ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಹಾಗೂ ಪ್ರಚಾರದ ಕಾರ್ಯತಂತ್ರ ಕುರಿತಂತೆ ಮಹತ್ವದ ಸಭೆ

ಬೆಂಗಳೂರು, ಮಾ.24- ಒಂದೆಡೆ ಕೇಂದ್ರ ಚುನಾವಣಾ ಆಯೋಗ ಮುಹೂರ್ತ ನಿಗದಿಪಡಿಸಲು ಸಜ್ಜಾಗಿದ್ದರೆ ಇತ್ತ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಚಾರದ ಕಾರ್ಯತಂತ್ರ ಕುರಿತಂತೆ ಇಂದು ಮಹತ್ವದ ಸಭೆ ನಡೆಸಲಿದೆ.

ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಈ ಸಭೆಗೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳೀಧರ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಪಕ್ಷದ ಮುಖಂಡರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಇಲ್ಲವೇ ಅದಕ್ಕೂ ಮುನ್ನವೇ ವಿಧಾನಸಭೆ ಚುನಾವಣೆಗೆ ಆಯೋಗ ದಿನಾಂಕ ನಿಗದಿಪಡಿಸುವುದು ಬಹುತೇಕ ಖಚಿತವಾಗಿದೆ.
ಇದರ ಸುಳಿವು ಅರಿತಿರುವ ಬಿಜೆಪಿ, ಪಕ್ಷದ ಪ್ರಣಾಳಿಕೆ ಸಿದ್ಧ್ದಪಡಿಸುವುದು, ಅಭ್ಯರ್ಥಿಗಳ ಆಯ್ಕೆ, ಯಾರು, ಯಾವ ಭಾಗದಲ್ಲಿ ಪ್ರಚಾರ ನಡೆಸಬೇಕು ಸೇರಿದಂತೆ ಮತ್ತಿತರ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಯಲಿದೆ.

ರಾಜ್ಯಸಭೆ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಇನ್ನು ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಉಳಿದಿರುವ ದಿನಗಳಲ್ಲಿ ಟಿಕೆಟ್ ಖಚಿತವಾಗಿರುವ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲೇ ಉಳಿದು ಸರ್ಕಾರದ ವಿರುದ್ಧ ಪ್ರತಿಭಟನೆ, ಕೇಂದ್ರ ಸರ್ಕಾರದ ಸಾಧನೆಗಳ ಮನವರಿಕೆ ಮಾಡುವ ಕುರಿತು ಸಲಹೆ, ಸೂಚನೆ ನೀಡಲಿದ್ದಾರೆ.

ಈಗಾಗಲೆ ರಾಜ್ಯದ ಸುಮಾರು 150ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಾಗಿದೆ. ಆಯೋಗ ದಿನಾಂಕವನ್ನು ಘೋಷಣೆ ಮಾಡುತ್ತಿದ್ದಂತೆ ಪಟ್ಟಿಯು ಪ್ರಕಟವಾಗಲಿದೆ.

ಈಗಾಗಲೇ ಸಂಭವನೀಯ ಅಭ್ಯರ್ಥಿಗಳಿಗೆ ಮೌಖಿಕವಾಗಿ ಪಕ್ಷದ ವರಿಷ್ಠರು ಸೂಚನೆ ನೀಡಿದ್ದು, ಚುನಾವಣೆ ಎದುರಿಸಲು ಸಜ್ಜಾಗಬೇಕೆಂಬ ಸಂದೇಶ ರವಾನಿಸಿದ್ದಾರೆ.

ಇಂದು ನಡೆಯಲಿರುವ ಸಭೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮುಖಂಡರಾದ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರ ರಾಜ್ಯ ಪ್ರವಾಸದ ವೇಳಾ ಪಟ್ಟಿಯು ಅಂತಿಮಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ