಸಿ.ನಾಣಯ್ಯರಂಥಹ ನಾಯಕರಿದ್ದಾಗ ಜೆಡಿಎಸ್ 58 ಸ್ಥಾನಗಳಿಸಿತ್ತು. ನಾವುಗಳೆಲ್ಲ ಇದ್ದಾಗ 40 ಸ್ಥಾನಕ್ಕೆ ಬಂದಿದ್ದೆವು. ಕುಮಾರಸ್ವಾಮಿ ಸ್ವಂತ ಬಲದ ಮೇಲೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಹೋದ ಕಡೆಯಲೆಲ್ಲ ಜನ ಸೇರುತ್ತಾರೆ ಎಂಬುದು ನಾಯಕತ್ವದ ಹೆಮ್ಮೆಯಲ್ಲ. ಕುಮಾರಸ್ವಾಮಿ ಬರುತ್ತಾರೆ ಎಂಬ ಕಾರಣಕ್ಕೆ ಸ್ಥಳೀಯ ನಾಯಕರು ಹಣ ಕೊಟ್ಟು ವಾಹನದ ವ್ಯವಸ್ಥೆ ಮಾಡಿ ಜನರನ್ನು ಕರೆತರುತ್ತಾರೆ. ನಿಜವಾದ ನಾಯಕತ್ವ ಪರೀಕ್ಷೆಯಾಗಬೇಕಾದರೆ ಯಾವುದೇ ವಾಹನ ವ್ಯವಸ್ಥೆ ಮಾಡದೆ, ಹಣ ನೀಡದೆ ಕುಮಾರಸ್ವಾಮಿ ಏಕಾಂಗಿಯಾಗಿ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮಾಡಲಿ. 5 ಸಾವಿರ ಮೇಲ್ಪಟ್ಟು ಜನ ಸೇರುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಏಳು ಮಂದಿ ಬಂಡಾಯಗಾರರಿಗೂ ಟಿಕೆಟ್ ನೀಡುವುದು ನೂರಕ್ಕೆ ನೂರರಷ್ಟು ಸತ್ಯ. ಕಾಂಗ್ರೆಸ್ ಕೊಟ್ಟ ಮಾತು ಎಂದಿಗೂ ತಪ್ಪುವುದಿಲ್ಲ. ಜೆಡಿಎಸ್ ಪಕ್ಷದಲ್ಲಿ ಸೂಟ್‍ಕೇಸ್ ತಂದರೆ ಸಾಕು ಮಾತುಗಳು ಬದಲಾವಣೆಯಾಗುತ್ತವೆ. ಕಾಂಗ್ರೆಸ್‍ನಲ್ಲಿ ಆ ಪರಿಸ್ಥಿತಿ ಇಲ್ಲ. ನಮಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಜಮೀರ್ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ