ಶಿಮ್ಲಾ, ಮಾ.23-ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಸ್ವಸ್ಥರಾಗಿದ್ದು, ಅವರಿಗೆ ಚಿಕಿತ್ಸೆ ನೀಡಲು ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಿಂದ ನವದೆಹಲಿಗೆ ಕರೆದೊಯ್ಯಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.
ಶಿಮ್ಲಾದಿಂದ 15 ಕಿ.ಮೀ. ದೂರದಲ್ಲಿರುವ ಛಾರಬ್ರಾದಲ್ಲಿ ನಿರ್ಮಾಣವಾಗುತ್ತಿರುವ ತಮ್ಮ ಮನೆಯನ್ನು ವೀಕ್ಷಿಸಲು ಸೋನಿಯಾ ಅವರು ತಮ್ಮ ಪುತ್ರಿ ಪ್ರಿಯಾಂಕಾರೊಂದಿಗೆ ಆಗಮಿಸಿದ್ದರು. ನಿನ್ನೆ ಮಧ್ಯರಾತ್ರಿ ಅವರು ಅಸ್ವಸ್ಥಗೊಂಡರು. ಅವರಿಗೆ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಇಂದಿರಾಗಾಂಧಿ ಮೆಡಿಕಲ್ ಕಾಲೇಜು(ಐಜಿಎಂಸಿ) ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ. ರಮೇಶ್ ಚಂದ್ ಅವರಿಗೆ ಕರೆ ಮಾಡಿ ಅಂಬ್ಯುಲೆನ್ಸ್ ವ್ಯವಸ್ಥೆಗೊಳಿಸುವಂತೆ ತಿಳಿಸಿದರು.
ಆದರೆ, ಸೋನಿಯಾ ತಮ್ಮದೇ ಕಾರಿನಲ್ಲಿ ಅಲ್ಲಿಂದ ತೆರಳಿದರು. ವೈದ್ಯರ ತಂಡದೊಂದಿಗೆ ಅಂಬ್ಯುಲೆನ್ಸ್ ಮಾರ್ಗದುದ್ದಕ್ಕೂ ಹಿಂಬಾಲಿಸಿತು. ದೆಹಲಿಗೆ ತೆರಳುವ ಮಾರ್ಗದ ಮಧ್ಯೆ ಪಂಚಕುಲದಲ್ಲಿ ಅವರು ಕೆಲಕಾಲ ವಿಶ್ರಾಂತಿ ಪಡೆದರು ಎಂದು ಡಾ. ರಮೇಶ್ ಚಂದ್ ತಿಳಿಸಿದ್ದಾರೆ. ಚಂಡೀಗಢದವರೆಗೂ ಜೊತೆಗಿದ್ದ ಡಾ. ರಮೇಶ್, ಸೋನಿಯಾ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.